Previous ಮಾರೇಶ್ವರೊಡೆಯ ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ Next

ಮುಕ್ತಾಯಕ್ಕ

*
ಅಂಕಿತ: ಅಜಗಣ್ಣತಂದೆ

ಅಹುದಹುದು ಶಿವಶರಣರ ಮಹಿಮೆ ಆರಿಗೆಯೂ ಕಾಣಬಾರದು.
ಕಬ್ಬುನ ಉಂಡ ನೀರಿನಂತೆ, ಕಬ್ಬಿಸಿಲುಂಡ ಅರಿಸಿನದಂತೆ,
ಉರಿಯೊಳಡಗಿದ ಕರ್ಪುರದಂತೆ, ಬಯಲನಪ್ಪಿದ ವಾಯುವಿನಂತೆ
ಇಪ್ಪ ನಿಲವು ನುಡಿದು ಹೇಳಿಹೆನೆಂಬ ಮಾತಿಂಗೆ ಅಳವಡುವುದೆ ?
ಅರಿವಡೆ ಮತಿಯಿಲ್ಲ, ನೆನೆವಡೆ ಮನವಿಲ್ಲ
ಎನ್ನ ಅಜಗಣ್ಣ ತಂದೆಯನೊಳಕೊಂಡಿಪ್ಪ ನಿಮ್ಮ ಮಹಿಮೆಗೆ
ನಮೋ ನಮೋ ಎನುತಿರ್ದೆನು./೧೧೦೧ [1]

ಈಕೆ ಅನುಭಾವಿಕ ನೆಲೆಯ ತುಂಬ ಎತ್ತರದ ಶರಣೆ. ಈಕೆಯ ತವರೂರು ಲಕ್ಕುಂಡಿ, ಗಂಡನೂರು ಮಸಳಿಕಲ್ಲು. ಶರಣ ಅಜಗಣ್ಣ ಈಕೆಯ ಸಹೋದರ ಮತ್ತು ಗುರು. ಈತನ ಲಿಂಗೈಕ್ಯ ಸಂದರ್ಭದಲ್ಲಿ ದು:ಖಿಯಾದ ಈಕೆಯನ್ನು ಅಲ್ಲಮಪ್ರಭು ಅರಿವಿನ ಕಣ್ಣು ತೆರೆಸುವ ಮೂಲಕ ಸಾಂತ್ವನಪಡಿಸುತ್ತಾನೆ. ಕಾಲ-೧೧೬೦.
'ಅಜಗಣ್ಣ ತಂದೆ' ಅಂಕಿತದಲ್ಲಿ ರಚಿಸಿದ ೩೨ ವಚನಗಳು ದೊರೆತಿವೆ. ಇವೆಲ್ಲ ಅಣ್ಣನ ಅಗಲಿಕೆಯ ಸಂದರ್ಭದಲ್ಲಿ ವ್ಯಕ್ತಪಡಿಸಿದ ಶೋಕಗೀತೆಗಳಂತಿವೆ. ಅಲ್ಲಮಪ್ರಭುವಿನ ಜೊತೆ ನಡೆಸಿದ ಆಧ್ಯಾತ್ಮ ಸಂವಾದದಲ್ಲಿ ಮೂಡಿ ಬಂದ ಅನುಭಾವ ಗೀತೆಗಳೆನಿಸಿವೆ. ಶೂನ್ಯ ಸಂಪಾದನೆಯಲ್ಲಿ ಮೂಡಿದ ಈ ಸಂವಾದ ತುಂಬ ಪ್ರಸಿದ್ಧವಾಗಿದೆ.

ಎನ್ನ ಭಾವಕ್ಕೆ ಗುರುವಾದನಯ್ಯಾ ಬಸವಣ್ಣನು.
ಎನ್ನ ನೋಟಕ್ಕೆ ಲಿಂಗವಾದನಯ್ಯಾ ಚೆನ್ನಬಸವಣ್ಣನು.
ಎನ್ನ ಜ್ಞಾನಕ್ಕೆ ಜಂಗಮವಾದನಯ್ಯಾ ಪ್ರಭುದೇವರು.
ಎನ್ನ ಪರಿಣಾಮಕ್ಕೆ ಪ್ರಸಾದವಾದನಯ್ಯಾ ಮರುಳಶಂಕರದೇವರು.
ಎನ್ನ ಹೃದಯಕ್ಕೆ ಮಂತ್ರವಾದನಯ್ಯಾ ಮಡಿವಾಳಯ್ಯನು.
ಇಂತೀ ಐವರ ಕಾರುಣ್ಯಪ್ರಸಾದವ ಕೊಂಡು
ಬದುಕಿದೆನಯ್ಯಾ ಅಜಗಣ್ಣತಂದೆ. /೧೧೦೬ [1]

ಈಕೆಯ ಸೋದರ ಅಜಗಣ್ಣನೂ ವಚನಕಾರನಾಗಿದ್ದು ಅವನ ಅಂಕಿತ ಮಹಾಘನ ಸೋಮೇಶ್ವರಾ' ಎಂಬುದಾಗಿದೆ. ಕನ್ನಡದ ಶ್ರೇಷ್ಠ ಅನುಭಾವಿ ಅಲ್ಲಮನ ಜೊತೆಗಿನ ಸಂವಾದವನ್ನು ಗಮನಿಸಿದಾಗ ಬಹುದೊಡ್ಡಜ್ಞಾನಿ ಎಂದು ವೇದ್ಯವಾಗುತ್ತದೆ.

ಗುರುವಚನದಿಂದಲ್ಲದೆ ಲಿಂಗವನರಿಯಬಾರದು.
ಗುರುವಚನದಿಂದಲ್ಲದೆ ಜಂಗಮವನರಿಯಬಾರದು.
ಗುರುವಚನದಿಂದಲ್ಲದೆ ಪ್ರಸಾದವನರಿಯಬಾರದು.
ಗುರುವಚನದಿಂದಲ್ಲದೆ ತನ್ನ ತಾನರಿಯಬಾರದು.
ಹಿಂದಣ ಜನ್ಮದಲ್ಲಿ ಲಿಂಗವ ಪೂಜಿಸಿ ಇಂದು ಜ್ಞಾನೋದಯವಾದಡೆ
ಗುರುವಿಲ್ಲದ ಮುನ್ನ ಆಯಿತ್ತೆನ್ನಬಹುದೆ ?
ತನ್ನಲ್ಲಿ ತಾನು ಸನ್ನಹಿತನಾದೆಹೆನೆಂದಡೆ ಗುರುವಿಲ್ಲದೆ ಆಗದು ಕೇಳಾ.
ಎನ್ನ ಅಜಗಣ್ಣನೆಂಬ ಗುರುವಿಲ್ಲದೆ
ಆರೂಡಿಯ ಕೂಟ ಸಮನಿಸದು ಕೇಳಾ. /೧೧೧೧ [1]

೧೧೩೧
ಸುಮ್ಮನೇಕೆ ದಿನಕಳೆವಿರಿ, ಸುಮ್ಮನೇಕೆ ಹೊತ್ತುಗಳೆವಿರಿ ?
ಸುಮ್ಮನೇಕೆ ಹೊತ್ತಗಳೆವಿರಿ ಸ್ವಾಮಿಗಳಿರಾ ?
ಮಾಡ ಬನ್ನಿ ದಿನ ಶಿವರಾತ್ರಿಯ, ಕೇಳ ಬನ್ನಿ ಶಿವಾನುಭವವ,
ನೋಡ ಬನ್ನಿ ಅಜಗಣ್ಣನಿರವ ಬಸವಣ್ಣತಂದೆ.

ನುಡಿಯಲುಬಾರದು ಕೆಟ್ಟನುಡಿಗಳ.
ನಡೆಯಲುಬಾರದು ಕೆಟ್ಟನಡೆಗಳ.
ನುಡಿದಡೇನು ನುಡಿಯದಿರ್ದಡೇನು ?
ಹಿಡಿದವ್ರತ ಬಿಡದಿರಲು, ಅದೆ ಮಹಾಜ್ಞಾನದಾಚರಣೆ
ಎಂಬೆನು ಅಜಗಣ್ಣ ತಂದೆ. /೧೧೨೨ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಮಾರೇಶ್ವರೊಡೆಯ ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ Next