ಮಲ್ಲಿಕಾರ್ಜುನ ಪಂಡಿತಾರಾಧ್ಯ

*
ಅಂಕಿತ: ಶ್ರೀ ಮಲ್ಲಿಕಾರ್ಜುನ

ಆರನಾದಡೂ ಅಯ್ಯಾ ಎಂದೆನಲಾರೆ.
ಆರನಾದಡೂ ದೇವಾ ಎಂದೆನಲಾರೆ.
ನೀನು ಜಗಭರಿತನಾಗಿ
ನಾನು ನಿಮ್ಮನೇ ಅಯ್ಯಾ ಎಂಬೆ.
ಎನಗಾರೂ ಇಲ್ಲದ ಕಾರಣ ನೀವೇ ಶರಣೆಂಬೆ, ಶ್ರೀಮಲ್ಲಿಕಾರ್ಜುನಾ. /೧೧೩೮ [1]

ಆಂಧ್ರ ಮೂಲದ ಆರಾಧ್ಯ ಪರಂಪರೆಗೆ ಸೇರಿದ ಈತನ ಕಾಲ ೧೧೬೦. ಬಸವಣ್ಣನವರು ಕಳಿಸಿದ ಭಸಿತ ಧಾರಣೆಯಿಂದ ಕನ್ನಡ ಕಲಿತನೆಂದೂ, ಬಸವಣ್ಣನವರನ್ನು ಕಾಣಲು ಹೊರಟ ಈತನಿಗೆ ಮಾರ್ಗಮಧ್ಯದಲ್ಲಿಯೇ ಅವರು ಐಕ್ಯರಾದರೆಂಬ ವಿಷಯ ತಿಳಿದು ತನ್ನ ಇಷ್ಟಲಿಂಗದಲ್ಲಿಯೇ ಆ ದೃಶ್ಯವನ್ನು ಕಂಡು ತೃಪ್ತಿಪಟ್ಟನೆಂದೂ ಕಥೆ ಇದೆ. 'ಶ್ರೀ ಮಲ್ಲಿಕಾರ್ಜುನ' ಅಂಕಿತದಲ್ಲಿ ಈತನ ೧೩ ವಚನಗಳು ದೊರೆಯುತ್ತವೆ. ದೇಹ ಅಸ್ಥಿರ; ಇರುವಾಗಲೇ ಅದನ್ನು ಶಿವಧ್ಯಾನ - ಶಿವಪೂಜೆಯಲ್ಲಿ ತೊಡಗಿಸಬೇಕು, ಪಾಪ-ಪುಣ್ಯಗಳ ಪ್ರಜ್ಞೆ ಜೀವಿಯಲ್ಲಿ ಸದಾ ಜಾಗೃತವಾಗಿರಬೇಕು ಎಂಬಂಥ ನೀತಿಪರ ನುಡಿಗಳು ಈತನಲ್ಲಿ ಆಧಿಕ. ಸರಳ ಭಾಷೆ ನೇರ ನಿರೂಪಣೆಯಿಂದ ವಚನಗಳು ಗಮನ ಸೆಳೆಯುತ್ತವೆ.

ಅಜ್ಞಾನಿಗಳಪ್ಪವರ ಎನ್ನವರೆಂದಡೆ,
ಅಘಟಿತ ನಿಮ್ಮಾಣೆ, ಕೇಳಾ ತಂದೆ.
ಕತರ್ೃವೆ ಎನ್ನ ಮನದಲ್ಲಿ ಬುದ್ಧಿಗೊಡಾ
ಎಂದು ಉತ್ತರಗೊಡುವ ತಂದೆ.
ನಿನಗೆ ಶರಣೆಂದು ನಂಬಿದವರನು,
ಎನ್ನವರೆಂಬೆನು ಕೇಳಾ, ಶ್ರೀಮಲ್ಲಿಕಾರ್ಜುನ ತಂದೆ. /೧೧೩೭ [1]

ಯಾರು ಯಾರನ್ನೋ `ಅಯ್ಯಾ', `ದೇವಾ' ಎನ್ನಲಾರೆ, ಜಗಭರಿತನಾದ ಪರಮಾತ್ಮನನ್ನು ಅಯ್ಯಾ ಎನ್ನುವೆ. ತನಗೆ ಯಾರೂ ಇಲ್ಲವಾದ ಕಾರಣ, ಆ ಪರಮಾತ್ಮನಿಗೆ ಶರಣುಹೋಗುವೆ ಎಂದಿರುವನು. ಧನ, ಯೌವ್ವನ, ಪ್ರಾಣ - ಇವೆಲ್ಲವೂ ಅಶಾಶ್ವತ. ಅದನ್ನು ತಿಳಿದು ಶ್ರೀ ಮಲ್ಲಿಕಾರ್ಜುನನನ್ನು ನೆನೆ ಎನ್ನುವನು. ಆದ್ರ್ರ ಭಕ್ತಿ, ಭಾವ ಇವನ ವಚನಗಳಲ್ಲಿದೆ

ಗುರುವೆ, ಇಹ-ಪರ ಗುರುವೆ, ಗುರುವೆ ಕರುಣಾಕರನೆ,
ಗುರುವೆ, ಶುದ್ಧಾತ್ಮನೆ ನಿರ್ಮಳಾಂಗನೆ.
ಗುರುವೆ, ನಿನ್ನಂತೆ ಎನ್ನುವನು ಮಾಡಿದ
ಪರಮ ಗುರುವೆ, ನೀನು ಶ್ರೀ ಮಲ್ಲಿಕಾರ್ಜುನಾ. /೧೧೪೨ [1]

ನಾದ ಬಿಂದುವಿನಲ್ಲಿ ಆದಿ ಅಕ್ಷರದ್ವಯವ
ನೈದಿಸಿದ ಗುರು ಬಸವಣ್ಣನೇ
ಆಮೋದದಲಿ ಕೂಟ.
ಆನಂದ ಸಾನಂದ ತಾನೊಂದು ರೂಪಾಗಿ
ಸ್ವಾನುಭಾವದ ದೀಕ್ಷಾಪನ್ನವಯವಾ
ಭಾನುಮಂಡಲದಲ್ಲಿ ತಾರೆ ಮಧುಕರನೊಪ್ಪೆ
ಅನ್ಯಯ (?) ನಿನ್ನ ಗುಣವರಿಯಲ್ಕೆ
ಚೆನ್ನಬಸವ ಅಯ್ಯನಾದನೆನಗೆ ಶ್ರೀಮಲ್ಲಿಕಾರ್ಜುನಾ. /೧೧೪೫ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previousಮರುಳಶಂಕರದೇವಮಳುಬಾವಿಯ ಸೋಮಣ್ಣNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.