Previous ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ ಹುಂಜಿನ ಕಾಳಗದ ದಾಸಯ್ಯ Next

ಹಾವಿನಾಳ ಕಲ್ಲಯ್ಯ

*
ಅಂಕಿತ: ಮಹಾಲಿಂಗ ಕಲ್ಲೇಶ್ವರ
ಕಾಯಕ: ಅಕ್ಕಸಾಲಿಗ

೧೦೯೭
ಅಯ್ಯಾ ವಿಪ್ರರೆಂಬವರು ಮಾತಂಗಿಯ ಮಕ್ಕಳೆಂಬುದಕ್ಕೆ
ಇದೇ ದೃಷ್ಟ.
ಮತ್ತೆ ವಿಚಾರಿಸಿ ಕೇಳಿದಡೆ ಹೇಳುವೆನು :
ಬಡಗಿ ಮಾಚಲದೇವಿಯ ಕುಲಜೆಯ ಮಾಡಿಹೆವೆಂದು,
ಕಡಿದು ಹಂಚಿ ತಿಂದರಂದು ಗೋಮಾಂಸವ.
ಬಿಡದೆ ಅತ್ಯಂತ ಉಜ್ಞಕ್ರಮವೆಂದು ಹೋತನ ಕೊಂದು,
ಚಿಕ್ಕ ಚಿಕ್ಕವಾಗಿ ಕಡಿಮೆ ಭಕ್ಷಿಸಿದುದ ಕಂಡು,
ಮಿಕ್ಕ ಹದಿನೇಳುಜಾತಿ ವಿಪ್ರರ ಕೈಯಲನುಗ್ರಹವ ಪಡೆದು,
ತಿನಕಲಿತರಯ್ಯಾ.
ಶ್ವಪಚೋಪಿ ವಿಪ್ರ ಸಮೋ ಜಾತಿಭೇದಂ ನ ಕಾರಯೇತ್|
ಅಜಹತ್ಯೋಪದೇಶೀನಾಂ ವರ್ಣನಾಂ ಬ್ರಾಹ್ಮಣೋ ಗುರುಃ||
ಎಂಬುದಾಗಿ,
ಕಿರಿಕಿರಿದ ತಿಂದ ದ್ವಿಜರು ನೆರೆದು ವೈಕುಂಠಕ್ಕೆ ಹೋಹರೆ?
ನೆರೆಯಲೊಂದ ತಿಂದ ವ್ಯಾಧ ದ್ವಿಜರಿಂದಧಿಕ.
`ಭರ್ಗೋ ದೇವಸ್ಯ ಧೀಮಹಿ' ಎಂಬ ದಿವ್ಯಮಂತ್ರವನೋದಿ,
ನಿರ್ಬುದ್ಧಿಯಾದಿರಿ.
ಶಿವಪಥವನರಿಯದೆ ಬರುದೊರೆವೋದಿರಿ.
ಆದಡೀ ನರಕಕ್ಕೆ ಭಾಜನವಾದಿರಿ.
ಇದು ಕಾರಣ, ಮಹಾಲಿಂಗ ಕಲ್ಲೇಶ್ವರಾ,
ನಿಮ್ಮ ಶರಣಂಗೆ ಸರಿಯೆ ಜಗದನ್ಯಾಯಿಗಳು.

ಅಕ್ಕಸಾಲಿಗ ಮನೆತನಕ್ಕೆ ಸೇರಿದ ಈತನ ಜನ್ಮಸ್ಥಳ ವಿಜಾಪುರ ಜಿಲ್ಲೆಯ ಹಾವಿನಾಳು ಅಲ್ಲಿನ ಕಲ್ಲಿನಾಥ ಆರಾಧ್ಯದೈವ. ತಂದೆ-ಶಿವನಯ್ಯ, ತಾಯಿ-ಸೊಮವ್ವೆ. ಕಾಲ-೧೧೬೦. ಹರಿಹರನ ರಗಳೆಯಲ್ಲಿ ಈತ ಸತ್ತ ಸರ್ಪವನ್ನು ಬದುಕಿಸಿದ, ನಾಯಿಯಿಂದ ವೇದವನ್ನು ಓದಿಸಿದ, ಪರಕಾಯ ಪ್ರವೇಶಮಾಡಿದ ಎಂಬ ಪವಾಡಾತ್ಮಕ ಘಟನೆಗಳು ಉಕ್ತವಾಗಿವೆ. ರೇವಣಸಿದ್ಧ, ರುದ್ರಮುನಿ, ಸಿದ್ಧರಾಮರ ಸಂಪರ್ಕದಿಂದ ಶರಣನಾದ ಈತ, ಕಲ್ಯಾಣಕ್ಕೆ ಬಂದು ಅನುಭಾವ ಗೋಷ್ಠಿಗಳಲ್ಲಿ ಭಾಗವಹಿಸಿದ. ಕಲ್ಯಾಣಕ್ರಾಂತಿಯ ನಂತರ ಸೊಲ್ಲಾಪುರಕ್ಕೆ ತೆರಳಿ, ಅಲ್ಲಿಯೇ ಐಕ್ಯನಾದ. ಈತನ ಸಮಾಧಿ ಸಿದ್ಧರಾಮೇಶ್ವರ ದೇವಾಲಯದ ಪ್ರಾಕಾರದಲ್ಲಿದೆ.

೧೧೭೭
ವೇದವನೋದಿದಡೇನು ? ಶಾಸ್ತ್ರಪುರಾಣಾಗಮಂಗಳ ಕೇಳಿದಡೇನು ?
ಗುರುಕಾರುಣ್ಯವಿಲ್ಲದವನು ಲಿಂಗವ ಮುಟ್ಟಿ ಪೂಜಿಸಲಾಗದು.
ಜಪತಪಧ್ಯಾನ ವಿಭೂತಿ ರುದ್ರಾಕ್ಷಿಯ ಧರಿಸಿದಡೇನು ?
ಅವನು ಪಂಚಮಹಾಪಾತಕನು, ಅವನ ಮುಖವ ನೋಡಲಾಗದು.
ಇದನರಿದು ಗುರುಕರುಣವಿಡಿದು ಮಾಡುವ ಪೂಜೆಯೇ ಶಿವಂಗೆ ಪ್ರೀತಿ.
ಇದನರಿಯದೆ ಗುರುಕರುಣವಿಲ್ಲದವ ಶಿವಲಿಂಗಪೂಜೆಯ ಮಾಡಿದನಾದಡೆ,
ಅಘೋರನರಕ ತಪ್ಪದು, ಮಹಾಲಿಂಗ ಕಲ್ಲೇಶ್ವರಾ.

'ಮಹಾಲಿಂಗ ಕಲ್ಲೇಶ್ವರ' ಅಂಕಿತದಲ್ಲಿ ಈತ ರಚಿಸಿದ ೧೦೩ ವಚನಗಳು ದೊರೆತಿದ್ದು, ಅವುಗಳಲ್ಲಿ ಭಕ್ತಿನಿಷ್ಠೆ, ಶರಣತತ್ವ ವಿವೇಚನೆ, ಪರಮತ ಖಂಡನೆ, ನೀತಿ ಭೋಧೆ, ಆತ್ಮನಿರೀಕ್ಷಣೆ, ಶರಣಸ್ತುತಿ ಮೊದಲಾದವು ಪ್ರತಿಪಾದನೆಗೊಂಡಿವೆ. ಅಷ್ಟಾವರಣ, ಲಿಂಗಾಂಗ ಸಾಮರಸ್ಯ, ಶಿವಭಕ್ತಿ, ಶಿವಶರಣರ ನಿಷ್ಠೆ, ನಿಷ್ಕಾಮ ಸೇವೆ, ಅನುಭಾವ - ಇವೇ ಮೊದಲಾದ ವಿಷಯಗಳ ಪ್ರಸ್ತಾಪ ವಚನಗಳಲ್ಲಿ ಬಂದಿವೆ

೧೧೮೪
ಶ್ರೀಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ,
ಹಸ್ತಮಸ್ತಕಸಂಯೋಗಕಾಲದಲ್ಲಿ,
ಪಂಚಕಳಶದ ನಿರ್ಮಲ ಜಲವ ತನ್ನ ಕರುಣ ಜಲವ ಮಾಡಿ,
ಆತನ ಜನ್ಮದ ಮೇಲಿಗೆಯ ಕಳೆಯಲು,
ತಾ ನಿರ್ಮಲನಾಗಿ ಲಿಂಗವ ಗ್ರಹಿಸಿದಲ್ಲಿ,
ಲಿಂಗಕ್ಕೆ ಮಜ್ಜನಕ್ಕೆರೆಯತೊಡಗಿ, ಮಜ್ಜನೋದಕವನರಿದೆ.
ಲಿಂಗಸ್ಪರುಶನದಿಂದ ಪಾದೋದಕವನರಿದೆ.
ಲಿಂಗಾರ್ಪಿತ ಭೋಗೋಪಭೋಗದಲ್ಲಿ ಅರ್ಪಿತ ಪ್ರಸಾದೋದಕವನರಿದೆ.
ಅರಿದು, ಅನ್ಯೋದಕವ ಮರದು, ನಿಮ್ಮಲ್ಲಿ ತದ್ಗತನಾಗಿರ್ದೆನಯ್ಯಾ,
ಮಹಾಲಿಂಗ ಕಲ್ಲೇಶ್ವರಾ.

೧೧೫೯
ಬರಿಯಜ್ಞಾನಿಗಳಾದವರು ಅಂಗದ ಬಲದಲ್ಲಿ ನುಡಿವರು.
ಲಿಂಗಾನುಭಾವಿಗಳು ಲಿಂಗದ ಬಲದಲ್ಲಿ ನುಡಿವರು.
ಜ್ಞಾನಿಗಳಲ್ಲದ ಸುಜ್ಞಾನಿಗಳಲ್ಲದವರು,
ಗಂಡನಿಲ್ಲದ ಮುಂಡೆಯರು, ಹಲಬರನುರುವಂತೆ,
ಹಿಂದನರಿಯದೆ ನುಡಿವರು, ಮುಂದನರಿಯದೆ ಅನುಭಾವವ ಮಾಡುವರು.
ಸದ್ಭಕ್ತರ ನುಡಿಗಳು ಲಿಂಗದ ನುಡಿಗಳು.
ಬರಿಯಜ್ಞಾನಿಗಳ ನುಡಿಗಳು ಗಾಳಿಯ ಶಬ್ದಂಗಳು.
ಮತಿಗೆಟ್ಟು, ಅವಗತಿಯಲ್ಲಿ ಕಾಲೂರಿ, ಆಯತಗೆಟ್ಟು
ನಾಯನಡೆಯಲ್ಲಿ ನಡೆವರು.
ಅವರು ಅನುಭಾವಿಗಳಪ್ಪರೇ ? ಅಲ್ಲಲ್ಲ.
ಆದೆಂತೆಂದಡೆ :
ಸುಜ್ಞಾನಿಗಳಾದಡೆ, ಕಾಮವೆ ಪ್ರಾಣವಾಗಿಹರೆ ? ಅನ್ನವೆ ಜ್ಞಾನವಾಗಿಹರೆ ?
ವರುಣನ ಹೊದಿಕೆಯನೆ ಹೊದೆದು,
ಚಂದ್ರಮನ ತೆರೆಯಲೊರಗಿ,
ಪರದಾರಕ್ಕೆ ಕೈಯ ನೀಡುವರೆ, ಶರಣಾಗುವರೆ ?
ಇಂತವರಲ್ಲಯ್ಯ ನಮ್ಮ ಶರಣರುಗಳು.
ಇವರುಗಳು ಪಾತಕಿಗಳು, ಆಸೆಯ ಸಮುದ್ರರು,
ಅಂಗಶೃಂಗಾರಿಗಳು, ಭವಭಾರಿ ಜೀವಿಗಳು.
ಇವರೆಂತು ಸರಿಯಪ್ಪರಯ್ಯ, ಲಿಂಗಾನುಭವಿಗಳಿಗೆ ?
ಸರ್ವಾಂಗಲಿಂಗಿಗಳಾಗಿರ್ದ ಮಹಾನುಭಾವಿಗಳ ನಿಲುವನು,
ಮಹಾಲಿಂಗ ಕಲ್ಲೇಶ್ವರ ಬಲ್ಲನಲ್ಲದೆ, ತೂತಜ್ಞಾನಿಗಳೆತ್ತ ಬಲ್ಲರಯ್ಯ.


*
Previous ಹಾದರಕಾಯಕದ ಮಾರಯ್ಯಗಳ ಪುಣ್ಯಸ್ತ್ರೀ ಗಂಗಮ್ಮ ಹುಂಜಿನ ಕಾಳಗದ ದಾಸಯ್ಯ Next