*
ಅಂಕಿತ:
|
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ ಸಾಕ್ಷಿಯಾಗಿ
|
೫೪೬
ಅಂದಿನಕಾಲದ ಹನುಮ ಲಂಕೆಯ ಹಾರಿದನೆಂದು
ಇಂದಿನಕಾಲದ ಕಪಿ ಕಟ್ಟೆಯ ಹಾರುವಂತೆ,
ಅರಸುವೆಣ್ಣು ಉಪ್ಪರಿಗೆಯನೇರಿದಳೆಂದು
ತೊತ್ತು ತಿಪ್ಪೆಯನೇರುವಂತೆ,
ಕೊಮಾರ ಕುದುರೆಯನೇರಿದನೆಂದು
ಕೋಡಗ ಕುನ್ನಿಯನೇರುವಂತೆ,
ಆನೆ ಮದಸೊಕ್ಕಿ ಸೋಮಬೀದಿಯ ಸೂರೆಮಾಡಿತೆಂದು
ಆಡು ಮದಸೊಕ್ಕಿ ಬೇಡಗೇರಿಯ ಹೊಕ್ಕು ಕೊರಳ ಮುರಿಸಿಕೊಂಬಂತೆ,
ಉರದಮೇಲಣ ಗಂಡನ ಬಿಟ್ಟು
ಪರವೂರ ಮಿಂಡನ ಕೊಂಡಾಡುವ ಮಿಂಡಿನಾರಿಯಂತೆ
ಕಂಡಕಂಡುದ ಪೂಜಿಸುವ ಭಂಡಮುಂಡೆ
ಮೂಕೊರೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ನಗರದ ಕಲ್ಮಠದ ಸ್ವಾಮಿಯಾಗಿದ್ದ ಈತ ನಿಡುಮಾಮಿಡಿ ಪೀಠ ಪರಂಪರೆಗೆ ಸೇರಿದವನು.
ಪಟ್ಟು ಕಂಥೆಯ ಚೆನ್ನೆಬಸವೇಶ್ವರ ಈತನ ಗುರು; ಕಾಲ - ೧೭೦೦. ಅ೦ಕಿತ- ಅಖ೦ಡ ಪರಿಪೂರ್ಣ ಘನಲಿಂಗ ಗುರು
ಚೆನ್ನಬಸವೇಶ್ವರ. ೯೯ ವಚನಗಳು ದೊರೆತಿವೆ. ಅವುಗಳಿಗೆ 'ಚಿತ್ತ ಸದ್ಗತಿಯ ವಚನ' ಎ೦ದು ಕರೆದಿದ್ದಾನೆ.
ಗುರುಸ್ತುತಿ, ಅಷ್ಟಾವರಣದ ಮಹತಿಯನ್ನು, ಜೊತೆಗೆ ಸ್ಥಾವರಲಿಂಗ ಪೂಜಕರು, ತಿಥಿವಾರ ನೋಡುವವರು, ಡಾಂಭಿಕ
ಭಕ್ತರು ಮತ್ತು ದುರಾಚಾರಿಗಳ ಟೀಕೆಯನ್ನು ಮಾಡಲಾಗಿದೆ. ಪ್ರಾದೇಶಿಕ ಭಾಷೆಯ ಬಳಕೆ, ಸಹಜವಾದ ದೃಷ್ಟಾಂತಗಳು,
ಬಿಚ್ಚು ಮಾತಿನ ಬೈಗುಳಗಳು, ಸರಳವಾದ ನೀತಿಭೋಧೆ ಈ ವಚನಗಳ ವೈಶಿಷ್ಟ್ಯ ವೆನಿಸಿವೆ.
೫೪೨
ಉಡಿಯಲಿಂಗವ ಬಿಟ್ಟು, ಗುಡಿಯಲಿಂಗದ ಮುಂದೆ ನಿಂದು
ನುಡಿಗಳ ಗಡಣವ ಮಾಡುವ
ತುಡುಗುಣಿ ಕಳ್ಳುಗುಡಿ ಹೊಲೆಯರ ಮುಖವ ನೋಡಲಾಗದು
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.
೫೪೧
ಗುರುಕೊಟ್ಟ ಕುರುಹ ಬಿಟ್ಟು
ನರರು ನಟ್ಟಕಲ್ಲಿಂಗೆ, ಒಟ್ಟಿದ ಮಣ್ಣಿಂಗೆ
ನಿಷ್ಠೆವೆರದು ನುಡಿವ ಭ್ರಷ್ಠ ಕನಿಷ್ಠ ಕರ್ಮಿಗಳ
ಮುಖವ ನೋಡಲಾಗದು.
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.
೫೨೨
ಕುಲವೆಣ್ಣ ಬಿಟ್ಟು ಬೆಲೆವೆಣ್ಣಿಗೆ ಮನವನಿಟ್ಟ
ಆ ಹೊಲೆಯನ ತಲೆಯೆತ್ತಿ ನೋಡದಿರಾ ಮನವೆ.
ಅವ ಗುರುದ್ರೋಹಿ, ಲಿಂಗದ್ರೋಹಿ, ಜಂಗಮದ್ರೋಹಿ,
ಪ್ರಸಾದದ್ರೋಹಿ, ಶಿವದ್ರೋಹಿ.
ಅವ ಪಂಚಮಹಾಪಾತಕಿ ಪಾಷಂಡಿ.
ಅವನ ಮುಖವ ನೋಡಲಾಗದು ಕಾಣಾ
ಅಖಂಡ ಪರಿಪೂರ್ಣ ಘನಲಿಂಗಗುರು ಚೆನ್ನಬಸವೇಶ್ವರ
ಶಿವಸಾಕ್ಷಿಯಾಗಿ.
*