*
ಅಂಕಿತ: |
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. |
ಗುರುವಿನಲ್ಲಿ ಲಿಂಗವುಂಟು, ಜಂಗಮವುಂಟೆಂದು
ಗುರುಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಲಿಂಗದಲ್ಲಿ ಜಂಗಮವುಂಟೆಂದು, ಗುರುವುಂಟೆಂದು
ಲಿಂಗಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಜಂಗಮದಲ್ಲಿ ಗುರುವುಂಟು, ಲಿಂಗವುಂಟು
ಜಂಗಮ ಭಕ್ತಿಯ ಮಾಡೆಂದು ತೋರಿದಾತ ನಮ್ಮ ಬಸವಣ್ಣನಯ್ಯಾ.
ಒಂದೇ ಮೂರ್ತಿ ಮೂರೆಂದಾತ ನಮ್ಮ ಬಸವಣ್ಣನಯ್ಯಾ.
`ಏಕಮೂರ್ತಿ ತ್ರಯೋರ್ಭಾಗಾಃ' ಎಂದುದಾಗಿ,
ಗುರು ಲಿಂಗಜಂಗಮವಾದಾತ ಒಬ್ಬನೆ ಶಿವನೆಂದು
ಪ್ರಸಾರ ಮಾಡಿ ಭಕ್ತಿಯ ಬೆಳಸಿದಾತ ನಮ್ಮ ಬಸವಣ್ಣನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ. /1267
ಬಹುಶ: ಹಂಪೆಯ ಪರಿಸರಕ್ಕೆ ಸೇರಿದವನಾದ ಈತನ ಸ್ಥಳ ಹೇಮಗಲ್ಲು. ಕಾಲ 17ನೇ ಶತಮಾನ. ಲಿಂಗಾಯತ ಸಂಪ್ರದಾಯದಲ್ಲಿ ಮುಖ್ಯವಾದ 'ಪಡುವಿಡಿ' ಬಗೆಗೆ ಸೇರಿದವನು. ರಾಜೇಶ್ವರ ಈತನ ಗುರು. ಅಂಕಿತ-ಸಿದ್ಧಮಲ್ಲಿನಾಥ.
1080
ಕಾಮವುಳ್ಳವ ಭಕ್ತನಲ್ಲ , ಕ್ರೋಧವುಳ್ಳವ ಮಹೇಶ್ವರನಲ್ಲ ,
ಲೋಭವುಳ್ಳವ ಪ್ರಸಾದಿಯಲ್ಲ , ಮೋಹವುಳ್ಳವ ಪ್ರಾಣಲಿಂಗಿಯಲ್ಲ ,
ಮದವುಳ್ಳವ ಶರಣನಲ್ಲ , ಮತ್ಸರವುಳ್ಳವ ಐಕ್ಯನಲ್ಲ.
ಕಾಮ ಕ್ರೋಧ ಲೋಭ ಮೋಹ ಮದ ಮತ್ಸರವುಳ್ಳನಕ
ಎಂತು ಭಕ್ತನೆಂಬೆ ? ಎಂತು ಮಹೇಶ್ವರನೆಂಬೆ ?
ಎಂತು ಪ್ರಸಾದಿಯೆಂಬೆ ? ಎಂತು ಪ್ರಾಣಲಿಂಗಿಯೆಂಬೆ ?
ಎಂತು ಶರಣನೆಂಬೆ ? ಎಂತು ಐಕ್ಯನೆಂಬೆ ?
ಬರಿಯ ಮಾತಿನ ಬಣಗರು
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
1081
ಕಾಮವಿಲ್ಲದಾತ ಭಕ್ತ , ಕ್ರೋಧವಿಲ್ಲದಾತ ಮಹೇಶ್ವರ,
ಲೋಭವಿಲ್ಲದಾತ ಪ್ರಸಾದಿ, ಮೋಹವಿಲ್ಲದಾತ ಪ್ರಾಣಲಿಂಗಿ,
ಮದವಿಲ್ಲದಾತ ಶರಣ, ಮತ್ಸರವಿಲ್ಲದಾತ ಐಕ್ಯ.
ಅದು ಎಂತೆಂದೊಡೆ : ಕಾಮವಿಲ್ಲದ ಭಕ್ತ ಬಸವಣ್ಣ ,
ಕ್ರೋಧವಿಲ್ಲದ ಮಹೇಶ್ವರ ಪ್ರಭುರಾಯ,
ಲೋಭವಿಲ್ಲದ ಪ್ರಸಾದಿ ಚೆನ್ನಬಸವೇಶ್ವರದೇವರು,
ಮೋಹವಿಲ್ಲದ ಪ್ರಾಣಲಿಂಗಿ ಘಟ್ಟಿವಾಳಯ್ಯ,
ಮದವಿಲ್ಲದ ಶರಣ ಮೋಳಿಗೆಯ್ಯನವರು,
ಮತ್ಸರವಿಲ್ಲದ ಲಿಂಗೈಕ್ಯಳು ನೀಲಲೋಚನ ತಾಯಿ.
ಇಂತಿವರು ಮುಖ್ಯವಾದ ಏಳನೂರ ಎಪ್ಪತ್ತು ಅಮರಗಣಂಗಳ
ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
'ಹೇಮಗಲ್ಲ ಷಟ್ಸ್ಥಲ' ಈತನ ಕೃತಿಯ ಹೆಸರು. ಹೆಸರೇ ಸೂಚಿಸುವಂತೆ ಆರು ಸ್ಥಲಗಳಲ್ಲಿ ವಚನಗಳನ್ನು ಸಂಕಲಿಸಿರಬಹುದು. ಆದರೆ ಈಗ ದೊರೆತ ಕೃತಿ ಭಕ್ತಸ್ಥಲಕ್ಕೆ ನಿಂತಿದ್ದು. ಇದರಲ್ಲಿ 23 ಸ್ಥಲಗಳಿವೆ. ಒಟ್ಟು 282 ವಚನ, 21 ಸ್ವರವಚನ, 1 ರಗಳೆ, 7 ಕಂದ ಪದ್ಯಗಳು ಸಮಾವೇಶಗೊಂಡಿವೆ. ಷಟ್ಸ್ಥಲ ತತ್ವಪ್ರತಿಪಾದನೆಯೇ ಇದರ ಪರಮಗುರಿ.
1082
ಕಾಮವು ಲಿಂಗಮುಖವಾಗಿ, ಕ್ರೋಧವು ಲಿಂಗಮುಖವಾಗಿ,
ಲೋಭವು ಲಿಂಗಮುಖವಾಗಿ, ಮೋಹವು ಲಿಂಗಮುಖವಾಗಿ,
ಮದವು ಲಿಂಗಮುಖವಾಗಿ, ಮತ್ಸರವು ಲಿಂಗಮುಖವಾಗಿ
ಇಪ್ಪಾತನೆ ನಿರ್ಮೊಹಿ. ಅದು ಎಂತೆಂದೊಡೆ : ಪರಧನ ಪರಸ್ತ್ರೀಯ ಕಾಮಿಸುವಂತೆ
ಲಿಂಗವ ಕಾಮಿಸುವುದೆ ಕಾಮ.
ಪರರೊಳು ಕ್ರೋಧಿಸುವಂತೆ ಕರ್ಮವಿರಹಿತನಾದರೆ ಕ್ರೋಧ.
ಅರ್ಥ ಸ್ತ್ರೀಯರ ಮೇಲೆ ಲೋಭವಿಡುವಂತೆ
ಲಿಂಗದೊಡನೆ ಲೋಭವಿಟ್ಟು ಲಿಂಗವ ಕೂಡಬಲ್ಲರೆ ಲೋಭ.
ಅನ್ಯರ ಮೋಹಿಸುವಂತೆ ಲಿಂಗವ ಮೋಹಿಸಬಲ್ಲರೆ ಮೋಹ.
ಅನ್ನಮದ ಪ್ರಾಯಮದ ತಲೆಗೇರುವಂದದಿ
ಲಿಂಗಮದನಾಗಿರಬಲ್ಲರೆ ಮದ.
ಅನ್ಯರೊಡನೆ ಮತ್ಸರಿಸುವಂತೆ ಲಿಂಗದೊಡನೆ ಮತ್ಸರಿಸಿ
ಶರಣಕೃಪೆಯ ಪಡೆಯಬಲ್ಲರೆ ಮತ್ಸರ.
ಇಂತಪ್ಪ ಕಾಮ ಕ್ರೋಧ ಲೋಭ ಮೋಹ ಮದ ಮತ್ಸರದಲ್ಲಿ
ಲಿಂಗಮುಖವಾಗಿಪ್ಪ ಶರಣರ ಪಾದಕ್ಕೆ ನಮೋ ನಮೋ ಎಂಬೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
1210
ನಿರಾಕಾರ ಪರಬ್ರಹ್ಮವಸ್ತು ಎನ್ನ ಕರಸ್ಥಲಕೆ ಆಕಾರವಾಗಿ ಬಂದರೆ
ಹೊಗಳಲಮ್ಮೆ, ಹೊಗಳದಿರಲಮ್ಮೆ.
ಅದೇನು ಕಾರಣವೆಂದರೆ : ಬ್ರಹ್ಮ ವಿಷ್ಣು ರುದ್ರರ ಸ್ತುತಿಗೆ ನಿಲುಕದ ವಸ್ತುವೆನ್ನ
ನೆಮ್ಮಲು ನಾ ಬದುಕಿದೆನಯ್ಯಾ ನಾ ಬದುಕಿದೆನಯ್ಯಾ
ಪರಮಗುರು ಪಡುವಿಡಿ ಸಿದ್ಧಮಲ್ಲಿನಾಥಪ್ರಭುವೆ.
*