*
ಅಂಕಿತ:
|
ಕಾಮಹರಪ್ರಿಯ ರಾಮನಾಥ
|
ಕಾಯಕ:
|
ತಳವಾರ
|
೯೮೮
ಕಾಲವಂಚಕನಾಗಿ ಜಂಗಮಕಿಕ್ಕಿದಡೆ ಕರ್ಮವೆ ತಿಂಬುದು.
ಉಪಚರಿಸಿಕೊಂಬವನಾಗಿ ತ್ರಿಸಂಧಿಯಲ್ಲಿ ಲಿಂಗಪೂಜೆಯ ಮಾಡಿದಡೆ
ಅದು ಹಸಿವಿಲ್ಲದ ಗ್ರಾಸ, ಅಸಮಾಕ್ಷನ ಮುಟ್ಟದು.
ಇವು ಹುಸಿಯಲ್ಲವೆಂದೆ,
ಕಾಮಹರಪ್ರಿಯ ರಾಮನಾಥಾ.
ಕಲ್ಯಾಣದಲ್ಲಿ ತಳವಾರ ಕಾಯಕವನ್ನು ಕೈಕೊಂಡಿದ್ದ ಈತನ ಕಾಲ ೧೧೬೦. 'ಕಾಮಹರಪ್ರಿಯ ರಾಮನಾಥ' ಅಂಕಿತದಲ್ಲಿ
ಹತ್ತು ವಚನಗಳು ದೊರೆತಿವೆ. ತನ್ನ ಸಹಜ ಆಧ್ಯಾತ್ಮಾನುಭವವನ್ನು ಸರಳ ನುಡಿಗಳಲ್ಲಿ ನಿರೂಪಿಸುತ್ತಾನೆ.
೯೯೨
ವ್ಯವಹಾರವ ಮಾಡಿದಲ್ಲಿ ಲಾಭವ ಕಾಣದಿರ್ದಡೆ
ಆ ವ್ಯವಹಾರವೇತಕ್ಕೆ?
ಗುರುಲಿಂಗ ಜಂಗಮಕ್ಕೆ ಖ್ಯಾತಿಗೆ ಮಾಡಿದಡೆ
ಮೊದಲು ತಪ್ಪಿ ಲಾಭವನರಸುವಂತೆ,
ಕಾಮಹರಪ್ರಿಯ ರಾಮನಾಥಾ.
ವಚನಗಳು ಸರಳವಾಗಿದೆ. ಪ್ರಶ್ನಿಸುವ ಮನೋಭಾವ ಅವನ ವಚನಗಳಲ್ಲಿದೆ. ಇದು ವಿಚಾರಪರತೆಯ ಸೂಚನೆ.
೯೯೪
ಹಾದರವನಾಡುವನೆ ಸದ್ಭಕ್ತ?
ಹಾದಿಯ ಕಟ್ಟುವನೆ ನಿಜಶರಣ?
ಹಸುಗೊಲೆಯ ಕೊಲುವನೆ ಅಸುವಿನ ಕಲೆಯ ಬಲ್ಲವ?
ಇಂತಿವರ ನೀ ಬಲ್ಲೆ, ನಾನರಿಯೆ
ಕಾಮದಹನಪ್ರಿಯ ರಾಮನಾಥಾ.
*