Previous ಆನಂದಯ್ಯ ಉಪ್ಪರಗುಡಿಯ ಸೋಮಿದೇವಯ್ಯ Next

ಉಗ್ಘಡಿಸುವ ಗಬ್ಬಿದೇವಯ್ಯ

*
ಅಂಕಿತ: ಕೂಡಲಸಂಗಮದೇವರಲ್ಲಿ ಬಸವಣ್ಣ ಸಾಕ್ಷಿಯಾಗಿ
ಕಾಯಕ: ಬಸವಣ್ಣನ ಮಹಾಮನೆಯ ಬಾಗಿಲು ಕಾಯುವ ಕಾಯಕ

ಎರಡನರಿವಲ್ಲಿ ಭಂಡಾರಿ ಬಸವಣ್ಣ,
ಮೂರನರಿವಲ್ಲಿ ಚೆನ್ನಬಸವಣ್ಣ,
ಒಂದನರಿವಲ್ಲಿ ಪ್ರಭುದೇವರು.
ಇಂತೀ ಉಭಯದ ಸಂಗಂಗಳ ಮರೆದಲ್ಲಿ ನಿಜಗುಣ ನಿಜಸಂಗ.
ಇಂತೀ ಬಂಧ ಮೋಕ್ಷ ಕರ್ಮಂಗಳು
ಒಂದೂ ಇಲ್ಲದ ಮತ್ತೆ
ಬಾಗಿಲಿಂಗೆ ತಡಹಿಲ್ಲ.
ಎನ್ನ ಮಣಿಹ ಕೆಟ್ಟಿತ್ತು, ಕೂಡಲಸಂಗಮದೇವರಲ್ಲಿ ಬಸವಣ್ಣ
ಎನಗಾ ಮಣಿಹ ಬೇಡಾ ಎಂದ ಕಾರಣ.

ಬಸವಣ್ಣನ ಮಹಾಮನೆಯ ಬಾಗಿಲು ಕಾಯುವ ಕಾಯಕ ಕೈಕೊಂಡಿದ್ದ ಈತನ ಕಾಲ - ೧೧೬೦. 'ಕೂಡಲಸಂಗಮದೇವೆರಲ್ಲಿ ಬಸವಣ್ಣ ಸಾಕ್ಷಿಯಾಗಿ" ಎಂಬ ಅಂಕಿತದಲ್ಲಿ ರಚಿಸಿದ ಹತ್ತು ವಚನಗಳು ದೊರೆತಿವೆ. ತನ್ನ ಕಾಯಕದ ಪರಿಭಾಷೆಯನ್ನು ಬಳಸಿ ತುಂಬ ಸರಸವಾಗಿ-ಸರಳವಾಗಿ ರಚಿಸಿದ ಇವುಗಳಲ್ಲಿ ಹಾಸ್ಯಪ್ರಜ್ಞೆ, ಕಾಯಕನಿಷ್ಠೆ, ಬಸವಭಕ್ತಿ ಪ್ರಕಟವಾಗಿವೆ.

ಬಸವಣ್ಣನ ಮನೆಯ ಬಾಗಿಲು ಕಾಯುವ ಕಾಯಕದ ಪರಿಭಾಷೆಯನ್ನು ಧಾರ್ಮಿಕವಾಗಿ ಹೊರಳಿಸಿರುವುದು ಇಲ್ಲಿನ ವಚನಗಳ ವಿಶೇಷ. ಉದಾಹರಣೆಗೆ "ಜ್ಞಾನ ಬಾ ಮಾಯೆ ಹೋಗೆಂದು ಕಳುಹುತ್ತಿದ್ದೇನೆ. ಅರಿವು ಬಾ ಅಜ್ಞಾನ ಹೋಗೆಂದು ಕಳುಹುತ್ತಿದ್ದೇನೆ, ನಿಃಕಲ ಬಾ ಸಕಲ ಹೋಗೆಂದು ಕಳುಹುತ್ತಿದ್ದೇನೆ......"

ಜ್ಞಾನ ಬಾ, ಮಾಯೆ ಹೋಗೆಂದು ಕಳುಹುತ್ತಿದ್ದೇನೆ.
ಅರಿವು ಬಾ, ಅಜ್ಞಾನ ಹೋಗೆಂದು ಕಳುಹುತ್ತಿದ್ದೇನೆ.
ನಿಃಕಲ ಬಾ, ಸಕಲ ಹೋಗೆಂದು ಕಳುಹುತ್ತಿದ್ದೇನೆ.
ನಿಃಪ್ರಪಂಚ ಬಾ, ಪ್ರಪಂಚ ಹೋಗೆಂದು ಕಳುಹುತ್ತಿದ್ದೇನೆ.
ಕೂಡಲಸಂಗಮದೇವರಲ್ಲಿ ಬಸವಣ್ಣನ ಬಲ್ಲವರನೊಳಗೆ ಕೂಡಿ
ಅರಿಯದವರ ಹೊರಗೆ ತಡೆವುತ್ತಿದ್ದೇನೆ.

ಪರಿವಿಡಿ (index)
*
Previous ಆನಂದಯ್ಯ ಉಪ್ಪರಗುಡಿಯ ಸೋಮಿದೇವಯ್ಯ Next