*
ಅಂಕಿತ: |
ಏಣಾಂಕಧರ ಸೋಮೇಶ್ವರ |
ಕಾಯಕ: |
ಪ್ರಸಾದಿ |
ಬಸವಣ್ಣನ ಪ್ರಸಾದವ ಕೊಂಡ ಕಾರಣ
ಎನಗೆ ಭಕ್ತಿ ಸಾಧ್ಯವಾಯಿತ್ತು.
ಚೆನ್ನಬಸವಣ್ಣನ ಪ್ರಸಾದವ ಕೊಂಡ ಕಾರಣ
ಎನಗೆ ಜ್ಞಾನ ಸಾಧ್ಯವಾಯಿತ್ತು.
ಪ್ರಭುದೇವರ ಪ್ರಸಾದವ ಕೊಂಡ ಕಾರಣ
ಎನಗೆ ವೈರಾಗ್ಯ ಸಾಧ್ಯವಾಯಿತ್ತು.
ಇಂತೀ ಮೂವರು ಒಂದೊಂದು ಕೊಟ್ಟ ಕಾರಣ
ಎನಗೆ ಸರ್ವವೂ ಸಾಧ್ಯವಾಯಿತ್ತು.
ಏಣಾಂಕಧರ ಸೋಮೇಶ್ವರಾ,
ನಿಮ್ಮ ಶರಣರೆನ್ನ ಮಾತಾಪಿತರು. /೩೯೨ [1]
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗೊಬ್ಬೂರು ಈತನ ಸ್ಥಳ. ಇಲ್ಲಿ 'ಅರ್ಪಣದ ಕಟ್ಟೆ' ಎಂಬುದಿದ್ದು, ಇದು ಬಾಚಯ್ಯನ ಗದ್ದುಗೆಯಾಗಿರಬೇಕೆಂದು ಊಹಿಸಲಾಗಿದೆ. ಈತನ ಕಾಲ-೧೧೬೦. ಅಂಕಿತ 'ಏಣಾಂಕಧರ ಸೋಮೇಶ್ವರ'. ೧೦೨ ವಚನಗಳು ದೊರೆತಿವೆ. ಬಾಚಯ್ಯ ಪ್ರಸಾದಿಸ್ಥಲದಲ್ಲಿ ನಿಂತ ಶರಣ. ಹೀಗಾಗಿ ಆತ ತನ್ನೆಲ್ಲ ವಚನಗಳಲ್ಲಿ ತಾನು ನಿಂತ ಸ್ಥಲದ ವಿಷಯವನ್ನು ವಿಶೇಷವಾಗಿ ಪ್ರತಿಪಾದಿಸುವುದು ಸಹಜವೆನಿಸಿದೆ. ಕೆಲವು ಬೆಡಗಿನ ವಚನಗಳೂ ಇವೆ. ಬೇರೆ ಬೇರೆ ಶೀರ್ಷೆಕೆಯ ಆರು ಸ್ಥಲಗಳ ಅಡಿಯಲ್ಲಿ ವಚನಗಳನ್ನು ವಿಭಜಿಸಲಾಗಿದೆ.
ಇಷ್ಟಲಿಂಗ ಪ್ರಾಣಲಿಂಗವೆಂದು
ಭಿನ್ನಭಾವದಿಂದ ಹಿಂಗಿಸುವ ಪರಿಯಿನ್ನೆಂತೊ ?
ಕಾಯದಲ್ಲಿ ನೋವಾದಡೆ ಜೀವಕ್ಕೆ ಭಿನ್ನವೆ ?
ಜೀವ ಹೋದಲ್ಲಿ ಕಾಯ ಉಳಿಯಬಲ್ಲುದೆ ?
ಈ ಉಭಯದ ಭೇದವನರಿ,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ ಪ್ರಾಣಲಿಂಗಿಯಾಗಬಲ್ಲಡೆ. /೩೪೫ [1]
ಬಸವಣ್ಣ , ಚನ್ನಬಸವಣ್ಣ, ಪ್ರಭುದೇವ ಇವರ ಪ್ರಸಾದದ ಫಲವಾಗಿ ಕ್ರಮವಾಗಿ ಭಕ್ತಿ ಜ್ಞಾನ, ವೈರಾಗ್ಯಗಳು ಸಾಧ್ಯವಾಯಿತು ಎಂದಿರುವನು ಬೆಡಗಿನಿಂದ ಕೂಡಿವೆ. ಇವನು ತನ್ನದೇ ಆದ ಸ್ಥಲಕಲ್ಪನೆಯಲ್ಲಿ ವಚನಗಳನ್ನು ಬರೆದಿರುವನು.
ಮೌನವಾದ ಮತ್ತೆ ಜಗಳವುಂಟೆ ?
ಧ್ಯಾನವಾದ ಮತ್ತೆ ಫರಾಕುಂಟೆ ?
ಸ್ಥಲ ಲೇಪವಾದ ಮತ್ತೆ ಭೇದದ ಭಿನ್ನವುಂಟೆ ?
ಕ್ರೀ ಜ್ಞಾನ ಸಮಗಂಡಲ್ಲಿ, ಭಾವ ಶುದ್ಧವಾಯಿತ್ತು,
ಏಣಾಂಕಧರ ಸೋಮೇಶ್ವರಲಿಂಗದಲ್ಲಿ./೩೬೦ [1]
ಹಿಂಡಿನೊಳಗಣ ಕುರುಬನ, ತೋಳ ತಿಂಬಾಗ
ಕುರಿ ಮಾಣಿಸಬಲ್ಲವೆ ? ಕಟ್ಟೊಡೆಯ ಕೊಲುವಾಗ
ಮತ್ತೊಬ್ಬರು ಬೇಡಾ ಎನಲುಂಟೆ ?
ಹುಟ್ಟಿಸಿದಾತ ಭವದ ಗೊತ್ತಿಂಗೆ ತಳ್ಳುವಡೆ
ನಮ್ಮ ಗೊತ್ತಿನ ಅರಿವೇನ ಮಾಡುವುದು ?
ಉಭಯವು ನಿನ್ನಾಟ, ಏಣಾಂಕಧರ ಸೋಮೇಶ್ವರಲಿಂಗವೆ./೩೬೯ [1]
[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*