ಗಾವುದಿ ಮಾಚಯ್ಯ

*
ಅಂಕಿತ: ಕಲ್ಯಾಣದ ತ್ರಿಪುರಾ೦ತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದು ದಿಟವೆನ್ನಿರಣ್ಣಾ

೨೭೨
ಎನ್ನಂತರಂಗವೆ ಬಸವಣ್ಣನಯ್ಯಾ.
ಎನ್ನ ಬಹಿರಂಗವೆ ಚೆನ್ನಬಸವಣ್ಣನಯ್ಯಾ.
ಎನ್ನ ಸರ್ವಾಂಗವೆ ಪ್ರಭುದೇವರಯ್ಯಾ.
ಇಂತಿವರ ಕರುಣದ ಕಂದನಾಗಿ ಬದುಕಿದೆನಯ್ಯಾ,
ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದದಿಟವೆನ್ನಿರಣ್ಣಾ.

ಕಾಲ - ೧೧೬೦. ಕಲ್ಯಾಣದ ಶರಣರ ಮಧ್ಯ ತನ್ನ ಶಿವಪೂಜಾನಿಷ್ಠೆ ಮತ್ತು ಪ್ರಾಣಲಿಂಗಾನುಸಂಧಾನದಲ್ಲಿ ಕಾಲ ಕಳೆಯುತ್ತಿದ್ದನೆಂದು ತಿಳಿದುಬರುತ್ತದೆ. 'ಕಲ್ಯಾಣದ ತ್ರಿಪುರಾ೦ತಕ ಲಿಂಗದಲ್ಲಿ ಗಾವುದಿ ಮಾಚಯ್ಯ ಹೇಳಿದುದು ದಿಟವೆನ್ನಿರಣ್ಣಾ' ಎಂಬ ಅಂಕಿತದಲ್ಲಿ ೧೧ ವಚನಗಳು ದೊರೆತಿವೆ. ಸತ್ಯ ಶುದ್ಧ ಕಾಯಕದಿ೦ದ ಧನ ಸಂಗ್ರಹಿಸು; ಅಗತ್ಯವಿದ್ದಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದುದನ್ನು ಗುರುಲಿಂಗಜಂಗಮಕ್ಕೆ ಅಪಿ೯ಸು; ಆಶಾಪಾಶ ಬಂಧಿತನಾಗಬೇಡ ಎ೦ಬುದು ಅವುಗಳ ಮುಖ್ಯ ಆಶಯ.

೨೭೭
ಭಕ್ತರು ದ್ರವ್ಯವ ಗಳಿಸಿದಲ್ಲಿ
ತಮ್ಮ ತನುವಿದ್ದಲ್ಲಿಯೆ ಗುರು ಲಿಂಗ ಜಂಗಮಕ್ಕರ್ಪಿಸುವುದು.
ಇದೇ ಸದ್ಭಕ್ತಿಯ ಹೊಲಬು.
ತಾನಳಿದು ಮತ್ತೆ ಮನೆಮಕ್ಕಳಿಗೆಂದಡೆ
ಅದೆ ಆಚಾರಕ್ಕೆ ಭಂಗ.
ಆತ ಸ್ವಾಮಿಗೆ ಸ್ವಾಮಿದ್ರೋಹಿ.
ಇದನರಿದು ಕಲ್ಯಾಣದ ತ್ರಿಪುರಾಂತಕ ಲಿಂಗದಲ್ಲಿ
ಗಾವುದಿ ಮಾಚಯ್ಯ ಹೇಳಿದುದ ಕೇಳಿ ಎಲ್ಲರೂ ಸತ್ಯವೆನ್ನಿರಣ್ಣಾ.

೨೭೮
ಭಕ್ತರು ಬಯಕೆಯನಿರಿಸಿದಡೆ
ಅದು ಸತ್ತ ನಾಯ ಮಾಂಸ.
ವಿರಕ್ತರು ದ್ರವ್ಯವ ಮುಟ್ಟಿದಡೆ
ಅದು ಕತ್ತೆಯ ಹಡುಹಿಂಗೆ ತಪ್ಪಿದರೆಂಬೆ.
ಇದು ಸತ್ಯ, ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ
ಹೇಳಿದುದ ಸತ್ಯವೆನ್ನಿರಣ್ಣಾ.

೨೮೦
ಶಿಲೆ ಕಮ್ಮಾರನ ಹಂಗು,
ಮಾತು ಮನಸ್ಸಿನ ಹಂಗು,
ಮನಸ್ಸು ಆಕಾಶದ ಹಂಗು,
ಆಕಾಶ ಬಯಲ ಹಂಗು.
ಕುರುಹುವಿಡಿದು ಇನ್ನೇತರಿಂದರಿವೆ?
ಅರಿವುದಕ್ಕೆ ಸ್ವಯಂಭುವಿಲ್ಲ,
ತ್ರಿಪುರಾಂತಕ ಲಿಂಗದಲ್ಲಿ ಗಾವುದಿ ಮಾಚಯ್ಯ
ಹೇಳಿದುದೆ ದಿಟವೆಂಬೆ.


*
Previousಗಣದಾಸಿ ವೀರಣ್ಣಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.