Previous ಮೈದುನ ರಾಮಯ್ಯ ಮೋಳಿಗೆ ಮಾರಯ್ಯ Next

ಮೋಳಿಗೆ ಮಹಾದೇವಿ ಕಾಶ್ಮೀರದೇಶದ ಮಹಾದೇವ ಭೂಪಾಲನ ರಾಣಿ

*

ಮೋಳಿಗೆ ಮಹಾದೇವಿ

ಅಂಕಿತ: ಎನ್ನಯ್ಯ ಪ್ರಿಯ ಇಮ್ಮಡಿ ನಿ:ಕಳಂಕ ಮಲ್ಲಿಕಾರ್ಜುನ
ಕಾಯಕ: ಕಾಶ್ಮೀರದೇಶದ ಮಹಾದೇವ ಭೂಪಾಲನ ರಾಣಿ,ರಾಜ್ಯ ತ್ಯಾಗಮಾಡಿ ಕಟ್ಟಿಗೆ ಮಾರುವ ಕಾಯಕ

1176
ನೀರು ನೆಲನಿಲ್ಲದೆ ಇರಬಹುದೆ ?
ಬೀಜ ನೆಲೆಯಿಲ್ಲದೆ ಹುಟ್ಟಬಹುದೆ ?
ಜ್ಞಾನ ಕ್ರಿಯೆಯಿಲ್ಲದೆ ಅರಿಯಬಹುದೆ ?
ಚಿತ್ತ ಚಿತ್ತುವಿಲ್ಲದೆ ವಸ್ತುವ ಲಕ್ಷಿಸಿ ಗ್ರಹಿಸಬಲ್ಲುದೆ ?
ಇಂತೀ ಕ್ರೀಜ್ಞಾನ ಸಂಬಂಧಸ್ಥಲಭಾವ.
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
ಉಭಯಸ್ಥಲಭೇದ.

ಈಕೆ ಕಾಶ್ಮೀರದೇಶದ ಮಹಾದೇವ ಭೂಪಾಲನ ರಾಣಿ, ಮೂಲ ಹೆಸರು ಗಂಗಾದೇವಿ. ಪತಿಯೊಡನೆ ರಾಜ್ಯ ತ್ಯಾಗಮಾಡಿ ಕಲ್ಯಾಣಕ್ಕೆ ಬಂದು ಕಟ್ಟಿಗೆ ಮಾರುವ ಕಾಯಕವನ್ನು ಕೈಕೊಳ್ಳುತ್ತಾಳೆ. ಮಹಾದೇವ ಭೂಪಾಲ 'ಮೋಳಿಗೆಯ ಮಾರಯ್ಯ'ನೆಂದು, ಗಂಗಾದೇವಿ 'ಮೋಳಿಗೆಯ ಮಹಾದೇವಿ' ಎಂದು ಹೆಸರು ಬದಲಿಸಿಕೊಂಡು ಕಲ್ಯಾಣದಲ್ಲಿ ಕಾಯಕ ಜೀವಿಗಳಾಗಿ ಬದುಕು ಸಾಗಿಸುತ್ತಾರೆ. ಅನುಭವ ಮಂಟಪದಲ್ಲಿ ಭಾಗವಹಿಸಿ, ವಚನ ರಚನೆಯಲ್ಲಿ ತೊಡಗುತ್ತಾರೆ. ಕಾಲ-೧೧೬0. ಪುರಾಣಗಳಲ್ಲಿ ಇವರ ಚರಿತ್ರೆ ಪ್ರಸಿದ್ಧವಾಗಿದೆ.

1144
ಇಷ್ಟದಲ್ಲಿ ನೋಟ, ಜ್ಞಾನದಲ್ಲಿ ಕೂಟ
ಏಕಾರ್ಥವಾದಲ್ಲಿ ಕಾಯವೆಂಬ ಕದಳಿಯ ಬಿಟ್ಟುದು
ಭಾವವೆಂಬ ಕುರುಹ ಮರೆದುದು.
ಇಂತೀ ಉಭಯ ನಿರ್ಭಾವವಾದಲ್ಲಿ
ಇಹಪರವೆಂಬ ಹೊಲಬುಗೆಟ್ಟಿತ್ತು,
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನು ಒಂದೆಂದಲ್ಲಿ

'ಎನ್ನಯ್ಯ ಪ್ರಿಯ ಇಮ್ಮಡಿ ನಿ:ಕಳಂಕ ಮಲ್ಲಿಕಾರ್ಜುನ' ಅಂಕಿತದಲ್ಲಿ ರಚಿಸಿದ ಈಕೆಯ ೭೦ ವಚನಗಳು ದೊರೆತಿವೆ. ಎಲ್ಲ ವಚನಗಳು ತತ್ವ ಪ್ರಧಾನವಾಗಿವೆ. ಪತಿಗೆ ಸತ್ಯದ ನಿಲುವನ್ನು ತೋರಿಸುವಲ್ಲಿ ನುಡಿದ ನುಡಿಗಳೆ ಅವುಗಳಲ್ಲಿ ಅಧಿಕ. ಜೊತೆಗೆ ಷಟ್-ಸ್ಥಲ ಸ್ವರೂಪ, ಕ್ರಿಯಾ ಜ್ಞಾನ ಸಂಬಂಧ, ಇಷ್ಟಲಿಂಗ ಪ್ರಾಣಲಿಂಗಗಳ ಮಹತಿಯನ್ನು ತಿಳಿಸುವ ಈಕೆ ಉಳಿದ ವಚನಕಾರ್ತಿಯರಿಗಿಂತ ಭಿನ್ನವೆನಿಸಿದ್ದಾಳೆ.ಈಕೆ ಮಹಾದೇವಿಯಾಗಿ ತಾತ್ವಿಕ ವಚನಗಳನ್ನು ಬರೆದಿರುವಳು.

1185
ಬೀಜದೊಳಗಣ ವೃಕ್ಷದ ಹಣ್ಣ ಅದನಾರು ಮೆಲಬಹುದು ?
ಸಸಿಯೊಳಗಣ ಲತೆ ಪರ್ಣ ತಲೆದೋರದ
ನಸುಗಂಪಿನ ಕುಸುಮವ ಅದಾರು ಮುಡಿವರು ?
ಇಂತೀ ಅರಿವಿನ ಅರಿವ ಕುರುಹಿಟ್ಟು ಕೂಡುವನೆ ಲಿಂಗಾಂಗಿ ?
ಎನ್ನಯ್ಯಪ್ರಿಯ ಇಮ್ಮಡಿ ನಿಃಕಳಂಕಮಲ್ಲಿಕಾರ್ಜುನನಲ್ಲಿ
ಇದು ಸ್ವಾನುಭಾವಿಯ ಸನ್ನದ್ಧಸ್ಥಲ.

*
ಪರಿವಿಡಿ (index)
Previous ಮೈದುನ ರಾಮಯ್ಯ ಮೋಳಿಗೆ ಮಾರಯ್ಯ Next