*
ಅಂಕಿತ:
|
ದಹನ ಚಂಡಿಕೇಶ್ವರಲಿಂಗ
|
ಕಾಯಕ:
|
ಪ್ರಸಾದಿಗಳ ಸೇವೆಮಾಡುವುದು
|
೧೧೫
ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ
ಪ್ರಸಾದಲಿಂಗ ಮಹಾಲಿಂಗ ಮುಂತಾಗಿರ್ದ
ದೃಷ್ಟ ಅರ್ಪಿತಂಗಳ ಅರ್ಪಿಸುವಲ್ಲಿ
ಗಂಧದಿಂದ ಸುಳಿವ ನಾನಾ ಸುಗಂಧವ
ರಸದಿಂದ ಬಂದ ನಾನಾ ರಸಂಗಳ
ರೂಪಿನಲ್ಲಿ ಕಾಣಿಸಿಕೊಂಬ ನಾನಾ ಚಿತ್ರ ವಿಚಿತ್ರ
ಖಂಡಿತ ಅಖಂಡಿತಮಪ್ಪ ದೃಷ್ಟಾಂತಂಗಳಲ್ಲಿ
ಸ್ಪರ್ಶನದಲ್ಲಿ ಮೃದುಕಠಿಣದೊಳಗಾದ
ಮುಟ್ಟುತಟ್ಟಿನ ಭೇದವ ಲಕ್ಷಿಸುವಲ್ಲಿ
ಶಬ್ದದಿಂದ ಸಪ್ತಸ್ವರದೊಳಗಾದ ನಾನಾ ಘೋಷ ವಾಸನಂಗಳ
ಅಳಿದುಳಿದು ತೋರುವ ಸುನಾದ ಸಂಚುಗಳಲ್ಲಿ
-ಇಂತೀ ಪಂಚೇಂದ್ರಿಯಂಗಳಲ್ಲಿ
ಪ್ರಸಾದ ಮುಂತಾಗಿ ಅರ್ಪಿಸಿಕೊಂಡೆಹೆವೆಂಬಲ್ಲಿ
ಗುರುಪ್ರಸಾದಿಗೆ ಲಿಂಗಪ್ರಸಾದವಿಲ್ಲ.
ಲಿಂಗಪ್ರಸಾದಿಗೆ ಜಂಗಮಪ್ರಸಾದವಿಲ್ಲ.
ಜಂಗಮಪ್ರಸಾದಿಗೆ ಮಹಾಪ್ರಸಾದವಿಲ್ಲ.
ಮಹಾಪ್ರಸಾದಿಗೆ ಪರಿಪೂರ್ಣ ಪ್ರಸಾದವಿಲ್ಲ.
ಪರಿಪೂರ್ಣಪ್ರಸಾದಿಗೆ ಪಂಚೇಂದ್ರಿಯದೊಳಗಾದ
ಮುಟ್ಟಿನ ಪ್ರಸಾದ, ಕಟ್ಟಿನ ಸೂತಕವಿಲ್ಲ.
ಅದೆಂತೆಂದಡೆ:
ಕರ್ಪೂರದ ಚಿತ್ರಸಾಲೆಯ ಕಿಚ್ಚು ಮುಟ್ಟಿದ ಮತ್ತೆ
ಚಿತ್ರವಲ್ಲಿಯೆ ನಿರ್ಲಕ್ಷ್ಯವಾದಂತೆ
ಪತ್ರಂಗಳಲ್ಲಿ ನಾನಾ ಅಕ್ಷರಂಗಳ ಲಕ್ಷಿಸಿ ಬರೆದು
ಅವು ಕಿಚ್ಚು ಮುಟ್ಟಿ ಸುಟ್ಟಲ್ಲಿ
ಎತ್ತಿ ಪ್ರತಿಯ ಲಕ್ಷಿಸಬಹುದೆ ?
ಇಂತೀ ಅರಿದರುಹಿನಲ್ಲಿ ಎಡೆದೆರಪಿಲ್ಲದ
ಪ್ರಸಾದಿಗೆ ಆ ಗುಣ ಪ್ರಸನ್ನಪ್ರಸಾದಿಯ ಇರವು
ದಹನ ಚಂಡಿಕೇಶ್ವರಲಿಂಗದಿರವು.
ಬಂಕಣ್ಣ ಹೆಸರಿನ ಹಲವು ಜನ ಶರಣರಿದ್ದು, ಅವರಲ್ಲಿ ಈತ ಯಾರು ಎಂಬುದು ಸ್ಪಷ್ಟವಿಲ್ಲ. ಜೀವನ ವಿವರ ದೊರೆತಿಲ್ಲ.
ಕಾಲ ೧೧೬೦ ಹೀಗಾಗಿ ಈತನ ವಚನಗಳಲ್ಲಿ ಅರ್ಪಿತ-ಅನರ್ಪಿತ ಪ್ರಸಾದ. ಕಾಯಕ ಇವುಗಳನ್ನು ಕುರಿತ ತಾತ್ವಿಕ
ವಿವೇಚನೆಯೇ ಹೆಚ್ಚಾಗಿದೆ. ೧೧ ವಚನಗಳು ದೊರೆತಿವೆ. ಅಂಕಿತ 'ದಹನ ಚಂಡಿಕೇಶ್ವರಲಿಂಗ'.
೧೨೫
ವೇದ ಶಾಸ್ತ್ರ ಪುರಾಣ ಆಗಮಂಗಳಿಗೆ ಅಭೇದ್ಯಲಿಂಗಕ್ಕೆ
ಸಕಲಸಂಸಾರವೇದಿಗಳ ಶೇಷವ ಸಮರ್ಪಿಸಬಹುದೆ?
ಅಲ್ಲಾಯೆಂದಡೆ ಸಮಯವಿರೋಧ.
ಅಹುದೆಂದಡೆ ಆದಿಯನಾದಿಯಿಂದತ್ತ
ಭೇದಿಸಿ ಕಾಣದ ಅಭೇದ್ಯಲಿಂಗಕ್ಕೆ
ಸರ್ವಸಾಧನೆಯಲ್ಲಿ ಸಾವವರ ಶೇಷವ
ನಾದ ಬಿಂದು ಕಳೆಗೆ ಅತೀತವಪ್ಪ ವಸ್ತುವಿಂಗೆ ನೈವೇದಿಸಬಹುದೆ?
ಲಿಂಗದ ಆದ್ಯಂತವನರಿಯರು.
ಗುರುಲಿಂಗಜಂಗಮದ ಭೇದಕ್ರೀಯನರಿದು ಕಂಡು
ತನ್ನಿರವ ತಾ ಶೋಧಿಸಿಕೊಂಡು ತ್ರಿವಿಧವ ಅರಿತವಂಗಲ್ಲದೆ
ಉಭಯಪ್ರಸಾದವ ಲಿಂಗಕ್ಕೆ ಅರ್ಪಿಸಿ
ತ್ರಿವಿಧಪ್ರಸಾದವ ಒಡಗೂಡಿಕೊಂಬುದು ನಿರಂಗಿ.
ನಿರಂಗಿಯ ಮಹಾಪ್ರಸಾದಿಯ ಅಂಗ ಹೀಂಗಲ್ಲದೆ
ಕಂಡವರ ಕೈಕೊಂಡು ಬಂಧ ಮೋಕ್ಷ ಕರ್ಮಂಗಳೊಂದೂ ಹರಿಯದೆ ನಿಂದ
ಕೀರ್ತಿ ಆಡಂಬರಕ್ಕಾಗಿ ಮಾಡಿಕೊಂಡ ನೇಮಕ್ಕೆ ಕೆಟ್ಟಡೆ
ತ್ರಿವಿಧವೇದಿಗಳು ಬಾಧಿಸಿಹರೆಂದು ಕಟ್ಟುಗುತ್ತಿಗೆಯ ವರ್ತಕರಿಗೆ
ತ್ರಿವಿಧಪ್ರಸಾದದ ನಿಜನಿಶ್ಚಯ ಉಂಟೆ?
ಇಂತೀ ಭೇದವಿಚಾರಗಳ ತಿಳಿದು
ಲಿಂಗದ ಅಂದಿನ ಸೋಂಕಿನಿಂದ ಬಂದ
ಗುರು ಲಿಂಗ ಜಂಗಮದ ಅಂಗವನರಿದು
ಲಿಂಗಮೂರ್ತಿ ತ್ರಿವಿಧರೂಪಾಗಿ
ಬಂದುದ ತಿಳಿದು, ತನ್ನ ಮೂರ್ತಿಗೆ ತಾ ಗುರುವಾಗಿ
ದೀಕ್ಷಿತನಾಗಿ ಬಂದುದ ಕಂಡು
ತನ್ನ ಮೂರ್ತಿಗೆ ತಾನು ಸುಳಿದು, ಚರವಾಗಿ ನಿಂದುದ ಕಂಡು
ತನ್ನ ಮೂರ್ತಿಗೆ ನಿಜಕ್ಕೆ ತಾ ಮೂರ್ತಿಯಾಗಿ
ಆ ಲಿಂಗವು ಉಭಯದ ಗುಣದಲ್ಲಿ ಕುರುಹಗೊಂಡಿತ್ತು.
ಇಂತೀ ನಡೆನುಡಿ ಸಿದ್ಧಾಂತವಾದವಂಗಲ್ಲದೆ
ಗುರುಚರಪ್ರಸಾದ ಲಿಂಗಕ್ಕೆ ನೈವೇದ್ಯವಲ್ಲ,
ದಹನ ಚಂಡಿಕೇಶ್ವರಲಿಂಗವನರಿದ ಪ್ರಸಾದಿಯ ನಿರಂಗ.
ಅರ್ಪಿತ, ಅನರ್ಪಿತ, ಪ್ರಸಾದ, ಕಾಯಕ - ಇವುಗಳನ್ನು ಕುರಿತ ಪಾರಂಪರಿಕ ವಿವೇಚನೆ ಈತನ ವಚನದಲ್ಲಿದೆ.
೧೨೪
ರೂಪನರಿದು ರುಚಿಯನುಂಡು
ಅವರ ನಿಹಿತಂಗಳ ಕಂಡು ಮತ್ತೆ ಲಿಂಗಕ್ಕೆ ಅರ್ಪಿಸಿ
ಪ್ರಸಾದ ಮುಂತಾಗಿ ಕೊಂಡೆಹೆನೆಂಬ ವರ್ತಕಭಂಡರ ನೋಡಾ.
ಕಟ್ಟಿ ಹುಟ್ಟದ ರತ್ನ, ಸುಗುಣ ಅಪ್ಪು ತುಂಬದ ಮುತ್ತು
ಕಳೆ ತುಂಬದ ಬೆಳಗು, ಹೊಳಹುದೋರದ ಸೂತ್ರ
ಲವಲವಿಕೆಯಿಲ್ಲದ ಚಿತ್ತ, ಇದಿರಗುಣವನರಿಯದ ಆತ್ಮ.
ಇಂತಿವು ಫಲಿಸಬಲ್ಲವೆ ? ಕ್ರೀಯನರಿದು ಅರ್ಪಿಸಬೇಕು.
ಅರ್ಪಿಸುವಲ್ಲಿ ದೃಷ್ಟಾಂತದ ಸಿದ್ಧಿ ಪ್ರಸಿದ್ಧವಾಗಬೇಕು.
ಕಾಣದವಗೆ ತಾ ಕಂಡು ಕುರುಹಿನ ದಿಕ್ಕ ಅರುಹಿ
ತೋರುವನ ತೆರನಂತೆ
ತಾ ಲಕ್ಷಿಸಿದಲ್ಲಿ, ತಾ ದೃಷ್ಟಿಸಿದಲ್ಲಿ, ತಾ ಮುಟ್ಟಿದಲ್ಲಿ
ಅರ್ಪಿತವಾದ ಪ್ರಸಾದಿಯ ಕಟ್ಟು.
ದಹನ ಚಂಡಿಕೇಶ್ವರಲಿಂಗವು ತಾನಾದ ಚಿತ್ತದವನ ಮುಟ್ಟು.
*