*
ಅಂಕಿತ: |
ಗೋಳಕಾಕಾರ ವಿಶ್ವವಿರಹಿತಲಿಂಗ |
ಕಾಯಕ: |
ಸಿದ್ಧಾಂತವನ್ನು ಪ್ರತಿಪಾದಿಸುವುದು |
605
ಗಾಜಿನ ಕುಪ್ಪಿಗೆಯಲ್ಲಿ ನೀರೆಣ್ಣೆಯ ಹೊಯ್ಯಲಿಕ್ಕಾಗಿ,
ನೀರೂ ಎಣ್ಣೆಯೂ ಬೇರಾಗಿ ತೋರೂದು.
ಆಧಾರ ಗುಣವೆಂದು ನಿಧಾನಿಸಿಕೊಂಡು ನೋಡಲು,
ಕುಪ್ಪಿಗೆಯ ಒಪ್ಪವೊ ? ನೀರು ಎಣ್ಣೆ ಅದರೊಳಗೊಪ್ಪಿಹ ಭೇದವೊ ?
ಕುಪ್ಪಿಗೆಯ ಗುಣವೆಂದಡೆ ನೀರೆಣ್ಣೆ ಸೇರಿದ ಮತ್ತೆ ,
ಕುಪ್ಪಿಗೆಯಲ್ಲಿ ಕೃತ್ರಿಮ ಒಂದೂ ಇಲ್ಲಾ ಎಂದಡೆ ದೃಷ್ಟವಿರೋಧ.
ಅದೆಂತೆಂದಡೆ :
ಆ ಅಂಗ ತಾಳ್ದುದರಿಂದ ಪೃಥಕ್ಕಿಟ್ಟು ಅಂಗ ಬೇರಾಯಿತ್ತು.
ಮತ್ತೆ ಮೃತ್ತಿಕೆಯ ಅಂಗದಲ್ಲಿ ಎಣ್ಣೆ ನೀರ ತುಂಬಿ ನೋಡಲಿಕ್ಕಾಗಿ
ಬಾಹ್ಯವಿದಿರಲ್ಲಿ ಒಂದೂ ಕಾಣಬಂದುದಿಲ್ಲ.
ಈ ಗುಣ ಘಟಹೊರೆಯ ಭೇದ,
ಆತ್ಮದಿರವಿನ ಘಟ, ಸಂಸರ್ಗೆಯ ಭಾವ.
ಇದ ತಿಳಿವುದು ಕುಟಿಲರಿಗೆ ಅಸಾಧ್ಯ.
ಅಕುಟಿಲರಿಗೆ ಸಾಧ್ಯವೇದ್ಯ, ಗೋಳಕಾಕಾರ ವಿಶ್ವವಿರಹಿತ ಲಿಂಗವು.
ಈತ ವೀರನಿಷ್ಠೆಯ ಶಿವಭಕ್ತ. ಅನೇಕ ಪುರಾಣ ಕಾವ್ಯಗಳಲ್ಲಿ ಈ ನಿಷ್ಠೆಯ ವಿವರ ಬಂದಿದೆ. ಕಾಲ-೧೧೬೦ ಐದು ವಚನಗಳು ದೊರೆತಿವೆ. ಅಂಕಿತ 'ಗೋಳಕಾಕಾರ ವಿಶ್ವವಿರಹಿತಲಿಂಗ'. ಹೆಸರಿಗೆ ತಕ್ಕಂತೆ ಸಿದ್ಧಾಂತ ವಿಷಯಗಳ ನಿರೂಪಣೆಯೇ ಈ ವಚನಗಳ ಮುಖ್ಯ ಉದ್ದೇಶವಾಗಿದೆ.
604
ಕ್ರೀಯಲ್ಲಿ ವಸ್ತುವಿಪ್ಪುದೆ ದಿಟವಾದಡೆ, ತಿಳಿದು ನೋಡಿದಲ್ಲಿ,
ವಸ್ತುವಿನಲ್ಲಿ ಕ್ರೀ ಇಪ್ಪುದೆ ದಿಟ.
ಇಂತು ಇನ್ನೀ ಉಭಯವ ತಿಳಿದು ನೋಡಿದಲ್ಲಿ,
ವಸ್ತುವಿಂಗೂ ಕ್ರೀಗೂ ಭಿನ್ನ ಉಂಟೆ ?
ಅದೆಂತೆಂದಡೆ :
ಸಕ್ಕರೆಯ ಕುಂಭವೆನಲಿಕೆ, ತುಪ್ಪದ ಕಂದಳೆನಲಿಕೆ,
ಕರ್ಪುರದ ಕರಂಡವೆನಲಿಕೆ, ಆ ವಸ್ತು ದೃಷ್ಟ ದಿಟವೆ ?
ಕುಂಭ ಸಕ್ಕರೆಯಲ್ಲ, ಸಕ್ಕರೆ ಕುಂಭವಲ್ಲ,
ತುಪ್ಪ ಕಂದಳಲ್ಲ, ಕಂದಳ ತುಪ್ಪವಲ್ಲ,
ಕರಂಡ ಕರ್ಪುರವಲ್ಲ, ಕರ್ಪುರ ಕರಂಡವಲ್ಲ.
ಅಲ್ಲಿದ್ದ ವಸ್ತು ಹೋದ ಮತ್ತೆ ಉಪದೃಷ್ಟದ ಮಾತಡಗಿತ್ತು.
ಬಣ್ಣವಿಲ್ಲದ ಮತ್ತೆ ಬಂಗಾರವೆಂಬ ಕುರುಹುಂಟೆ ?
ಸಕ್ಕರೆ ತುಪ್ಪ ಕರ್ಪುರ ಹೋದ ಮತ್ತೆ,
ಘಟವಲ್ಲದ ವಸ್ತು ನಾಮವಿಲ್ಲ.
ವಸ್ತು ವಸ್ತುಕದಂತೆ, ಘಟ ಆತ್ಮನಂತೆ,
ಉಭಯಕ್ಕೂ ಭಿನ್ನವಿಲ್ಲದೆ ಸಿದ್ಧಿಯಾಗಿ,
ಆ ಸಿದ್ಧಿ ಪ್ರಸಿದ್ಧಿಯಾಗಿ, ಆ ಪ್ರಸಿದ್ಧಿ ಪ್ರಸನ್ನವಾಗಿ,
ಆ ಪ್ರಸನ್ನ ಪ್ರಸಂಗಕ್ಕೆ ಒಡಲರತುದು,
ಗೋಳಕಾಕಾರ ವಿಶ್ವವಿರಹಿತಲಿಂಗವು ತಾನಾದುದು.
*