*
ಗಡ್ಡ ಮಂಡೆಯ ಬೋಳಿಸಿಕೊಂಡವರೆಲ್ಲ ಕಬ್ಬಲಿಗರ ಮಕ್ಕಳೆಂಬೆ.
ಬತ್ತಲೆ ಇಪ್ಪವರೆಲ್ಲ ಕುಂಚಿಗನ ಮಕ್ಕಳೆಂಬೆ.
ಪಟ್ಟಣಕ್ಕೆ ಹೋಗಿ ಹೆಸರ ಹೇಳುವ ಜಾತಿಕಾರನಂತೆ
ಅರ್ಥ ಅನುಭಾವವ ಬಲ್ಲೆನೆಂದು ಅಗಮ್ಯವ ಬೀರುವ
ಅಘೋರಿಗಳ ವಿರಕ್ತರೆನ್ನಬಹುದೆ ಎನಲಾಗದು.
ವಚನದ ರಚನೆಯ ಅರಿದೆನೆಂಬ
ಅಹಂಕಾರವ ಮುಂದುಗೊಂಡು ತಿರುಗುವ
ಆತ್ಮತೇಜದ ಘಾತಕರ ವಿರಕ್ತರೆನಲಾಗದಯ್ಯಾ.
ವಿರಕ್ತನ ಪರಿಯ ಹೇಳಿಹೆನು ಕೇಳಿರಣ್ಣಾ
ವಾಯು ಬೀಸದ ಉದಕದಂತಿರಬೇಕು
ಅಂಬುದಿಯೊಳಗೆ ಕುಂಭ ಮುಳುಗಿದಂತಿರಬೇಕು
ದರಿದ್ರಗೆ ನಿಧಾನಸೇರಿದಂತಿರಬೇಕು
ರೂಹಿಲ್ಲದ ಮರುತನಂತಿರಬೇಕು
ಹಿಂಡನಗಲಿದ ಮದಗಜ ಹಿಂಡಸೇರಿದಂತಿರಬೇಕು
ಸಂದೇಹ ಸಂಕಲ್ಪ ಮುಂದುಗೊಳ್ಳದೆ ಇರಬೇಕು.
ಅಂಗಲಿಂಗಿಗಳಲ್ಲಿ ಲಿಂಗಾರ್ಪಿತಕ್ಕೆ ಹೋಗಿ
ಬಂದುದನತಿಗಳೆಯದಿದ್ದಡೆ ವಿರಕ್ತರೆಂಬೆನು.
ರೋಗರುಜಿನಂಗಳು ಬಂದಲ್ಲಿ ಕಿಂಕಿಲನಾಗದೆ ಇರಬಲ್ಲಡೆ ಅಮುಗೇಶ್ವರಲಿಂಗವೆಂಬೆನು.
ಈಕೆ ಅಮುಗಿ ದೇವಯ್ಯಗಳ ಪತ್ನಿ. ಇವಳಿಗೆ 'ವರದಾನಿಯಮ್ಮ' ಎಂಬ ಬೇರೊಂದು ಹೆಸೆರಿರುವಂತೆ ತಿಳಿದುಬರುತ್ತದೆ.
ಮೂಲತಃ ಸೊಲ್ಲಾಪುರದವಳಾದ ಈಕೆ ಪತಿಯೊಂದಿಗೆ ಕಲ್ಯಾಣಕ್ಕೆ, ಬಳಿಕ ಪುಳುಜೆಗೆ ಬಂದು ಅಲ್ಲಿಯೇ ಐಕ್ಯವಾಗುತ್ತಾಳೆ.
ಇವಳ ಹೆಸರಿನಲ್ಲಿ ೧೧೫ ವೆಚನಗಳು ಸಿಗುತ್ತವೆ. ಮುದ್ರಿಕೆ 'ಅಮುಗೇಶ್ವರಲಿಂಗ’ ಈ ವಚನಗಳು ಅಚಾರಪ್ರಧಾನವಾಗಿವೆ.
ತೀಕ್ಷ್ಣ ಸಮಾಜ ವಿಮರ್ಶೆ ಎದ್ದು ಕಾಣುತ್ತದೆ.
ಅಂಗದ ಮೇಲೆ ಲಿಂಗವಿಲ್ಲದವರಲ್ಲಿ
ಲಿಂಗಾರ್ಪಿತವ ಬೇಡಲೇಕೆ ?
ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ
ಲಿಂಗಾರ್ಪಿತವ ಬಿಡಲೇತಕ್ಕೆ ?
ಜಾತಿಗೋತ್ರವನೆತ್ತಿ ನುಡಿಯಲೇಕೆ ?
ಸಹಜ ಶಿವಭಕ್ತರೆಂದು, ಶೀಲವಂತರೆಂದು, ವ್ರತಾಚಾರಿಗಳೆಂದು,
ವ್ರತಭ್ರಷ್ಟರೆಂದು ಅವರ ಕುಲಛಲವ ಕೇಳಿಕೊಂಡು
ಆಚಾರವುಳ್ಳವರು ಅನಾಚಾರಿಗಳು ಎಂದು
ಬೇಡುವ ಭಿಕ್ಷವ ಬಿಡಲೇತಕ್ಕೆ ?
ಮದ್ಯಮಾಂಸವ ಭುಂಜಿಸುವವರು ಅನಾಚಾರಿಗಳು.
ಆವ ಕುಲವಾದಡೇನು, ಅಂಗದ ಮೇಲೆ ಲಿಂಗವುಳ್ಳವರೆಲ್ಲರು
ಆಚಾರವುಳ್ಳವರೆಂಬೆನಯ್ಯಾ ; ಅಮುಗೇಶ್ವರಲಿಂಗಕ್ಕೆ ಅವರೆ ಸದ್ಭಕ್ತರೆಂಬೆನಯ್ಯಾ.
ಕೋಣವನೇರಿ ಕೋಡಗದಾಟನಾಡುವಂಗೆ
ಭಾರವಣಿಯ ಸುದ್ದಿಯೆಲ್ಲಿಯದು
ಕರ್ತನನರಿಯದ ಕರ್ಮಿಗಳ ಕೈಯಲ್ಲಿ ಇಷ್ಟಲಿಂಗವಿರ್ದು ಫಲವೇನು, ಅಮುಗೇಶ್ವರಾ
*