Previous ವೇದಮೂರ್ತಿ ಸಂಗಣ್ಣ ಬಾಲಬೊಮ್ಮಣ್ಣ Next

ಬಾಲ ಸಂಗಯ್ಯ

*
ಅಂಕಿತ: ಅಪ್ರಮಾಣ ಕೂಡಲಸಂಗಮದೇವ
ಕಾಯಕ: ಶ್ರೇಷ್ಠ ಪಂಡಿತ, ಅನುಪಮ ಶಾಸ್ತ್ರಾನುಭಾವಿ

ಈ ವಚನಾನುಭಾವದಲುಳ್ಳರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯುಂಟು ನೋಡಾ.
ಈ ವಚನಾನುಭಾವದಲ್ಲಿಲ್ಲದರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಲ್ಲಿಯೂ ಇಲ್ಲ ನೋಡಾ.
ಈ ವಚನಾನುಭಾವದ ಅರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣಂಗಳಿಗೂ ನಿಲುಕದು ನೋಡಾ.
ಈ ವಚನಾನುಭಾವದ ಅರ್ಥವು
ಸಕಲ ವೇದಾಗಮ ಶಾಸ್ತ್ರ ಪುರಾಣಾತೀತವು ನೋಡಾ
ಅಪ್ರಮಾಣಕೂಡಲಸಂಗಮದೇವಾ. /೭೯೨ [1]

ಈತ ಬಸವೋತ್ತರಯುಗದ ಮಹತ್ವದ ವಚನಕಾರ, ತೋಂಟದ ಸಿದ್ಧಲಿಂಗರಿಗಿಂತ ಪೂರ್ವದವನಾಗಿರಬಹುದಾದ ಈತನ ಬದುಕಿಗೆ ಸಂಬಂಧಿಸಿದ ವಿವರಗಳು ದೊರೆತಿಲ್ಲ. ಈತನ ನಿಜನಾಮ 'ಅಪ್ರಮಾಣದೇವ'

ಬ್ರಹ್ಮ ದೇವರಲ್ಲ, ವಿಷ್ಣು ದೇವರಲ್ಲ, ರುದ್ರ ದೇವರಲ್ಲ,
ಈಶ್ವರ ದೇವರಲ್ಲ, ಸದಾಶಿವ ದೇವರಲ್ಲ,
ಸಹಸ್ರಶಿರ, ಸಹಸ್ರಾಕ್ಷ, ಸಹಸ್ರಪಾದವನುಳ್ಳ ವಿರಾಟ್ಪುರುಷ ದೇವರಲ್ಲ ;
ವಿಶ್ವತೋಮುಖ, ವಿಶ್ವತೋಚಕ್ಷು, ವಿಶ್ವತೋಬಾಹು,
ವಿಶ್ವತೋಪಾದವನುಳ್ಳ ಪರಮಪುರುಷ ದೇವರಲ್ಲ,
ಸಹಜನಿರಾಲಂಬವೇ ತಾನೆಂದರಿದ ಮಹಾಶರಣ ತಾನೇ ದೇವ ನೋಡಾ
ಅಪ್ರಮಾಣಕೂಡಲಸಂಗಮದೇವ. /೫೯೮ [1]

'ಸಕಲಾಗಮ ಶಿಖಾಮಣಿ' ಅಪ್ರಮಾಣದೇವನ ಕೃತಿಯ ಹೆಸರು, ಇದರಲ್ಲಿ 'ಅಪ್ರಮಾಣ ಕೂಡಲ ಸಂಗಮದೇವ' ಅಂಕಿತದ ಒಟ್ಟು ೯೨೦ ವಚನಗಳು ಸಂಕಲನಗೊಂಡಿವೆ. ಇದು ಒಂದು ಶುದ್ಧ ತಾತ್ವಿಕ ಶಾಸ್ತ್ರ ಕೃತಿ. ಚೆನ್ನಬಸವಾದಿಗಳು ಹೇಳಿದ ಲಿಂಗಾಯತ ಧರ್ಮತತ್ವಗಳನ್ನು ವ್ಯವಸ್ಥಿತವಾಗಿ ಪ್ರತಿಪಾದಿಸುವುದೇ ಇದರ ಪರಮ ಉದ್ದೇಶ. ಸೃಷ್ಟಿಯ ಉತ್ಪತ್ತಿಯಿಂದ ಹಿಡಿದು ಲಿಂಗಾಂಗ ಸಾಮರಸ್ಯ ವರೆಗಿನ ವಿಷಯಗಳು ಇಲ್ಲಿ ಅನೇಕ ಉಪಶೀರ್ಷೆಕೆಗಳ ಅಡಿಯಲ್ಲಿ ವಿವರಗೊಂಡಿವೆ. ಅಪ್ರಮಾಣದೇವ ಒಬ್ಬ ಉದ್ದಾಮ ಪಂಡಿತ, ಶ್ರೇಷ್ಠ ಅನುಭಾವಿ ಎಂಬುದನ್ನು ಈ ವಚನಗಳು ಸಾಕ್ಷೀಕರಿಸುತ್ತವೆ.

ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವರಿಲ್ಲದಂದು,
ಸರಸ್ವತಿ ಮಹಾಲಕ್ಷ್ಮಿ ಗಿರಿಜೆ ಉಮಾಶಕ್ತಿ ಮನೋನ್ಮನಿಶಕ್ತಿ ಮೊದಲಾದ
ಮಹಾಶಕ್ತಿಗಳಿಲ್ಲದಂದು,
ಸಚರಾಚರಂಗಳೆಲ್ಲ ರಚನೆಗೆ ಬಾರದಂದು,
ಅವಾಚ್ಯಪ್ರಣವವಾಗಿದ್ದನು ನೋಡಾ ಇಲ್ಲದಂತೆ,
ನಮ್ಮ ಅಪ್ರಮಾಣಕೂಡಲಸಂಗಮದೇವನು./೩೮೩[1]

ಶುದ್ಧ ತಾತ್ತ್ವಿಕ ಶಾಸ್ತ್ರಕೃತಿ ಲಿಂಗಾಯತ ತತ್ತ್ವವಿವೇಚನೆಯೇ ಇದರ ಪರಮ ಗುರಿ. ತಾನು ಹೇಳುವ ಪ್ರತಿಯೊಂದು ವಿಷಯಕ್ಕೂ ಸಂಸ್ಕೃತ ಪ್ರಮಾಣ ವಾಕ್ಯಗಳನ್ನು ಈತ ನೀಡಿರುವನು ಹೀಗಾಗಿ ವೇದ ಆಗಮ ಉಪನಿಷತ್ತು ಪ್ರಮಾಣ ಸಂಹಿತೆ ಶೃತಿ ಶ್ಮೃತಿ ಸೂಕ್ತ ಮೊದಲಾದವುಗಳಿಂದ ಧಾರಾಳವಾಗಿ ತನ್ನ ವಿಚಾರ ಸಮರ್ಥನೆಗೆ ಉಕ್ತಿಗಳನ್ನು ಎತ್ತಿಕೊಟ್ಟಿರುವನು. ಅನುಭಾವ ಮತ್ತು ಬೆಡಗನ್ನು ಕುರಿತು ಅನೇಕ ವಚನಗಳಿವೆ.

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ವೇದಮೂರ್ತಿ ಸಂಗಣ್ಣ ಬಾಲಬೊಮ್ಮಣ್ಣ Next