*
ಅಂಕಿತ:
|
ಲಲಾಮಭೀಮ ಸಂಗಮೇಶ್ವರಲಿಂಗ
|
ಕಾಯಕ:
|
ವೇದಾಗಮ ಪಂಡಿತನಾಗಿದ್ದ
|
ಕೃತಯುಗದಲ್ಲಿ ಕುಂಜರಯಾಗಕ್ಕೆ, ತ್ರೇತಾಯುಗದಲ್ಲಿ ಅಶ್ವಯಾಗಕ್ಕೆ,
ದ್ವಾಪರದಲ್ಲಿ ಮಹಿಷಯಾಗಕ್ಕೆ, ಕಲಿಯುಗದಲ್ಲಿ ಅಜಯಾಗಕ್ಕೆ,
ಇಂತೀ ವೇದಗಳಿಂದ ವೇದವೇದ್ಯರೆ ನೀವು ?
ವೇದಯಾಗಕ್ಕೆ ವಧೆಯುಂಟೆ ?
ಇಂತೀ ಭೇದವನರಿಯದೆ ಶಾಪಹತರುಗಳಿಗೆ
ಸರ್ವಜ್ಞಾತೃದೃಷ್ಟವಪ್ಪುದೆ ?
ಇಂತೀ ವೇದವೇದ್ಯರು ಶಾಸ್ತ್ರಸಂಪನ್ನರು.
ಪುರಾಣಪೂರ್ವಜ್ಞಾನಯುತರು, ಸಕಲಾಗಮಕ್ಕತೀತರು ಎಮ್ಮವರು,
ಲಲಾಮ ಭೀಮಸಂಗಮೇಶ್ವರಲಿಂಗದೊಳಗಾದ ಶರಣರು. /98
ವೇದಾಗಮ ಪಂಡಿತನಾಗಿದ್ದ ಈತನ ಕಾಲ-೧೧೬0. ಅಂಕಿತ ಲಲಾಮಭೀಮ ಸಂಗಮೇಶ್ವರಲಿಂಗ. ವಚನ ಸಂಖ್ಯೆ-೧0. ಯಜ್ಞ
ಯಾಗಾದಿಗಳನ್ನು ಟೀಕಿಸುತ್ತ, ಜ್ಞಾನ ಸಾಧನೆಯ ರೀತಿಯನ್ನು ವಿವರಿಸುತ್ತಾನೆ. ಗದ್ಯದ ಲಕ್ಷಣವನ್ನು ಅಳವಡಿಸಿಕೊಂಡ
ವಚನಗಳಲ್ಲಿ ಅನೇಕ ಸಂಸ್ಕೃತೋಕ್ತಿಗಳನ್ನು ಬಳಸುತ್ತಾನೆ. 'ಜ್ಞಾನ' ಕೇವಲ ಕೆಲವರ ಗುತ್ತಿಗೆ ಮಾತ್ರವಲ್ಲ
ಅದು ಸರ್ವರ ಸೊತ್ತೊ ಹೌದು ಎಂಬುದನ್ನು ಸ್ಪಷ್ಟಪಡಿಸುತ್ತಾನೆ.
ಲಿಂಗಾಯತ ಧರ್ಮವನ್ನು ತರ್ಕಬದ್ಧವಾಗಿ ಪ್ರತಿಪಾದಿಸಿರುವನು. ಸಂಸ್ಕೃತ ಶ್ಲೋಕಗಳ ಉಲ್ಲೇಖ ವಿಶೇಷವಾಗಿ
ಬಂದಿದೆ. ಯಜ್ಞಯಾಗಾದಿಗಳ ಖಂಡನೆ ಉಗ್ರವಾಗಿ ಬಂದಿದೆ
ಪೂರ್ವಚಿಂತನೆಯಿಂದ ಕಂಡು, ಉತ್ತರಚಿಂತನೆಯಿಂದ ಖಂಡಿಸಿ,
ಲಕ್ಷಾಲಕ್ಷವೆಂಬ ಬೀಜಾಕ್ಷರದ ಪ್ರಣವದ
ಮೂಲಾಕ್ಷರದ ಚತುರ್ಭೆದವನರಿದು,
ಪಂಚಾಕ್ಷರಿ ಮುಂತಾದ ಷಡಕ್ಷರಿಯೊಳಗಾದ,
ಐವತ್ತೊಂದನೆಯ ಅಕ್ಷರದಲ್ಲಿ ನಿರ್ವಾಹವೇದ ಮುಂತಾದ ಶಾಸ್ತ್ರದೊಳಗಾದ,
ಪುರಾಣಾಗಮಂಗಳೆಲ್ಲವೂ ನಾನಾರೆಂಬುದ ತಿಳಿವುದಕಿಕ್ಕಿದ ಭಿತ್ತಿ.
ತನ್ನ ತಾನರಿದ ಮತ್ತೆ ಮಿಕ್ಕಾದ ಉಳುಮೆ ತನಗನ್ಯಭಿನ್ನವಿಲ್ಲ.
ಲಲಾಮಭೀಮಸಂಗಮೇಶ್ವರಲಿಂಗವಲ್ಲದಿದೆರೆಡೆಯಲ್ಲ. / 102
*