ಅಕ್ಕಮಹಾದೇವಿ | ಶರಣ ಡೋಹರ ಕಕ್ಕಯ್ಯ |
ಅಂಬಿಗರ ಚೌಡಯ್ಯ |
ಅಂಕಿತ: | ಅಂಬಿಗರ ಚೌಡಯ್ಯ |
ಕಾಯಕ: | ದೋಣಿ ನಡೆಸುವ ಅಂಬಿಗ ವೃತ್ತಿ |
ಅಂಬಿಗರ ಚೌಡಯ್ಯ ೧೨ನೇ ಶತಮಾನದ ಬಸವಣ್ಣನವರ ಅನುಯಾಯಿ ಶರಣ. ಸಾವಿರಾರು ವರ್ಷಗಳಿಂದ ಧರ್ಮ-ದೇವರುಗಳ ಬಗೆಗೆ ಜನ ಸಮೂಹದಲ್ಲಿದ್ದ ಮೂಢನಂಬಿಕೆಗಳನ್ನೆಲ್ಲ ಗುರು ಬಸವಣ್ಣನವರೊಂದಿಗೆ ಅಂಬಿಗರ ಚೌಡಯ್ಯ ಹೊಡೆದೋಡಿಸುತ್ತಲೇ ವಿಚಾರ ಪರ ವಾದ, ವಾಸ್ತವವಾದ ಅಂಶಗಳನ್ನು ಜನಮನದಲ್ಲಿ ಮೂಡಿಸಿದರು. ಧರ್ಮ-ದೇವರು ಕೇವಲ ಶ್ರೀಮಂತರ ಸೋತ್ತಾಗಿದ್ದ ಅಂದಿನ ಸಂದರ್ಭದಲ್ಲಿ ಪೂಜೆ-ಮೋಕ್ಷ ಕೇವಲ ನೇಮವಂತರ, ಬ್ರಾಹ್ಮಣರ ಗುತ್ತಿಗೆಯಾಗಿದ್ದ ಸಮಯದಲ್ಲಿ ಭಾಷ್ಯಕಾರರು ಹೇಳಿದ್ದೇ ಸರಿಯೆನ್ನುವ ವ್ಯವಸ್ಥೆಯಲ್ಲಿ ಚೌಡಯ್ಯ ಈ ಮೂವರನ್ನು ಕ್ರೂರ ಕರ್ಮಿಗಳೆಂದು, ಸಂದೇಹಿಗಳೆಂದು ಕಟುವಾಗಿ ಟೀಕಿಸುವುದರ ಮೂಲಕ ಇವರು ಹೋದ ದಾರಿಯಲ್ಲಿ ಯಾರೂ ಹೋಗ ಬಾರದೆಂದು ಸ್ಪಷ್ಟಪಡಿಸುತ್ತಾನೆ. ಇವರ ವಚನಗಳು ತುಂಬಾ ಖಾರವಾಗಿರುವುದು ಅವರ ಆತ್ಮ ಬಲವನ್ನು ಹಾಗೂ ಸತ್ಯವನ್ನು ಪ್ರತಿಪಾದಿಸುವಲ್ಲಿ ಹೊಂದಿದ್ದ ಧೈರ್ಯವನ್ನು ತೋರಿಸುತ್ತವೆ.
ಹನ್ನೆರಡನೇ ಶತಮಾನದಲ್ಲಿ ಕಲ್ಯಾಣದ ಶಿವಶರಣರ ಮಧ್ಯದಲ್ಲಿ ಪ್ರಜ್ವಲವಾಗಿ ಬೆಳಗಿದ ಶರಣನೆಂದರೆ ಅಂಬಿಗರ ಚೌಡಯ್ಯ. ಮಾತು ಕಟುವಾದರೂ ದಿಟವನ್ನೆ ನುಡಿದ ದಿಟ್ಟನೀತ ನುಡಿದಂತೆ ನಡೆದವನು, ನಡೆದಂತೆ ನುಡಿದವನು ಅಂಬಿಗರ ಚೌಡಯ್ಯ. ನಿಜಾರ್ಥದಲ್ಲಿ ಒಬ್ಬ ಬಂಡುಕೋರ, ಕ್ರಾಂತಿಕಾರಿ ಶರಣ, ನಿಷ್ಟೂರ ಮನುಷ್ಯ. ಎಲ್ಲಾ ಶರಣರಂತೆ ಈತ ಕಾಯಕಯೋಗಿ ದೋಣಿ ನಡೆಸುವುದು ಅವನ ಕಾಯಕ ಅಂಬಿಗ ಎಂದರೆ ಯಾರು ಅವನ ವಚನವೊಂದರಲ್ಲಿ ಉತ್ತರಿಸುತ್ತಾನೆ:
ಅಂಬಿಗ ಅಂಬಿಗ ಎಂದು ಕುಂದು ನುಡಿಯದಿರಿ
ನಂಬಿದರೆ ಒಂದೇ ಹುಟ್ಟಿನಲ್ಲಿ ಕಡೆಯ ಹಾಯಿಸುವನಂಬಿಗರ ಚೌಡಯ್ಯ
ಈತ ಒಳ್ಳೆಯ ವಚನಕಾರ, ಸುಮಾರು ಈತನ ೨೭೮ ವಚನಗಳು ದೊರಕಿವೆ. ವಚನಾಂಕಿತವನ್ನು ತನ್ನ ಹೆಸರಿನಲ್ಲೆ ಬಳಸಿದ್ದಾನೆ. ಅಂಬಿಗರ ಚೌಡಯ್ಯ ಪರಿಣಾಮ ಬೀರುವಂತೆ ರಚಿಸಿರುವ ಅವನ ವಚನಗಳಲ್ಲಿ ಆಳವಾದ ಅನುಭವ, ಸಾಮಾಜಿಕ ಪ್ರಜ್ಞೆ ಎದ್ದು ಕಾಣುತ್ತದೆ. ಈತನ ಜನ್ಮಸ್ಥಳ ಗುಲ್ಬರ್ಗ ಜಿಲ್ಲೆಯ ಅಫಜಲ್ ಪುರ ತಾಲ್ಲೋಕಿನ ಚೌಡದಾನಪುರವೆಂದು ಸಂಶೋಧಕರು ಹೇಳಿದ್ದಾರೆ.
ಅಂಬಿಗರ ಚೌಡಯ್ಯ ವಿಚಾರವಂತ, ಹಿರಿಯರು ಹೇಳಿದ್ದಾರೆಂದು ಯಾವುದೇ ತತ್ವವನ್ನು ಕುರುಡಾಗಿ ಅನುಸರಿಸುತ್ತಿರಲಿಲ್ಲ, ದಾಕ್ಷಿಣ್ಯ ವಿಲ್ಲದೆ ಚರ್ಚೆ ಮಾಡಿ ಮನಸ್ಸು ಒಪ್ಪಿದರೆ ಮಾತ್ರ ಅಂಗೀಕರಿಸುತ್ತಿದ್ದನು.
ಅಂಬಿಗರ ಚೌಡಯ್ಯ ಏಕದೇವೋಪಾಸಕನು, ಇಷ್ಟಲಿಂಗ ಆರಾಧಕನು, ದೇವಾಲಯ ಗುಡಿಗುಂಡಾರ ವಿರೋಧಿಯಾತ, ಇಷ್ಟಲಿಂಗಪೂಜೆ ಪ್ರತಿಯೊಬ್ಬರು ಮಾಡಬೇಕು. ಇಲ್ಲಿ ಯಾವ ಭೇಧಭಾವ ಇಲ್ಲ. ದೇಹವನ್ನೇ ದೇವಾಲಯವಾಗಿಸಿಕೊಳ್ಳಲು ಅದು ಸಾಧನ ಎಂದನು. ಇಷ್ಟಲಿಂಗವನ್ನು ಪೂಜಿಸದೆ ಬೆಟ್ಟದ ಲಿಂಗ, ಅಂದರೆ ಸ್ಥಾವರಲಿಂಗಕ್ಕೆ ಹೋಗಿ ಬೀಳುವ ಮೂಢರನ್ನು ಕಂಡ ಚೌಡಯ್ಯ ಹೀಗೆ ಹೇಳಿದ್ದಾನೆ.
ಕಟ್ಟಿದ ಲಿಂಗವ ಬಿಟ್ಟು
ಬೆಟ್ಟದ ಲಿಂಗಕ್ಕೆ ಹೋಗಿ
ಅಡಿಮೇಲಾಗಿ ಬೀಳುವ
ಲೊಟ್ಟೆಮೂಳರ ಕಂಡಡೆ
ಗಟ್ಟಿ ಪಾದರಕ್ಸೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ
ನಮ್ಮ ಅಂಬಿಗರ ಚೌಡಯ್ಯ.
ಸಮಾಜದಲ್ಲಿದ್ದ ತಾರತಮ್ಯ ನೀತಿಯ ವಿರುದ್ಧ ಹೋರಾಡಿ ಹೊಸ ವ್ಯವಸ್ಥೆಯ ಸೈದ್ಧಾಂತಿಕ ನೆಲೆಗಟ್ಟನ್ನು ಭದ್ರಗೊಳಿಸಿದ ಅಂಬಿಗರ ಚೌಡಯ್ಯ ನಿಜ ಶರಣನು. ಸಮಾಜದ ಅನಾಚಾರ, ಅತ್ಯಾಚಾರ, ಢಂಬಾಚಾರಗಳನ್ನೂ ನಿರ್ಭಿತಿಯಿಂದ ಕಟುವಾಗಿ ಟೀಕಿಸಿದವನು. ತನ್ನ ವಚನಗಳನ್ನು ವೈಚಾರಿಕ ವಾಗಿ ನಿರೂಪಿಸಿ ಮಹಾಮಾನವತಾವಾದಿಯಾಗಿದ್ದಾನೆ.
ಅಂಬಿಗರ ಚೌಡಯ್ಯ ಅವರ ಅಧ್ಯಯನಕ್ಕಾಗಿ ಮಂಗಳೂರು ವಿಶ್ವವಿದ್ಯಾಲಯದಲ್ಲಿ "ಅಂಬಿಗರ ಚೌಡಯ್ಯ ಅಧ್ಯಯನ ಪೀಠ"ವನ್ನು ದಿನಾಂಕ ೨೫ನೇ ಜನೆವರಿ ೨೦೧೨ ರಂದು ಕನ್ನಡದ ಹೆಸರಾಂತ ಲೇಖಕರಾದ ಬರಗೂರ ರಾಮಚಂದ್ರಪ್ಪ ಉಧ್ಘಾಟಿಸಿದರು.
ಕಟ್ಟಿದ ಲಿಂಗವ ಕಿರಿದು ಮಾಡಿ,
ಬೆಟ್ಟದ ಲಿಂಗವ ಹಿರಿದು ಮಾಡುವ ಪರಿಯ ನೋಡ!
ಇಂತಪ್ಪ ಲೊಟ್ಟಿಮೂಳರ ಕಂಡರೆ
ಗಟ್ಟಿವುಳ್ಳ ಪಾದರಕ್ಷೆಯ ತೆಗೆದುಕೊಂಡು
ಲೊಟಲೊಟನೆ ಹೊಡೆಯೆಂದಾತ ನಮ್ಮ ಅಂಬಿಗರ ಚೌಡಯ್ಯ.
ಕಂಥೆ ತೊಟ್ಟವ ಗುರುವಲ್ಲ,
ಕಾವಿ ಹೊತ್ತವ ಜಂಗಮವಲ್ಲ,
ಶೀಲ ಕಟ್ಟಿದವ ಶಿವಭಕ್ತನಲ್ಲ,
ನೀರು ತೀರ್ಥವಲ್ಲ,
ಕೂಳು ಪ್ರಸಾದವಲ್ಲ.
ಹೌದೆಂಬವನ ಬಾಯ ಮೇಲೆ
ಅರ್ಧಮಣದ ಪಾದರಕ್ಷೆಯ ತೆಗೆದುಕೊಂಡು
ಮಾಸಿ ಕಡಿಮೆಯಿಲ್ಲದೆ ತೂಗಿ ತೂಗಿ ಟೊಕಟೊಕನೆ ಹೊಡೆ ಎಂದಾತ ನಮ್ಮ ಅಂಬಿಗರ
ಚೌಡಯ್ಯ.
ಅಂಗವ ಅಂದ ಮಾಡಿಕೊಂಡು ತಿರುಗುವ
ಭಂಗಗೇಡಿಗಳು ನೀವು ಕೇಳಿರೋ.
ಅಂಗಕ್ಕೆ ಅಂದವಾವುದೆಂದರೆ:
ಗುರುವಿಗೆ ತನುವ ಕೊಟ್ಟಿರುವುದೆ ಚೆಂದ,
ಲಿಂಗಕ್ಕೆ ಮನವ ಕೊಟ್ಟಿರುವುದೆ ಚೆಂದ,
ಜಂಗಮಕ್ಕೆ ಧನವ ಕೊಟ್ಟಿರುವುದೆ ಚೆಂದ.
ಅಷ್ಟಾವರಣದಲ್ಲಿ ನಿಬ್ಬೆರಗಿನಿಂದ ಕೂಡಿ
ಭಕ್ತಿಯೆಂಬ ಸಮುದ್ರದಲ್ಲಿ ಈಸಾಡುವುದೆ ಚೆಂದ.
ಶಿವನ ಪಾದವ ಹೊಂದುವುದೆ ಚೆಂದ.
ಈ ಮಾರ್ಗವ ಬಿಟ್ಟು, ಸಂಸಾರವೇ ಅಧಿಕವೆಂದು
ತನ್ನ ಹೆಂಡಿರು ಮಕ್ಕಳು ಸಂಪತ್ತು ಇವು [ತ]ನಗೆ ಶಾಶ್ವತವೆಂದು ತಿಳಿದು,
ಒಂದು ಕಾಸನಾದರೂ ಪರರಿಗೆ ಕೊಡದೆ,
ತಾನೇ ತಿಂದು, ನೆಲದಲ್ಲಿ ಮಡಗಿ,
ಕಡೆಗೆ ಯಮನ ಕೈಯಲಿ ಸಿಲ್ಕಿ
ನರಕ ಕೊಂಡದಲ್ಲಿ ಮುಳುಗೇಳುವುದೇ ನಿಶ್ಚಯ.
ಇಂತಹ ಅಂದಗೇಡಿಗಳ ಮುಖವ ನೋಡಲಾಗದೆಂದಾತ,
ನಮ್ಮ ಅಂಬಿಗರ ಚೌಡಯ್ಯ ನಿಜಶರಣನು.
ಅಕ್ಕಮಹಾದೇವಿ | ಶರಣ ಡೋಹರ ಕಕ್ಕಯ್ಯ |