ಕೂಗಿನ ಮಾರಯ್ಯ

*
ಅಂಕಿತ: ಮಹಾಮಹಿಮಮಾರೇಶ್ವರ
ಕಾಯಕ: ಕೂಗು ಹಾಕುವುದು (ಕಲ್ಯಾಣದಲ್ಲಿ ಬಿಜ್ಜಳನ ಸೈನ್ಯಬಂದಾಗ ಉಚ್ಚ ಧ್ವನಿಯಲ್ಲಿ ಕೂಗುಹಾಕುತ್ತಿದ್ದನು)

೭೮
ಖ್ಯಾತಿಲಾಭಕ್ಕೆ ಮಾಡೂದು ಎಂಬುದನರಿದು
ಭೂತಹಿತ ದಯದಾಕ್ಷಿಣ್ಯಕ್ಕೆ ಇಕ್ಕುವಾತನೆಂಬುದನರಿದು
ಮಹಿಮಾಸ್ಪದರಿಂದ ವೀರವೈರಾಗ್ಯಂಗಳಿಂದ
ಇಕ್ಕುವಾತನೆಂಬುದನರಿದು
ಮಾಡಿಕೊಂಡ ಕೃತ್ಯಕ್ಕೆ ಬಿಟ್ಟಡೆ ನುಡಿದಹರೆಂದು
ಗುತ್ತಗೆಯಲ್ಲಿ ಇಕ್ಕುವಾತನೆಂಬುದನರಿದು
ಅರ್ತಿ ತಪ್ಪದೆ ಬಾಹ್ಯದ ಭಕ್ತಿ ತಪ್ಪದೆ
ಅರ್ಚನೆ ಪೂಜನೆಗಳಲ್ಲಿ ನಿತ್ಯನೇಮ ತಪ್ಪದೆ
ಸುಚಿತ್ತ ಧರ್ಮದಲ್ಲಿ ಮಾಡುವವನರಿದು
ಇಂತೀ ವರ್ಮಧರ್ಮಂಗಳಲ್ಲಿ ಅರಿದು
ಸುಮ್ಮಾನದ ಸುಖತರದಲ್ಲಿ ಮಾಡುವ ವರ್ಮಿಗನನರಿದು
ಆರಾರ ಭಾವದ ಕಲೆಯನರಿದು,
ಗುಣವೆಂದು ಸಂಪಾದಿಸದೆ
ಅವಗುಣವೆಂದು ಭಾವದಲ್ಲಿ ಕಲೆಗೆ ನೋವ ತಾರದೆ
ಇಂತೀ ಸರ್ವಗುಣ ಸಂಪನ್ನನಾಗಿ
ಪೂಜಿಸಿಕೊಂಬ ಗುರುವಿಂಗೆ ಚರಿಸುವ ಜಂಗಮಕ್ಕೆ
ಉಪಾಧಿ ನಷ್ಟವಾದ ವಿರಕ್ತಂಗೆ
ಕೂಗಿಂದಿತ್ತ ನಮೋ ಎಂದು ಬದುಕಿದೆ
ಮಹಾಮಹಿಮ ಮಾರೇಶ್ವರಾ.

ಎಚ್ಚರಿಸುವ ಕಾಯಕವನ್ನು "ಕೈಕೊಂಡಿದ್ದ ಈತನ ಕಾಲ - ೧೧೬೦. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಈತ ಶರಣರ ರಕ್ಷಣೆಯ ಹೊಣೆಯನ್ನು ಹೊತ್ತು ಬಿಜ್ಜಳನ ಸೈನ್ಯದ ಬರವಿನ ಸೂಚನೆಯನ್ನು ಎತ್ತರದ ಧ್ವನಿಯಲ್ಲಿ ಕೂಗಿ ಹೇಳಿ ಎಚ್ಚರಿಸುತ್ತದ್ದನಂತೆ. ಶರಣರು ಮತ್ತು ಬಿಜ್ಜಳನ ಸೈನ್ಯದ ಮಧ್ಯ ಮುರಗೋಡಿನ ಬಳಿ ನಡೆದ ಹೋರಾಟದಲ್ಲಿ ಮಡಿಯುತ್ತಾನೆ. 'ಮಹಾಮಹಿಮ ಮಾರೇಶ್ವರ' ಅಂಕಿತದಲ್ಲಿ ಈತ ರಚಿಸಿದ ೧೧ ವಚನಗಳು ದೊರೆತಿವೆ. ಷಶುಸ್ಥಲಗಳ ಸ್ವರೂಪ, ನಿಜಭಕ್ತನ ನಿಲುವು ಮುಂತಾದ ವಿಷಯಗಳ ಪ್ರತಿಪಾದನೆ ಅವುಗಳಲ್ಲಿದೆ.

೮೩
ಲಿಂಗಕ್ಕೆ ಹೊರೆಯಲ್ಲದೆ
ನಿಜಶಿಲೆಯ ದೀಪ್ತಿಯ ತರಂಗಕ್ಕೆ ಹೊರೆ ಹೊರೆಯುಂಟೆ?
ಸಂಸಾರಿಗೆ ಪ್ರಕೃತಿ ರಾಗದ್ವೇಷಂಗಳಲ್ಲದೆ
ಮನವು ಮಹದಲ್ಲಿ ನಿಂದ ನಿಜಲಿಂಗಾಂಗಿಗೆ
ಈ ಉಭಯದ ಸಂದುಂಟೆ?
ಈ ಗುಣದಂಗಲಿಂಗಾಂಗಿಯ ಸಂಗ
ಮಹಾಮಹಿಮ ಮಾರೇಶ್ವರಾ.

೭೭
ಅಪ್ಪುವಿನ ಶಿಲೆಯ ಉಳಿಯ ಮೊನೆಯಲ್ಲಿ ಚಿತ್ರಿಸಬಹುದೇ?
ಅರಗಿನ ಘಟವ ಉರಿಯ ಮೊನೆಯಲ್ಲಿ ಅಕ್ಷರವ ಬರೆಯಬಹುದೆ?
ಮೃತ್ತಿಕೆಯ ಹರುಗೋಲನೇರಿ ನದಿಯ ತಪ್ಪಲಿಗೆ ಹೋಗಬಹುದೆ?
ನಿಜನಿಶ್ಚಯವನರಿಯದವನ ವಾಚಾರಚನೆ ಇಷ್ಟಲ್ಲದಿಲ್ಲ.
ನಿಜತತ್ತ್ವವನರಿದವನ ವಾಚಾರಚನೆಯ ಕುರುಹೆಂತುಟೆಂದಡೆ:
ಶಿಲೆಯೊಳಗಣ ಸುರಭಿಯಂತೆ
ಪ್ರಳಯದೊಳಗಾದ ನಿಜನಿವಾಸದಂತೆ
ಆಯದ ಘಾಯದಂತೆ, ಸುಘಾಯದ ಸುಖದಂತೆ
ಇಂತೀ ಭಾವರಹಿತವಾದ ಭಾವಜ್ಞನ ತೇರ ಕೂಗಿಂಗೆ ಹೊರಗು
ಮಹಾಮಹಿಮ ಮಾರೇಶ್ವರಾ


*
Previousಕುಷ್ಟಗಿ ಕರಿಬಸವೇಶ್ವರಕೊಂಡೆ ಮಂಚಣ್ಣನಗಳ ಪುಣ್ಯಸ್ತ್ರೀ ಲಕ್ಷ್ಮಮ್ಮNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.