ಗುಪ್ತ ಮಂಚಣ್ಣ

*
ಅಂಕಿತ: ನಾರಾಯಣಪ್ರಿಯ ರಾಮನಾಥ
ಕಾಯಕ: ಕಲ್ಯಾಣದ ಅರಸು ಬಿಜ್ಜಳನ ಮಂತ್ರಿಯಾಗಿದ್ದ

೩೧೧
ಕಾಡಿ ಬೇಡಿ ಉಂಬರೆಲ್ಲರು ಜಗದ ರೋಡಗವಂತರು.
ಬೇಡದೆ ಕಾಡದೆ ಚಿತ್ತದಲ್ಲಿ ಆಸೆಯ ಕಲೆದೋರದೆ,
ಹೊತ್ತ ಘಟಕ್ಕೆ ತುತ್ತು, ಶೀತಕ್ಕೆ ಅಂಬರ
ನಿರ್ಜಾತನ ಒಲುಮೆ ಎಲ್ಲಿದ್ದರೂ ತಪ್ಪದೆಂದು
ವಿಶ್ವಾಸವುಳ್ಳ ಶರಣಂಗೆ
ಅವ ತೊಟ್ಟಿದ್ದುದು ಅದೇತರ ಕಾಯ? ದಗ್ಧಪಟ ನ್ಯಾಯ!
ನಾರಾಯಣಪ್ರಿಯ ರಾಮನಾಥನಲ್ಲಿ ಕಳೆದುಳಿದಶರಣಂಗೆ!

ಕಲ್ಯಾಣದ ಅರಸು ಬಿಜ್ಜಳನ ಮಂತ್ರಿಯಾಗಿದ್ದ ಈತನ ತಂದೆ ದಾಮೋದರ; ತಾಯಿ ಮಾಯಾವಾದಿ. ಮೂಲತಃ ವೈಷ್ಣವ ಮತಕ್ಕೆ ಸೇರಿದ ಈತ ಬಸವಣ್ಣನವರ ಪ್ರಭಾವದಿಂದ ಶರಣಧರ್ಮಕ್ಕೆ ಮಾರುಹೋಗಿ ಗುಪ್ತವಾಗಿ ಶಿವಭಕ್ತಿಯನ್ನು ಅಚರಿಸುತ್ತಾನೆ. ಒಮ್ಮೆ ಅದು ಪ್ರಕಟವಾಗಲು ಮು೦ದೆ ಬಹಿರಂಗವಾಗಿಯೇ ಅನುಭವ ಮಂಟಪದ ಶಿವಾನುಭವಗೋಷ್ಠಿಗಳಲ್ಲಿ ಭಾಗವಹಿಸುತ್ತಾನೆ. ಇಡೀ ಬದುಕನ್ನು ಶಿವಭಕ್ತಿಗಾಗಿ ಮಿಸಲಿಟ್ಟು ಕಲ್ಯಾಣದಲ್ಲಿಯೇ ಐಕ್ಯನಾಗುತ್ತಾನೆ. ಈತನ ಕಾಲ - ೧೧೬೦. 'ನಾರಾಯಣಪ್ರಿಯ ರಾಮನಾಥ' ಎ೦ಬುದು ಈತನ ಅಂಕಿತ. ೧೦೨ ವಚನಗಳು ದೊರೆತಿವೆ. ವೈಷ್ಣವ ಧಮ೯ದಿಂದ ಶರಣಧರ್ಮಕ್ಕೆ ಪರಿವರ್ತನೆಗೊಳ್ಳುವಾಗ ಉ೦ಟಾದ ಮಾನಸಿಕ ತೊಳಲಾಟದ ಚಿತ್ರ ಅವುಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ. ಅನೇಕ ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ. ಈತ ಬಳಸುವ ಸಂದರ್ಭೋಚಿತ ಉಕ್ತಿಗಳಲ್ಲಿ ಲೋಕಾನುಭವ ಒಡೆದು ತೋರುತ್ತದೆ.

೩೬೯
ಲಿಂಗಪೂಜೆಯ ಮಾಡುವಲ್ಲಿ
ಮನ ಗುರಿಯ ತಾಗಿದ ಕೋಲಿನಂತಿರಬೇಕು.
ಶಿವಲಿಂಗಪೂಜೆಯ ಮಾಡುವಲ್ಲಿ
ಶ್ರವಕ್ಕೆ ಸಂಜೀವನ ಹುಟ್ಟಿದಂತಿರಬೇಕು.
ಹೀಗಲ್ಲದೆ ಪೂಜೆಯಲ್ಲ.
ಒಳಗಣ ಹುಳುಕು ಮೇಲಕ್ಕೆ ನಯವುಂಟೆ,
ಆ ತರು ಒಣಗುವವಲ್ಲದೆ?
ಇಂತೀ ಬರುಬರ ಅರ್ಚನೆ ಹುರಿಯ ಬೊಂಬೆಯಂತೆ.
ಇಂತೀ ಅರಿಗುರಿಗಳ ಪೂಜೆ ಬರುಕಟೆಯಂತೆ
ನಾರಾಯಣಪ್ರಿಯ ರಾಮನಾಥಾ.


೩೬೭
ರುದ್ರ ದೈವವಾದಡೆ ಕಪಾಲವ ಹೊತ್ತು ತಿರುಗಲೇಕೆ?
ವಿಷ್ಣು ದೈವವಾದಡೆ ದಶಾವತಾರಕ್ಕೊಳಗಾಗಲೇಕೆ?
ಬ್ರಹ್ಮ ದೈವವಾದಡೆ ಶಿರವ ಹೋಗಾಡಲೇಕೆ?
ಇಂತೀ ಮೂರು ಅಳಿವಿಂಗೊಳಗು.
ಅನಾದಿ ಚಿಚ್ಛಕ್ತಿಯ ಅಂಶೀಭೂತ
ಮಾಯಿಕ ಸಂಬಂಧ ದೇಹಿಕರು;
ಅವತಾರಮೂರ್ತಿಗಳಾದ ರಣಜಗದ ದೈವಂಗಳಿವರು.
ಇವರ ಭೇದ ದರ್ಪಣದ ಒಳ ಹೊರಗಿನಂತಪ್ಪ ಭೇದ.
ನಿಶ್ಚಯವಂತರು ತಿಳಿದು ನೋಡಿರಣ್ಣಾ,
ತಿಳಿದಡೆ ಇರವು ಉದಕದೊಳಗಣ ವಿಕಾರದಂತೆ
ಬಯಲೊಳಗಣ ಮರೀಚಿಯಂತೆ ಹಿಂಗದ ವಸ್ತು
ನಾರಾಯಣಪ್ರಿಯ ರಾಮನಾಥನಲ್ಲಿ ಗುಣವಿರಹಿತ ಶರಣಂಗೆ.


*
Previousಗುಂಡಯ್ಯಗಳ ಪುಣ್ಯಸ್ತ್ರೀ ಕೇತಲದೇವಿಗುರುಪುರದ ಮಲ್ಲಯ್ಯNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.