ಜೇಡರ ದಾಸಿಮಯ್ಯ

*
ಅಂಕಿತ: ರಾಮನಾಥ
ಕಾಯಕ: ನೇಯ್ಗೆ

೭೪೬
ಎತ್ತಪ್ಪೆ ಶರಣಂಗೆ, ತೊತ್ತಪ್ಪೆ ಶರಣಂಗೆ
ಭೃತ್ಯನಾಗಿ ಸದ್ಭಕ್ತರ ಮನೆಯ ಬಾಗಿಲು ಕಾಯ್ದಿಪ್ಪ ಸೊಣಗನಪ್ಪೆ.
ಕರ್ತಾರ! ನಿನಗೆ ಕರವೆತ್ತಿ ಹೊಡವಡುವ
ಭಕ್ತರ ಮನೆಯ ಹಿತ್ತಿಲ ಬೇಲಿಯಾಗಿಪ್ಪೆನಯ್ಯಾ,ರಾಮನಾಥ.

ಆದ್ಯ ವಚನಕಾರ. ಗುಲಬರ್ಗಾ ಜೆಲ್ಲೆಯ ಮುದನೂರು ಜನ್ಮಸ್ಥಳ, ತಂದೆ ಕಾಮಯ್ಯ, ತಾಯಿ ಶಂಕರಿ, ಹೆಂಡತಿ ದುಗ್ಗಳೆ, ಕಾಯಕ ಬಟ್ಟೆ ನೇಯುವುದು. ರಾಮನಾಥ ಅಧಿದೈವ. ಶಿವನಿಗೆ ವಸ್ತ್ರವನ್ನಿತ್ತು ತವನಿಧಿ ಪಡೆದೆನೆಂಬ ಈತನ ಅಹಂಕಾರವನ್ನು ಶಂಕರದಾಸಿಮಯ್ಯ ಮುರಿದ, ಶ್ರೇಷ್ಠ ವಚನಕಾರ. ಕಾಲ ೧೧೦೦ 'ರಾಮನಾಥ' ಅಂಕಿತದಲ್ಲಿ ೧೭೬ ವಚನಗಳು ದೊರಿತಿವೆ. ವಚನ ಸಾಹಿತ್ಯದ ಸ್ವರೂಪ, ಲಕ್ಷಣ, ಆಶಯಗಳನ್ನೆಲ್ಲ ಒಳಗೊಂಡ ಇವು ಶರಣಧರ್ಮದ ಪರಿಭಾಷೆಗಳನ್ನು ರೂಪಿಸಿಕೊಟ್ಟಿವೆ.

೭೫೭
ಒಡಲುಗೊಂಡವ ಹಸಿವ; ಒಡಲುಗೊಂಡವ ಹುಸಿವ
ಒಡಲುಗೊಂಡವನೆಂದು
ನೀನೆನ್ನ ಜರಿದೊಮ್ಮೆ ನುಡಿಯದಿರ!
ನೀನೆನ್ನಂತೆ ಒಮ್ಮೆ ಒಡಲುಗೊಂಡು ನೋಡ!
ರಾಮನಾಥ.

ದಾಸಿಮಯ್ಯನ ವಚನಗಳು ಸಂಕ್ಷಿಪ್ತತೆ, ಸರಳತೆ, ಹಾಗೂ ಅರ್ಥವಂತಿಕೆಯನ್ನು ಮುಖ್ಯ ಲಕ್ಷಣವನ್ನಾಗಿಸಿಕೊಂಡು, ಶರಣರ ನುಡಿಗಡಣದ ಮಹತ್ವ, ದಾಂಪತ್ಯಧರ್ಮ, ಸ್ತ್ರೀ-ಪುರುಷ ಸಮಾನತೆ, ಗುರುವಿನ ಶ್ರೇಷ್ಠತೆ, ಒಡಲ ಹಸಿವಿನ ತೀವ್ರತೆ, ದೇವನ ದಾನಗುಣ, ಮಾನವನ ಸ್ವಾರ್ಥ, ಸಮಾಜದ ವೈಪರೀತ್ಯಗಳ ವಿಡಂಬನೆ, ಸರ್ವಸಮಾನತೆಯ ಬಯಕೆಗಳನ್ನು ತುಂಬ ಆತ್ಮೀಯವಾಗಿ ಪ್ರಕಟಿಸುತ್ತವೆ.

೭೬೨
ಒಲವಸವಿಲ್ಲದ ಭಕ್ತಿ, ಲವಲವಿಕೆಯಿಲ್ಲದ ಪೂಜೆ,
ಸಲೆ ನಿಮ್ಮ ನಂಬಿಯೂ ನಂಬದವನ ಬಾಳುವೆ,
ಹೊಲೆಯರ ನಾಯ ಹುಲುಸರವಿಯಿಂದ ಕರಕಷ್ಟಕಾಣ!
ರಾಮನಾಥ.

ಹೊಸದೊಂದು ಧರ್ಮ, ಹೊಸ ಸಾಹಿತ್ಯ ರೂಪ, ಹೊಸ ಬದುಕಿನ ಕನಸುಗಳನ್ನು ಕಟ್ಟಿಕೊಟ್ಟ, ಜೇಡರದಾಸಿಮಯ್ಯನಿಗೆ ಕರ್ನಾಟಕದ ಧಾರ್ಮಿಕ ಮತ್ತು ಸಾಹಿತ್ಯಿಕ ಕ್ಷೇತ್ರದಲ್ಲಿ ತುಂಬ ಗೌರವಾನ್ವಿತವಾದ ಸ್ಥಾನ ಮೀಸಲಾಗಿದೆ.

೮೮೪
ಹೊಲಬನರಿಯದ ಗುರು
ಸುಲಭನಲ್ಲದ ಶಿಷ್ಯ
ಕೆಲಬಲನ ನೋಡದುಪದೇಶ
ಅಂಧಕನ ಲಾಭ ಹೊಕ್ಕಂತೆ ಕಾಣಾ! ರಾಮನಾಥ.

೮೭೦
ಹಂದಿ ಶ್ರೀಗಂಧವ ಹೂಸಿದಡೇನು?
ಗಂಧರಾಜನಾಗಬಲ್ಲುದೆ?
ನವಿಲು ನಲಿಯಿತ್ತೆಂದಡೆ
ಕಾಕೋಳಿ ಪುಕ್ಕವ ತರಕೊಂಡಂತೆ
ಕರ್ಮಿಗಳ ಭಕ್ತಿ!
ಹೊರವೇಷದ ವಿಭೂತಿ ರುದ್ರಾಕ್ಷಿಯ ಹೂಸಿದಡೆನು
ತೆರನನರಿದು ಮರವೆಯ ಕಳದು
ಮಾತಿನಂತೆ ನೀತಿಯುಳ್ಳಡೆ
ಅವರ ಅಜಾತರೆಂಬೆ ಕಾಣಾ! ರಾಮನಾಥ.


*
Previousಜಗಳಗಂಟ ಕಾಮಣ್ಣಜೋದರ ಮಾಯಣ್ಣNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.