ಷಟಸ್ಥಲ ಚಕ್ರವರ್ತಿ ಚೆನ್ನಬಸವಣ್ಣ

*

ಚಿನ್ಯಯಜ್ಞಾನಿ ಚೆನ್ನಬಸವಣ್ಣ

ಅಂಕಿತ: ಕೂಡಲಚೆನ್ನಸಂಗಮದೇವ
ಕಾಯಕ: ಆಚಾರ್ಯ ಪುರುಷ, ಮೂರನೇಯ ಶೂನ್ಯ ಪೀಠಾಧ್ಯಕ್ಷ

ಚನ್ನಬಸವಣ್ಣನವರ ವ್ಯಕ್ತತ್ವದ ಬಗೆಗೆ ಷಟಸಥಲಸಿದ್ಧಾಂತ ಮತ್ತು ಆಚರಣೆಯ ನಿರ್ಣಯದಲ್ಲಿ ಚನ್ನಬಸವಣ್ಣನವರು ವಹಿಸಿದ ಮಹತ್ವಪೂರ್ಣ ಪಾತ್ರವನ್ನು ತಿಳಿಯಲು ಸಾಕಷ್ಟು ಸಾಮಗ್ರಿ ನಮಗೆ ದೊರೆಯುತ್ತದೆ. ಆದರೆ ಅವರ ಜೀವನಚರಿತ್ರೆಯ ಬಗ್ಗೆ ಅವರನ್ನೇ ಕುರಿತು ಬರೆದ ವಿರೂಪಾಕ್ಷಪಂಡಿತನ ಚೆನ್ನಬಸವ ಪುರಾಣ ಮತ್ತು ಬೇರೆ ಕೆಲವು ಕೃತಿಗಳಲ್ಲಿ ಸಾಂದರ್ಭಿಕವಾಗಿ ಕೆಲವು ವಿವರಗಳು ದೊರೆಯುತ್ತಿವೆಯಾದರೂ ಒಂದೆರಡು ವಿಷಯಗಳ ಬಗೆಗೆ ಎಲ್ಲವುಗಳಲ್ಲಿಯೂ ಏಕಾಭಿಪ್ರಾಯವಿಲ್ಲ. ಉಪಲಬ್ದ ಸಾಮಗ್ರಿಯನ್ನೇ ಆಧರಿಸಿ ಚನ್ನಬಸವಣ್ಣನವರ ಜೀನವ ಚರಿತ್ರೆಯನ್ನು ಈಗ ನಿರೂಪಿಸಬೇಕಾಗಿದೆ.

ಹನ್ನೆರಡನೆ ಶತಮಾನದಲ್ಲಿ ಕಲ್ಯಾಣದ ಶರಣರಲ್ಲಿ ಅಗ್ರಗಣ್ಯನಾಗಿ ಆಚಾರ್ಯ ಪುರುಷನಾಗಿ ಬೆಳಗಿದ ಚೆನ್ನಬಸವಣ್ಣನು, ಭಕ್ತಿ, ಜ್ಞಾನ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಚೆನ್ನಬಸವಣ್ಣನು ಅವಿರಳಜ್ಞಾನಿ, ಸದಮಲಜ್ಞಾನಿ, ಷಟುಸ್ಥಲ ಸ್ಥಾಪನಾಚಾರ್ಯ, ದಿವ್ಯಗುಣ ಸಂಪನ್ನನೆಂದು ಪ್ರಸಿದ್ಧನಾಗಿದ್ದಾನೆ. ಬಸವಣ್ಣನ ಅಕ್ಕ ನಾಗಲಾಂಬಿಕೆ ಮತ್ತು ಶಿವದೇವರಿಗೆ ಪುತ್ರನಾಗಿ ಕ್ರಿ. ಶ. ೧೧೪೪ ರಲ್ಲಿ ಜನಿಸಿದ ಚೆನ್ನಬಸವಣ್ಣ ಅತಿಚಿಕ್ಕ ವಯಸ್ಸಿನಲ್ಲೇ ಅಸಾಧರಣ ಕಾರ್ಯಗಳನ್ನು ಮಾಡಿದ ಮಹಾಪುರುಷನಾಗಿದ್ದಾನೆ. ಚೆನ್ನಬಸವಣ್ಣ ಕೂಡಲ ಸಂಗಮದಲ್ಲಿ ವಿದ್ಯಾಭ್ಯಾಸ ಮಾಡಿ ಪ್ರತಿಭಾಸಂಪನ್ನನಾದನು ಕಲ್ಯಾಣಕ್ಕೆ ಬಂದ ನಂತರ ಬಸವಣ್ಣನ ಮಹಾಮನೆಯ ಕಾರ್ಯದಲ್ಲಿ ನೆರವಾಗಿ ಧರ್ಮೊದ್ಧಾರ ಕರ್ಯಗಳಲ್ಲಿ ಸಹಯಕನಾದವನು. ಅನುಭವ ಮಂಟಪದ ಎಲ್ಲಾಕಾರ್ಯಗಳು ಚೆನ್ನಬಸವಣ್ಣನವರ ನೇತ್ರತ್ವದಲ್ಲಿ ನಡೆಯುತ್ತಿದ್ದವು. ಅಲ್ಲಮ ಪ್ರಭುವಿನ ಅಪ್ಪಣೆ ಮೇರೆಗೆ ಕಲ್ಯಾಣಕ್ಕೆ ಬಂದ ಸಿದ್ಧರಾಮನಿಗೆ ಲಿಂಗಧಾರಣೆ ಮಾಡಿದ ಮಹಾಮಹಿಮಶಾಲಿ. ಈತ ಅನುಭವ ಮಂಟಪಕ್ಕೆ ಬಂದ ಅಕ್ಕಮಹಾದೇವಿಯ ದಿವ್ಯತ್ವವನ್ನು ಗ್ರಹಿಸಿ ಶಿವಯೋಗ ಶಕ್ತಿಯನ್ನು ಅರಿತ ಅವರು ಆಕೆಯನ್ನು ಹೀಗೆ ಸ್ತುತಿಸಿದ್ದಾರೆ.

ಅಜಕೋಟಿ ವರುಷದವರೆಲ್ಲರೂ ಹಿರಿಯರೇ
ಹುತ್ತೇರಿ ಬೆತ್ತ ಬೆಳೆದ ತಪಸ್ವಿಗಳೆಲ್ಲರೂ ಹಿರಿಯರೇ
ಮತಿಗೆಟ್ಟು ಒಂದನಾಡ ಹೋಗಿ ಒಂಬತ್ತನಾಡುವ
ಅಜ್ಞಾನಿಗಳೆಲ್ಲರೂ ಹಿರಿಯರೇ? ಅನುವರಿದು ಘನವ
ಬೆರೆಸಿ ಹಿರಿಕಿರಿದೆಂಬ ಭೇದವ ಮರೆದು ಕೂಡಲ ಚೆನ್ನ
ಸಂಗಯ್ಯನಲ್ಲಿ ಬೆರೆಸಿ ಬೇರಿಲ್ಲದಿಪ್ಪ ಹಿರಿತನ
ನಮ್ಮ ಮಹಾದೇವಿಯಕ್ಕಂಗಾಯ್ತು.

ಚೆನ್ನಬಸವಣ್ಣ ಶಿವಪಥದಲ್ಲಿ ಆಚಾರ್ಯರಾಗಿದ್ದಂತೆಯೇ ರಾಜನೀತಿಶಾಸ್ತ್ರಜ್ಞರಾಗಿದ್ದರು, ಶೂನ್ಯಪೀಠದ ಅಧ್ಯಕ್ಷರಾದರು. ಅಷ್ಟಾವರಣ, ಪಂಚಾಚಾರ, ಷಟ್ಸ್ಥಲ ಮುಂತಾದ ಮತ ಪ್ರಕ್ರಿಯೆಗಳನ್ನು ರೂಪಿಸಿದರು. ಅವರು ೧೫೦೦ ಕ್ಕೂ ಹೆಚ್ಚು ವಚನಗಳನ್ನು ರಚಿಸಿರುವರು. ಕಲ್ಯಾಣ ಕ್ರಾಂತಿಯ ನಂತರ ಶರಣರನ್ನು ಮತ್ತು ವಚನ ಸಂಪತ್ತನ್ನು ರಕ್ಷಿಸುವ ಹೊಣೆಹೊತ್ತು ಹೋರಾಡಿದರು. ಕೊನೆಗೆ ಅವರು ಉಳವಿಯಲ್ಲಿ ಲಿಂಗೈಕ್ಯರಾದರು. ಅವರ ವಚನವೊಂದರಲ್ಲಿ ದೇವರ ನಿಲುವನ್ನು ಈ ರೀತಿ ಹೇಳಿದ್ದಾರೆ.

ಮರೀಚಿಯೊಳಡಗಿದ ಬಿಸಿಲಿನಂತಿದ್ದಿತ್ತು,
ಕ್ಷೀರದೊಳಡಗಿದ ತುಪ್ಪದಂತಿದ್ದಿತು,
ಚಿತ್ರದೊಳಡಗಿದ ಚಿತ್ರದಂತಿದ್ದಿತು,
ನುಡಿಯೊಳಗಡಗಿದ ಅರ್ಥದಂತಿದ್ದಿತು,
ಕೂಡ ಚೆನ್ನಸಂಗಯ್ಯ ನಿಮ್ಮ ನಿಲುವು.

ಬಸವಣ್ಣವನರ ಸೋದರಿ ಅಕ್ಕನಾಗಮ್ಮನ ಮಗ ಚೆನ್ನಬಸವಣ್ಣನೆಂಬುದರಲ್ಲಿ ಯಾರೂ ಸಂದೇಹ ವ್ಯಕ್ತಪಡಿಸಿಲ್ಲ. ಆದುದರಿಂದ ಚನ್ನಬಸವಣ್ಣ, ಬಸವಣ್ಣನವರ ಸೋದರಳಿಯನಾಗುತ್ತಾನೆ. ಚನ್ನಬಸವಣ್ಣನವರ ಜನ್ಮಸ್ಥಳ ಕಲ್ಯಾಣವೆಂದು ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣ ಮತ್ತು ಸಂದಬರ್ಾನುಸಾರ ಚನ್ನಬಸವಣ್ಣನವರನ್ನು ಉಲ್ಲೇಖಿಸುವ ವೀರಶೈವ(ಲಿಂಗಾಯತ) ಕೃತಿಗಳು ಹೇಳುತ್ತವೆ. ಆದರೆ ಇತ್ತೀಚಿನ ಕೆಲವು ವಿದ್ವಾಂಸರು ಬಸವಣ್ಣವನರು ಕಲ್ಯಾಣಕ್ಕೆ ಬರುವ ಪೂರ್ವದಲ್ಲಿಯೇ ಚನ್ನಬಸವಣ್ಣನವರು ಜನಿಸಿರಬೇಕೆಂದು ಹೇಳುತ್ತಾರೆ. ಚನ್ನಬಸವಣ್ಣನವರ ತಂದೆಯ ಹೆಸರನ್ನು 'ಅಮಲಬಸವ ಚಾರತ್ರ್ಯ' (ಸಿಂಗಿರಾಜಪುರಾಣ) ವೊಂದನ್ನು ಬಿಟ್ಟು ಉಳಿದಾವ ಕೃತಿಗಳೂ ಹೇಳುವುದಿಲ್ಲ. ಸಿಂಗಿರಾಜ ಪುರಾಣದಲ್ಲಿ ಎರಡು ಮೂರುಕಡೆ ಅಕ್ಕನಾಗಮ್ಮನ ಪತಿ ಶಿವಸ್ವಾಮಿ ಅಥವಾ ಶಿವದೇವನೆಂದು ಬರುತ್ತದೆ.

ಪ್ರಭುದೇವರ ಅನಂತರ ಚನ್ನಬಸವಣ್ಣ ಶೂನ್ಯಸಿಂಹಾಸನವನ್ನೇರಿದನೆಂದು ಹೇಳಲಾಗುತ್ತದೆ. ಕಲ್ಯಾಣದಲ್ಲಿ ನಡೆದ ಕ್ರಾತಿಯಿಂದಾಗಿ ಶರಣ ಶರಣೆಯರೆಲ್ಲ ಬೇರೆ ಬೇರೆ ಕಡೆ ಚದುರಿಹೋಗುತ್ತಾರೆ. ಚನ್ನಬಸವಣ್ಣನವರು ಕ್ರಾಂತಿಯ ಅನಂತರ ಕೆಲವುದಿನ ಕಲ್ಯಾಣದಲ್ಲಿಯೇ ಉಳಿದು ಅಲ್ಲಿದ್ದ ಶರಣರ ಯೋಗಕ್ಷೇಮವನ್ನು ನೋಡಿಕೊಂಡಿರುವ ಸಾಧ್ಯತೆ ಇದೆ. ಆಮೇಲೆ ಪರಿಸ್ಥಿತಿ ಇನ್ನೂ ಉಲ್ಬಣಗೊಂಡಾಗ ಉಳಿದ ಶರಣರ ಜೊತೆಯಲ್ಲಿ ಅವರು ಉಳವಿಯತ್ತ ಪ್ರಯಾಣ ಬೆಳೆಸಿದಂತೆ ಕೆಲವು ಕೃತಿಗಳಿಂದ ತಿಳಿದುಬರುತ್ತದೆ. ಚನ್ನಬಸವಣ್ಣನವರು ಬಯಲಾದುದು ಉಳವಿಯಲ್ಲಿಯೇ ಎಂಬ ನಂಬಿಕೆ ಈಗಲೂ ಅನೇಕ ಜನರಲ್ಲಿ ಬಲವತ್ತರವಾಗಿದೆ.

ಗ್ರಂಥ ಋಣ ಸಮಗ್ರ ವಚನ ಸಂಪುಟ
ಪರಿವಿಡಿ (index)
*
Previousಅಲ್ಲಮಪ್ರಭುಅಕ್ಕಮಹಾದೇವಿNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.