Previous ಹೇಮಗಲ್ಲ ಹಂಪ ಕಂಕರಿ ಕಕ್ಕಯ್ಯ Next

ಕಂಬದ ಮಾರಿತಂದೆ

*

ಕಂಬದ ಮಾರಿತಂದೆ

ಅಂಕಿತ: ‘ಕದಂಬಲಿಂಗ’ , ಕದಂಬಲಿಂಗಾ
ಕಾಯಕ: ಮೀನುಗಾರಿಕೆ

ನಾನಾ ಜನ್ಮಂಗಳಲ್ಲಿ ಬಂದಡೂ,
ನಾನಾ ಯುಕ್ತಿಯಲ್ಲಿ ನುಡಿದಡೂ,
ನಾನಾ ಲಕ್ಷಣಂಗಳಲ್ಲಿ ಶ್ರುತ ದೃಷ್ಟ ಅನುಮಾನಂಗಳ
ಲಕ್ಷಿಸಿ ನುಡಿವಲ್ಲಿ,
ಏನನಹುದು ಏನನಲ್ಲಾಯೆಂಬ ಠಾವನರಿಯಬೇಕು.
ಮಾತ ಬಲ್ಲೆನೆಂದು ನುಡಿಯದೆ,
ನೀತಿವಂತನೆಂದು ಸುಮ್ಮನಿರದೆ,
ಆ ತತ್ಕಾಲದ ನೀತಿಯನರಿದು
ಸಾತ್ವಿಕ ಲಕ್ಷಣದಲ್ಲಿಪ್ಪಾತನ ಲಕ್ಷಣವೇ ನಿರೀಕ್ಷಣ,
ಕದಂಬಲಿಂಗಾ.

ಇವರು ಬಸವಣ್ಣನವರ ಸಮಕಾಲೀನ ವಚನಕಾರರು. ಇವರ ಕಾಲ ಕ್ರಿ.ಶ.1160. ಇವರು ತಮ್ಮ ವಚನದಲ್ಲಿ ಬಸವಣ್ಣ, ಚೆನ್ನಬಸವಣ್ಣ, ಅಲ್ಲಮಪ್ರಭು ದೇವರನ್ನು ಸ್ಮರಿಸಿದ್ದಾರೆ. ‘ಕದಂಬಲಿಂಗ’ ಎನ್ನುವುದು ಇವರ ವಚನದ ಅಂಕಿತವಾಗಿದೆ. ಕಂಬದ ಮಾರಿತಂದೆಯ ಹನ್ನೊಂದು ವಚನಗಳು ಪ್ರಕಟವಾಗಿವೆ. ಮತ್ಸ್ಯ, ತೆಪ್ಪ, ಮೊದಲಾದ ಪದಗಳು ಇವರ ವಚನಗಳಲ್ಲಿವೆ. ಇದನ್ನೆಲ್ಲಾ ಗಮನಿಸಿದಾಗ ಇವರು ಮೊದಲು ಮೀನುಗಾರಿಕೆ ವೃತ್ತಿಯನ್ನು ಮಾಡುತ್ತಿದ್ದರೆಂದು ತಿಳಿದುಬರುತ್ತದೆ.

ಇವರು ತಮ್ಮ ವಚನದಲ್ಲಿ ‘ವೃತ್ತಿ ಪ್ರತಿಮೆ’ಗಳನ್ನು ಬಳಸಿದ್ದಾರೆ. ಇವರು ದೇವರ ಆಟವನ್ನು ಮಡುವಿನಾಟಕ್ಕೆ ಹೋಲಿಸಿದ್ದಾರೆ. ನದಿಯಲ್ಲಿಯ ಮಡುವು, ಅದರೊಳಗಿರುವ ಸುಳಿಗಳು ಪ್ರತಿಮೆಗಳಾಗಿ ವಚನಗಳಲ್ಲಿ ಮೂಡಿಬಂದಿವೆ. ವೃತ್ತಿ ಪ್ರತಿಮೆಗಳನ್ನು ಬಳಸಿಕೊಂಡು ಆಧ್ಯಾತ್ಮದ ನೆಲೆಯನ್ನು ತಿಳಿಸುವ ಕಂಬದ ಮಾರಿತಂದೆಯು ಕೆಲವು ಬೆಡಗಿನ ವಚನಗಳನ್ನು ಬರೆದಿದ್ದಾರೆ. ಇವರ ವಚನಗಳು ಸರಳ ಸುಂದರವಾಗಿವೆ. ಅವುಗಳಲ್ಲಿ ಕಾವ್ಯದ ಸೊಗಡನ್ನು ಕಾಣಬಹುದು. ಇವರು ಬಳಸಿದ ಭಾಷೆ ಕಾವ್ಯಾತ್ಮಕವಾಗಿದೆ. ಶರಣರು ಕಾಯಕತತ್ತ್ವದ ಮೇಲೆ ನಂಬಿಕೆ ಇಟ್ಟವರು. ಯಾವುದೇ ವೃತ್ತಿಯಾಗಲಿ ಅದರಲ್ಲಿ ಶಿವನನ್ನು ಕಾಣುವವರಾಗಿದ್ದಾರೆ.

ಕಾಯದಿಂದ ಕರ್ಮವ ಕಂಡು,
ಭಾವದಿಂದ ಲಿಂಗವ ಕಂಡು
ಲಿಂಗದಿಂದ ಸ್ವಾನುಭಾವವಾಗಿ,
ಅಂಗದ ಸಂಗಕ್ಕೆ ಹೊರಗಾಯಿತ್ತು
ಕದಂಬಲಿಂಗವನರಿಯಲಾಗಿ

*
ಪರಿವಿಡಿ (index)
Previous ಹೇಮಗಲ್ಲ ಹಂಪ ಕಂಕರಿ ಕಕ್ಕಯ್ಯ Next