Previous ಉಳಿಯುಮೇಶ್ವರ ಚಿಕ್ಕಣ್ಣ ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ Next

ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ

*
ಅಂಕಿತ: ಶುದ್ಧ ಸಿದ್ಧ ಪ್ರಸಿದ್ಧ ಕುರಂಗೇಶ್ವರಲಿಂಗ
ಕಾಯಕ: ರಾತ್ರಿ ಪ್ರಹರಿ ಮಾಡುವುದು

ನಾಲ್ಕು ಜಾವಕ್ಕೆ ಒಂದು ಜಾವ
ಹಸಿವು ತೃಷೆ ಮಿಕ್ಕಾದ ವಿಷಯದೆಣಿಕೆಗೆ ಸಂದಿತ್ತು.
ಮತ್ತೊಂದು ಜಾವ
ನಿದ್ರೆ, ಸ್ವಪ್ನ, ಕಳವಳ ನಾನಾ ಅವಸ್ಥೆ ಬಿಟ್ಟಿತ್ತು.
ಮತ್ತೊಂದು ಜಾವ
ಅಂಗನೆಯರ ಕುಚ, ಅಧರಚುಂಬನ
ಮಿಕ್ಕಾದ ಬಹುವಿಧ ಅಂಗವಿಕಾರದಲ್ಲಿ ಸತ್ತಿತ್ತು.
ಇನ್ನೊಂದು ಜಾವವಿದೆ:
ನೀವು ನೀವು ಬಂದ ಬಟ್ಟೆಯ ತಿಳಿದು
ಮುಂದಳ ಆಗುಚೇಗೆಯನರಿದು,
ನಿತ್ಯನೇಮವ ವಿಸ್ತರಿಸಿಕೊಂಡು
ನಿಮ್ಮ ಶಿವಾರ್ಚನೆ, ಪೂಜೆ, ಪ್ರಣವದ ಪ್ರಮಥಾಳಿ,
ಭಾವದ ಬಲಿಕೆ, ವಿರಕ್ತಿಯ ಬಿಡುಗಡೆ, ಸದ್ಭಕ್ತಿಯ ಮುಕ್ತಿ,
ಇಂತೀ ಕೃತ್ಯದ ಕಟ್ಟ ತಪ್ಪದಿರಿ.
ಅರುಣೋದಯಕ್ಕೆ ಒಡಲಾಗದ ಮುನ್ನವೆ
ಖಗವಿಹಂಗಾದಿಗಳ ಪಶು ಮೃಗ ನರಕುಲದುಲುಹಿಂಗೆ ಮುನ್ನವೆ
ಧ್ಯಾನಾರೂಢರಾಗಿ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕುರುಂಗೇಶ್ವರಲಿಂಗವ ಕೂಡಬಲ್ಲಡೆ.

ಈತನಿಗೆ ಮುತ್ತಣ್ಣ ಎಂದೂ ಕರೆಯಲಾಗುತ್ತದೆ. ಕಾಯಕ: ರಾತ್ರಿ ಪ್ರಹರಿ ಮಾಡುವುದು. 'ಶುದ್ಧ ಸಿದ್ಧ ಪ್ರಸಿದ್ಧ ಕುರಂಗೇಶ್ವರಲಿಂಗ" ಎಂಬುದು ಅಂಕಿತ. ಹನ್ನೊಂದು ವಚನಗಳು ದೊರೆತಿವೆ. ಎಲ್ಲವೂ ಎಚ್ಚರಿಕೆ ಕಾಯಕದ ಪರಿಭಾಷೆಯನ್ನು ಒಳಗೊಂಡು ಆಧ್ಯಾತ್ಮವನ್ನು ಬೋಧಿಸುತ್ತವೆ.

ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವರನ್ನು ಒಂದು ವಚನದಲ್ಲಿ ನೆನೆದಿರುವನು, ತಪ್ಪು ಮಾಡುವವರನ್ನು ಎಚ್ಚರಿಸುವ ಧೋರಣೆ ಇವನ ವಚನಗಳಲ್ಲಿದೆ.

ಎನ್ನ ತನು ಬಸವಣ್ಣನ ಶುದ್ಧಪ್ರಸಾದವ ಕೊಂಡಿತ್ತು,
ಎನ್ನ ಮನ ಚೆನ್ನಸಬವಣ್ಣನ ಸಿದ್ಧಪ್ರಸಾದವ ಕೊಂಡಿತ್ತು,
ಎನ್ನ ಪ್ರಾಣ ಪ್ರಭುದೇವರ ಪ್ರಸಿದ್ಧಪ್ರಸಾದವ ಕೊಂಡಿತ್ತು.
ಇಂತೀ ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಕುರಂಗೇಶ್ವರಾ,
ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು.

ಪರಿವಿಡಿ (index)
*
Previous ಉಳಿಯುಮೇಶ್ವರ ಚಿಕ್ಕಣ್ಣ ಎಡೆಮಠದ ನಾಗಿದೇವಯ್ಯಗಳ ಪುಣ್ಯಸ್ತ್ರೀ ಮಸಣಮ್ಮ Next