ಉರಿಲಿಂಗಪೆದ್ದಿ

*
ಅಂಕಿತ: ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ
ಕಾಯಕ: ಮೂಲತ: ಚೋರವೃತ್ತಿಯವನಾಗಿದ್ದ ಈತ ಉರಿಲಿಂಗದೇವನ ಶಿಷ್ಯತ್ವ ವಹಿಸಿ, ಘನ ವಿದ್ವಾಂಸನಾದ

ತಂದೆ-ತಾಯಿ ಸಂಯೋಗಸಂಭೂತನಲ್ಲದವನು,
ಶ್ವೇತ, ಪೀತ, ಕಪೋತ, ಹರೀತ, ಕೃಷ್ಣ
ಮಾಂಜಿಷ್ಟವೆಂಬ ಷಡುವರ್ಣರಹಿತನು,
ಆದಿಮಧ್ಯಾವಸಾನಂಗಳಿಲ್ಲದ ಸ್ವತಂತ್ರಮಹಿಮನು,
ವೇದವಿಂತುಂಟೆಂದು ರೂಹಿಸಬಾರದವನು,
ನಾ ಬಲ್ಲೆನೆಂಬ ಹಿರಿಯರ ಒಗ್ಗೆಗೂ ಮಿಕ್ಕಿಪ್ಪ
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ಮೂಲತ: ಚೋರವೃತ್ತಿಯವನಾಗಿದ್ದ ಈತ ಉರಿಲಿಂಗದೇವನ ಶಿಷ್ಯತ್ವ ವಹಿಸಿ, ಘನ ವಿದ್ವಾಂಸನೂ, ಅನುಭಾವಿಯೂ ಆಗಿ ಉತ್ತಮ ವಚನಗಳನ್ನು ರಚಿಸಿದ್ದಾನೆ. ಕಾಳವ್ವೆ ಈತನ ಸತಿ. ಉರಿಲಿಂಗದೇವರ ನಂತರ ಪೀಠವನ್ನು ಏರಿದ ಪೆದ್ದಣ್ಣ ಜಾತಿಯಿಂದ ಅಸ್ಪೃಶ್ಯನೆಂದು ತಿಳಿದುಬರುವುದರಿಂದ, ಈ ಪೀಠಾರೋಹಣ ಒಂದು ಕ್ರಾಂತಿಕಾರಿ ಘಟನೆಯೆಂದೇ ಹೇಳಬೇಕು. ಅಸ್ಪೃಶ್ಯ ಲಿಂಗಾಯತರ ಅನೇಕ ಮಠಗಳು ಕರ್ನಾಟಕದಲ್ಲಿ ಇದ್ದು ಅವುಗಳನ್ನು ಉರಿಲಿಂಗಪೆದ್ದಿ ಮಠಗಳೆಂದು ಕರೆಯುತ್ತಾರೆ.

'ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ' ಆಂಕಿತದಲ್ಲಿ ಈತ ರಚಿಸಿದ ೩೬೬ ವಚನಗಳು ದೊರೆತಿವೆ. ಅವುಗಳಲ್ಲಿ ಗುರುಮಹಿಮೆಗೆ ಅಗ್ರಸ್ಥಾನ ಸಂದಿದೆ. ಜೊತೆಗೆ ಲಿಂಗ-ಜಂಗಮ ತತ್ವದ ವಿಚಾರ, ಕುಲ-ಜಾತಿ ಸಮಸ್ಯೆ ನಿರೊಪಿತವಾಗಿವೆ. ವಚನಗಳ ಮಧ್ಯದಲ್ಲಿ ಬಳಸಿದ ಹೇರಳ ಸಂಸ್ಕೃತ ಉದ್ಧರಣೆಗಳು ಈತನ ಪಾಂಡಿತ್ಯಕ್ಕೆ ನಿದರ್ಶನವೆನಿಸಿವೆ. ಧರ್ಮ ಹಾಗೂ ಧರ್ಮದ ತತ್ವ, ಆಚರಣೆಗಳ ಪ್ರಚಾರ ಇವನ ವಚನಗಳ ಪ್ರಧಾನ ಆಶಯ. ವಚನಗಳ ನಡುವೆ ಬಳಸುವ ಯಥೇಚ್ಛ ಸಂಸ್ಕೃತ ಶ್ಲೋಕಗಳ ಆಧಾರದಿಂದ ಈತ ದೊಡ್ಡ ಜ್ಞಾನಿ ಎಂದು ಹೇಳಬಹುದು. ಹುಟ್ಟಿನಲ್ಲಿ ಅಂತ್ಯಜನಾಗಿ ಗುರುಪೀಠವನ್ನೇರಿದ ಸಂಗತಿ ಕ್ರಾಂತಿಕಾರಕವಾದುದು. ಈತನಲ್ಲಿ ಸಾಮಾಜಿಕ ವಿಡಂಬನೆ ತೀಕ್ಷ್ಣವಾಗಿದೆ. ತನಗೆ ಸರಿಕಾಣದ್ದನ್ನು ಮುಚ್ಚು ಮರೆಯಿಲ್ಲದೆ ಟೀಕಿಸಿರುವನು. ಇವನಲ್ಲಿ ವೈಚಾರಿಕತೆ ಪ್ರಧಾನವಾಗಿದೆ.

ಅಂಗದ ಮೇಲೆ ಲಿಂಗಸಾಹಿತ್ಯವಾದ ಬಳಿಕ,
ಮರಳಿ ಅನ್ಯದೈವಂಗಳನಾರಾಧಿಸುವ ಕುನ್ನಿಗಳು ನೀವು ಕೇಳಿಭೋ
ವಿಷ್ಣುವೇ ದೈವವೆಂದು ಆರಾಧಿಸಿದ ಬಲಿಗೆ ಬಂಧನವಾಯಿತ್ತು.
ವಿಷ್ಣುವೇ ದೈವವೆಂದು ಆರಾಧಿಸಿದ ಕರ್ಣನ ಕವಚ ಹೋಯಿತ್ತು.
ವಿಷ್ಣುವೇ ದೈವವೆಂದು ಆರಾಧಿಸಿದ ನಾಗಾರ್ಜುನನ ಶಿರ ಹೋಯಿತ್ತು.
ಅದಂತಿರಲಿ,
ಬ್ರಾಹ್ಮಣನೇ ದೈವವೆಂದು ಆರಾಧಿಸಿದ ಗೌತಮಂಗೆ ಗೋವಧೆಯಾಯಿತ್ತು.
ಬ್ರಾಹ್ಮಣನೇ ದೈವವೆಂದು ಆರಾಧಿಸಿದ ದಕ್ಷಂಗೆ ಕುರಿದಲೆಯಾಯಿತ್ತು.
ಮೈಲಾರನೇ ದೇವರೆಂದಾರಾಧಿಸಿದಾತನು
ಕೊರಳಲ್ಲಿ ಕವಡೆಯ ಕಟ್ಟಿ, ನಾಯಾಗಿ ಬೊಗಳುತಿರ್ಪ.
ಭೈರವನೇ ದೇವರೆಂದಾರಾಧಿಸಿದಾತನು
ಕೊರಳಲ್ಲಿ ಕವಡೆಯ ಕಟ್ಟಿ, ಕರುಳ ಬೆರಳ ಕಡಿದಿಕ್ಕಿ, ಬಾಹಿರನಾದನು.
ಮಾಯಿರಾಣಿಯೇ ದೈವವೆಂದು ಆರಾಧಿಸಿದಾತನು
ಕೊರಳಿಗೆ ಕವಡಿಯ ಕಟ್ಟಿ, ತಲೆಯಲ್ಲಿ ಕೆರಹ ಹೊತ್ತು,
ಬೇವಿನ ಸೊಪ್ಪನುಟ್ಟು ಲಜ್ಜೆಯ ನೀಗಿದ.
ಈ ಬಿನುಗು ದೈವಂಗಳ ಭಕ್ತಿ ಬಣಗು ನಾಯಿ ಒಣಗಿದೆಲುವ ಕಚ್ಚಿಕೊಂಡು
ಕಂಡ ಕಂಡೆಡೆಗೆ ಹರಿದಂತಾಯಿತ್ತು,
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರ.

ಇಷ್ಟಲಿಂಗಕ್ಕೆ ಕಾಯದ ಕೈಯಿಂದ ಮುಟ್ಟಿ
ಅಷ್ಟವಿಧಾರ್ಚನೆ, ಷೋಡಶೋಪಚಾರ
ಮೈದೋರಿದಲ್ಲದೆ ಆಕಾರನಾಸ್ತಿಯಾಗದು.
ಬೆರಣಿಯಲ್ಲಿ ಅಗ್ನಿ ಮೈದೋರದಿದ್ದಡೆ ಆಕಾರನಾಸ್ತಿಯಾಗದು.
ಲಿಂಗದಲ್ಲಿದ್ದ ಜವನಿಕೆ ಬಗೆದೆಗೆದಡೆ ಕಾಯವಿಲ್ಲದೆ ಪ್ರಾಣದ ಪರಿ ನಷ್ಟ,
ಜ್ಞಾನಾಗ್ನಿಯಿಂದ ಭೋಗ ನಷ್ಟ.
ಇದು ಕಾರಣ,
ನಿಮ್ಮ ಶರಣರ ಮರ್ತ್ಯರೆಂದಡೆ ನರಕ ತಪ್ಪದು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.

ಪರಿವಿಡಿ (index)
*
Previousಉರಿಲಿಂಗದೇವಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.