*
೧೦೫೬
ಎಲು ನರ ಚರ್ಮ ಮಜ್ಜೆ ಮಾಂಸದೊಳಗಾದ
ಕ್ರಿಮಿ ಎನ್ನಂಗದೊಳು ಹುಟ್ಟಿ,
ಮಲ ಹುಣ್ಣು ಉಗುಳುಗಳಲ್ಲಿ ಬೀಳುವುದ ಕಂಡು
ಅವ ನಾ ರಕ್ಷಿಸಿದೆನೆ?
ಅವು ಬೀಳಬೇಕೆಂದು ನಾ ಶಿಕ್ಷಿಸಿದೆನೆ?
ಇಂತೀ ಜೀವದ ದೃಷ್ಟವ ಕಂಡು
ಎನಗಿದೆತ್ತಣ ಸರ್ವ ಜೀವದಯ
ಈ ರಕ್ತದ ಲೇಪವ ಬಿಡಿಸಾ,
ಕಲ್ಲು ಮಣ್ಣು ಮರನಂತೆ
ಚೆನ್ನ ದಸರೇಶ್ವರಲಿಂಗಾ.
ಬಸವಣ್ಣನವರ ಸಮಕಾಲೀನನಾದ ಈತನ ಜನ್ಮಸ್ಥಳ ರಾಮಗೊಂಡೆ ಎಂಬ ಗ್ರಾಮ ವೀರಮ್ಮ ಇವನ ಪತ್ನಿ. ನಿತ್ಯವೂ ತೋಟಕ್ಕೆ ಹೋಗಿ ಹೂಗಳನ್ನು ಹರಿದು ತಂದು ಪೂಜೆ ಮಾಡುವುದು ಈತನ ಕಾಯಕ. ಒಮ್ಮೆ ಹೂ ಹರಿಯುತಿದ್ದಾಗ 'ಅಯ್ಯೋ ನೊಂದೆನು' ಎಂಬ ಧ್ವನಿ ಕೇಳಿಸಿತು. ಅಂದಿನಿಂದ ಆತ ಗಿಡದಿಂದ ಹೂಗಳನ್ನು ಹರಿಯದೆ, ಕೆಳಗೆ ಉದುರಿ ಬಿದ್ದುವನ್ನು ಮಾತ್ರ ಆಯ್ದು ತಂದು ಪೂಜಿಸತೊಡಗಿದ. ಇದರಿಂದ ಈತ ಉತ್ಕಟ ಅಹಿಂಸಾವಾದಿಯಾಗಿದ್ದನೆಂತು ವ್ಯಕ್ತವಾಗುತ್ತದೆ. 'ದಸರೇಶ್ವರಲಿಂಗ' ಅಂಕಿತದಲ್ಲಿ ಬರೆದ ಈತನ ೧0 ವಚನಗಳು ದೊರೆತ್ತಿದ್ದು, ಅವುಗಳಲ್ಲಿ ಅಹಿಂಸಾಭಾವ ಪ್ರಮುಖವಾಗಿ ವ್ಯಕ್ತವಾಗಿದೆ. ಭಾಷೆ ಸರಳ, ಭಾವ ಹಗುರ. ಇವು ಆತನ ವ್ಯಕ್ತಿತ್ವದ ಪ್ರತಿಬಿಂಬಗಳೆನಿಸಿವೆ.
೧೦೫೯
ಪೃಥ್ವಿಯ ಅಂಶಿಕ ಅಂಗವಾಗಿ,
ಅಪ್ಪುವಿನ ಅಂಶಿಕ ಶುಕ್ಲ ಶೋಣಿತವಾಗಿ,
ತೇಜದ ಅಂಶಿಕ ಹಸಿವಾಗಿ,
ವಾಯುವಿನಂಶಿಕ ಜೀವಾತ್ಮನಾಗಿ,
ಆಕಾಶದ ಅಂಶಿಕ ಬ್ರಹ್ಮರಂದ್ರವಾಗಿ,
ಇಂತೀ ಐದರ ಗುಣವುಳ್ಳನ್ನಕ್ಕ ಗೆಲ್ಲ ಸೋಲ ಬಿಡದು.
ಇವನಲ್ಲಿಗಲ್ಲಿಯೆ ಇಂಬಿಟ್ಟು
ಇಂತೀ ಲಲ್ಲೆಯ ಬಿಡಿಸಯ್ಯಾ.
ಎನ್ನಲ್ಲಿ ನಿಮಗೆ ಖುಲ್ಲತನ ಬೇಡ.
ಅದು ಎನ್ನ ಸೋಂಕಲ್ಲ,
ಅದು ನಿನ್ನ ಸೋಂಕು ದಸರೇಶ್ವರಲಿಂಗಾ.
೧೦೬೩
ಸರ್ವವನರಿದಲ್ಲಿ ಸರ್ವಜ್ಞನಾದಲ್ಲಿ
ಇದಿರೆಲ್ಲಿ ತಾನೆಲ್ಲಿ? ಅದು ತನ್ನ ಭಿನ್ನ ಭಾವ
ಅನ್ಯರಲ್ಲಿ ಎಮ್ಮುವ ತೋರಿ
ಆ ಗುಣ ತನ್ನನೆ ಅನ್ಯವೆನಿಸೂದು.
ತನ್ನ ಶಾಂತಿ ಅನ್ಯರಲ್ಲಿ ತೋರಿ, ಅಲ್ಲಿ ಭಿನ್ನಭಾವವಿಲ್ಲದಿರೆ
ಅವರನ್ಯರಲ್ಲ ಎಂಬುವುದು ತನ್ನ ಗುಣ.
ಅನ್ಯವಿಲ್ಲವೆಂಬುದನರಿತು ತನ್ನೊಪ್ಪದ ದರ್ಪಣದಲ್ಲಿ ತೋರುವಂತೆ
ಇದಕ್ಕೇ ಕರ್ಕಶವಿಲ್ಲ
ದಸರೇಶ್ವರಲಿಂಗವನರಿವುದಕ್ಕೆ.
*