Previous ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ Next

ಬಳ್ಳೇಶ ಮಲ್ಲಯ್ಯ

*
ಅಂಕಿತ: ಬಳ್ಳೇಶ್ವರಲಿಂಗ
ಕಾಯಕ: ಸರಕು ಸಾಗಣೆ ಮಾರಾಟ ಮಾಡುವವನು

೧೯೪
ಆವ ಪ್ರಾಣಿಗೆಯೂ ನೋವ ಮಾಡಬೇಡ.
ಪರನಾರಿಯರ ಸಂಗ ಬೇಡ.
ಪರಧನಕ್ಕಳುಪಬೇಡ, ಪರದೈವಕ್ಕೆರಗಬೇಡ.
ಈ ಚತುರ್ವಿಧ ತವಕವ ಮಾಡುವಾಗ
ಪರರು ಕಂಡಾರು, ಕಾಣರು ಎಂದೆನಬೇಡ.
ಬಳ್ಳೇಶ್ವರಲಿಂಗಕ್ಕಾರು ಮರೆಮಾಡಬಾರದಾಗಿ
ಅಘೋರನರಕದಲ್ಲಿಕ್ಕುವ.

ಮೂಲತ: ಜೈನ ವ್ಯಾಪಾರಿಯಾಗಿದ್ದ ಮಲ್ಲಶೆಟ್ಟಿ ಶರಣ ಧರ್ಮ ಸ್ವೀಕರಿಸಿ ಮಲ್ಲಯ್ಯನಾದ. ಧಾನ್ಯವನ್ನು ಅಳೆಯುವ ಬಳ್ಳ(ಸೇರು)ವನ್ನೇ ಲಿಂಗಸ್ವರೂಪದಲ್ಲಿ ಪೂಜಿಸಿ 'ಬಳ್ಳೇಶ ಮಲ್ಲಯ್ಯ'ನೆನಿಸಿದ. ಹರದ ವೃತ್ತಿಯನ್ನು ಕೈಕೊಂಡ ಈತ ಶರಣರ ಅನುಭಾವಗೋಷ್ಠಿಗಳಲ್ಲಿ ಭಾಗವಹಿಸುವ ಮೂಲಕ ತಾನೂ ಅನುಭಾವಿಯಾಗಿ ವಚನಗಳನ್ನು ರಚಿಸಿದ್ದಾನೆ. ದೊರೆತ ೯ ವಚನಗಳು ಬೆಡಗಿನ ರೂಪದಲ್ಲಿವೆ. ಕಾಲ ೧೧೬೦. ಅಂಕಿತ 'ಬಳ್ಳೇಶ್ವರ'

೧೯೫
ದೇವರಾಜ್ಯದಲ್ಲಿ, ಧಾರೆಯ ಭೋಜನ
ಅರಮನೆಯ ಓಲಗದೊಳಗೆ ಹೊಂಪುಳಿವರಿವುತ್ತ
ನಾಲ್ಕೂದಿಕ್ಕಿನಲ್ಲಿ ನಾಲ್ವರ ಫಣಿಯ ಬೆಳಗು.
ಜಾಣಭಾಷೆಯಲ್ಲಿ ಮಧ್ಯದಲೊಬ್ಬಳು, ಆಣತಿಯ ಸರವು.
ಮಹಾದೇವಿ ಗಾಂಧಾರಿಯನು ತೋರಿ, ಒದವಿಸಿದ ಮಧುಮಾಧವಿಯನು
ಭೋಜ ಗದ್ಯವನೋದಲು, ಶಿವನು ಕೇಳುತ್ತಿರೆ
ಬಾಣಸಿಗ ಹಡಪದವನೆ ಬಲ್ಲನು ಕಾಣಾ.
ಕೊಂಕಿಲ್ಲದೆ ಶಬುದ ರಸಭೇದವನು ರಾಣಿ ಬಲ್ಲಳು.
ಕುಮುದ ಪಾತ್ರವಿಧಾಂತ ಮಾವಟಿಗ ಭೇದವನು
ಮೇಲೆ ಅಂಗರಿಕನು ದೀವಟಿಗೆ ಧಾರೆವಟ್ಟದ ಜಾಣನು
ಅಲ್ಲಿ ಚಂಬಕನ ಕಹಳೆ ಭೋರೆಂದು ಬಾರಿಸಿ
ಪ್ರತಾಪದ ಕದಳಿಗೆ ಎದೆ ದಲ್ಲಣ.
ಆರುಬಣ್ಣದ ವಸ್ತುವ ಮೂರು ಬಣ್ಣಕ್ಕೆ ತಂದು, ಕೇವಣಿಸಿದನು
ಕಮಠ ಸುರಥ ಕವಾಹಾರದಾರದ ಖೂಳರ ನಾಲ್ವರ
ಬಯಕೆಯನು, ದೇವ ಬಳ್ಳೇಶ್ವರನ ಕನ್ನಡ ವಿಪರೀತ.


ಬೆಡಗಿನ ವಚನಗಳಿವೆ. ಆವಪ್ರಾಣಿಗೂ ನೋವ ಮಾಡಬೇಡ, ಪರಸ್ತ್ರೀಸಂಗ ಬೇಡ, ಪರಧನಕ್ಕೆ ಆಸೆಮಾಡಬೇಡ ಪರದೈವಕ್ಕೆರಗಬೇಡ, ಇವನ್ನು ಯಾರಾದರೂ ನೋಡಿಯಾರು, ಬೇರೆ ಯಾರೂ ನೋಡಲಿಲ್ಲವೆನ್ನುವ ಭಾವ ಬೇಡ, ಮುಚ್ಚುಮರೆಮಾಡಿದ್ದಾದರೆ ಅಘೋರನರಕವೆನ್ನುವನು. ಶಿವನೊಬ್ಬನೆ ಜಗಕ್ಕೆ ಎಂಬುದನ್ನು ನಿರಾಕರಿಸುವವನ ಬಾಯನ್ನು ತ್ರಿಶೂಲದಲ್ಲಿರುವುದು ಎನ್ನುವನು.

೧೯೨
ಅಪಾರ ಮಹಿಮನೆಂಬುದು ನಿಮ್ಮ ಭೇರಿ.
ಬೇಡಿತ್ತನೀವನೆಂಬುದು ನಿಮ್ಮ ತಮ್ಮಟ.
ಜಗವಂದಿತ ಲೋಕದೊಡೆಯನೆಂಬುದು ನಿಮ್ಮ ಶಂಖ.
ಪರದೈವವಿಲ್ಲವೆಂಬುದು ನಿಮ್ಮ ಡಮರುಗ.
ಶಿವ ಕಾಡನೆಂಬವರ ಬಾಯ ತ್ರಿಶೂಲದಲ್ಲಿರಿವ
ಬಳ್ಳೇಶ್ವರಲಿಂಗದ ಡಂಗುರ ಮೂಜಗದೊಳಗಯ್ಯಾ.

೧೯೬
ಧರೆಯೊಳಗೆ ಚೋದ್ಯವ ನೋಡಿರೆ :
ಒಂದು ಹರಿಣಿಯ ಮೃಗವು ಓದು ಬಲ್ಲುದಾ ?
ಚೆಲುವ ಗಿಳಿಯಲ್ಲಿ ವಿಪರೀತ ಕೊಂಬು ಕೊಂಬುಗಳುಂಟು.
ಇಂಬು ಕಾಲಲ್ಲಿ ಮುಖವು.
ಜಂಬುದ್ವೀಪದ ಬೆಳಗಿನುದಯದಾಹಾರವದಕೆ.
ಸಂಭ್ರಮವ ನುಡಿವ ಕವಿಗಳ ಮುಖವ ಝಳಪಿಸಿತ್ತು
ಶಂಭು ಬಳ್ಳೇಶ್ವರನ ಕೊರಳಹಾರವ ನೋಡಿ ನಗುತ.


*
Previous ಬಾಚಿಕಾಯಕದ ಬಸವಯ್ಯಗಳ ಪುಣ್ಯಸ್ತ್ರೀ ಕಾಳವ್ವೆ ಮುಮ್ಮಡಿ ಕಾರ್ಯೇಂದ್ರ /ಮುಮ್ಮಡಿ ಕಾರ್ಯ ಕ್ಷಿತೀಂದ್ರ Next