*
ಬಂಗಾರಕ್ಕೆ ಒಳಹೊರಗುಂಟೆ ?
ಕರ್ಪುರ ಚಂದನ ಅಗರು ಇರವಂತಿ ಶಾವಂತಿ
ಮೊಲ್ಲೆ ಮಲ್ಲಿಗೆ ಅದ್ರಗಂಚಿ ಮರುಗ ದವನ
ಪಚ್ಚೆ ಮುಡಿವಾಳ ಕೇತಕಿ ಮುಂತಾದ
ಸಕಲ ಪುಷ್ಪಪತ್ರೆಗಳಿಗೆ ಒಳಹೊರಗುಂಟೆ ?
ಅವರಂದವುಳ್ಳನ್ನಕ್ಕ ಸರ್ವಾಂಗದಲ್ಲಿ
ಗಂಧಪರಿಪೂರ್ಣಮಾಗಿರ್ಪುದದರಂತೆ
ಕಮಠೇಶ್ವರಲಿಂಗದಲ್ಲಿ ಉಭಯ ಮುಟ್ಟಳಿದ ಶರಣನಿರವು. /೨೪೬ [1]
ಈತನ ಜೀವನ ವಿವರ ಲಭ್ಯವಿಲ್ಲ ಕಾಲ-೧೧೬೦. ಅಂಕಿತ ಕಮಠೇಶ್ವರಲಿಂಗ. ೮ ವಚನಗಳು ದೊರೆತಿವೆ. ಜೀವ, ಆತ್ಮ, ಅರ್ಪಿತ, ಶರಣ, ಇವುಗಳ ಲಕ್ಷಣವನ್ನು ತನ್ನದೆ ಆದ ರೀತಿಯಲ್ಲಿ ವಿವರಿಸುತ್ತಾನೆ. ಉಪಮೆ, ದೃಷ್ಟಾಂತಗಳ ಮೂಲಕ ಲಿಂಗಾಂಗ ಸಾಮರಸ್ಯದಂಥ ಜಟಿಲ ವಿಷಯವನ್ನು ಸರಳ ಸುಂದರವಾಗಿ ನಿರೂಪಿಸಲಾಗಿದೆ.
ಊರೊಳಗಣ ಹೊಲೆಯ, ಊರ ಹೊರಗಣ ಕುಲಜ.
ಇವರಲ್ಲಿ ಆರು ಹಿರಿ[ಯರೆಂಬುದ] ಬಲ್ಲಡೆ ಲಿಂಗಪ್ರಾಣಸಂಬಂಧಿಯೆಂಬೆ.
ಅರಿಯದಿರ್ದಡೆ ಪ್ರಾಣಲಿಂಗಸಂಬಂಧಿಯೆಂಬೆ.
ಇಂತೀ ಉಭಯವನರಿದ ಶರಣ ಸರ್ವಾಂಗಲಿಂಗಸಂಬಂಧಿ.
ಆತಂಗೆ ತತ್ತುಗೊತ್ತಿಲ್ಲ, ಇಷ್ಟ ಪ್ರಾಣವೆಂಬ ಗುತ್ತಗೆಯವನಲ್ಲ.
ಕರ್ಪುರ ಉರಿ ಉಭಯರೂಪು ತನ್ಮಯವಾದಂತೆ
ಕಮಠೇಶ್ವರಲಿಂಗದಲ್ಲಿ ಸದಾಸನ್ನದ್ಭನಾದ ಶರಣನು. /೨೪೨[1]
ಊರೊಳಗಣ ಹೊಲೆಯ, ಊರ ಹೊರಗಣ ಕುಲಜ - ಇವರಲ್ಲಿ ಯಾರು ಉತ್ತಮರೆನ್ನುವುದನ್ನು ತಿಳಿದಿದ್ದರೆ ಪ್ರಾಣಲಿಂಗಸಂಬಂಧಿಯೆನ್ನುವೆ ಎಂಬ ಮಾತು ೧೨ ನೇ ಶತಮಾನದ ಜಾತ್ಯತೀತ ನಿಲುವಿಗೆ ಆಶ್ಚರ್ಯಕರರೀತಿಯಲ್ಲಿ ಹೊಂದಿಕೆಯಾಗುತ್ತದೆ. ವಚನಗಳಲ್ಲಿನ ಉಪಮೆಗಳು ಅರ್ಥಪೂರ್ಣವಾಗಿದೆ.
ಶುದ್ಧಾಧ್ವವಳವಟ್ಟ ಯೋಗಿಯೇ ಪರಮಗುರು.
ಶರಣರ ಮನವಿರ್ದಂತಿರ್ದಲ್ಲಿಯೆ ಇರಬಲ್ಲಡೆ ಪರಮನೇ ಲಿಂಗ.
ಶರಣೈಕ್ಯನುಭಾವವನು ಕೂಡಿದಾತನೇ ಪರಮ ವಿರತ.
ಶರಣ ಸುಮನ ಸುಮ್ಮಾನದೊಳಿರಬಲ್ಲಡಾತನೇ
ಕಮಠೇಶ್ವರಲಿಂಗಕ್ಕೆ ಭಕ್ತನಯ್ಯಾ, ಚೆನ್ನಬಸವಣ್ಣ. /೨೪೯
[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*