Back to Top
Previous ಕೋಲ ಶಾಂತಯ್ಯ ಗಜೇಶ ಮಸಣಯ್ಯಗಳ ಪುಣ್ಯಸ್ಥ್ರೀ ಮಸಣಮ್ಮ Next

ಗಜೇಶ ಮಸಣಯ್ಯ

*
ಅಂಕಿತ: ಮಹಾಲಿಂಗ ಗಜೇಶ್ವರ

೨೧೨
ಎನ್ನ ಕರಸ್ಥಲವೇ ಬಸವಣ್ಣನಯ್ಯಾ.
ಎನ್ನ ಮನಸ್ಥಲವೇ ಚೆನ್ನಬಸವಣ್ಣನಯ್ಯಾ.
ಎನ್ನ ಭಾವಸ್ಥಲವೇ ಪ್ರಭುದೇವರಯ್ಯಾ.
ಇಂತೆನ್ನ ಕರ ಮನ ಭಾವಂಗಳಲ್ಲಿ
ಇಷ್ಟ ಪ್ರಾಣ ಭಾವಂಗಳು ತಲ್ಲೀಯವಾಗಿ
ಮಹಾಲಿಂಗ ಗಜೇಶ್ವರಾ,
ನಿಮ್ಮ ಶರಣರ ಘನವನು
ಎನ್ನ ಸರ್ವಾಂಗದಲಿ ಕಂಡು ಪರಮಸುಖಿಯಾಗಿರ್ದೆನು.

ಅಕ್ಕಲಕೋಟೆ ಸಂಸ್ಥಾನದ ಕರ್ಜಗಿ ಗ್ರಾಮಕ್ಕೆ ಸೇರಿದ ಈತ, ಶರಣಸತಿ ಲಿಂಗಪತಿ ಭಾವದ ಶ್ರೇಷ್ಠ ವಚನಕಾರ. ಕಲ್ಯಾಣದ ಶರಣರ ಜೊತೆ ಅನುಭಾವ ಗೋಷ್ಠಿಗಳಲ್ಲಿ ಪಾಲ್ಗೊಂಡ ಈತ, ಕೊನೆಗಾಲದಲ್ಲಿ ಗುಲಬರ್ಗಾ ಜಿಲ್ಲೆ ಅಳಂದ ತಾಲೂಕಿನ ಮನಹಳ್ಳಿ ಎಂಬ ಗ್ರಾಮದಲ್ಲಿ ಇದ್ದು, ಅಲ್ಲಿಯೇ ಐಕ್ಯನಾದನೆಂದು ತಿಳಿಯುತ್ತದೆ. ಅಲ್ಲಿ ಈತನ ಹೆಸರಿನ ದೇವಾಲಯವಿರುವುದು ಇದಕ್ಕೆ ನಿದರ್ಶನವಾಗಿದೆ. ಕರಜಿಗೆಯ ಗಜೇಶ್ವರ ಈತನ ಇಷ್ಟದೈವ. ಅದನ್ನು ತನ್ನ ಅಂಕಿತವಾಗಿಸಿಕೊಂಡಿದ್ದಾನೆ. ಮಸಣಮ್ಮ ಈತನ ಮಡದಿ. ಕಾಲ=೧೧೬೦. 'ಮಹಾಲಿಂಗ ಗಜೇಶ್ವರ' ಎ೦ಬ ಅಂಕಿತದಲ್ಲಿ ೭೦ ವಚನಗಳು ಲಭ್ಯವಾಗಿವೆ. ಎಲ್ಲವೂ ಸತಿಪತಿ ಭಾವದ ಉತ್ಕಟತೆಯನ್ನು ಪ್ರಕಟಿಸುತ್ತವೆ. ಸರಳ ಭಾಷೆ, ಮಧುರ ಭಾವ, ಕಾವ್ಯಾತ್ಮಕ ಶೈಲಿಯಿಂದಾಗಿ ತುಂಬ ಅಕರ್ಷಕವೆನಿಸಿವೆ.

೨೨೭
ತಮ್ಮ ತಮ್ಮ ಗಂಡರು ಚೆಲುವರೆಂದು
ಕೊಂಡಾಡುವ ಹೆಣ್ಣುಗಳು ಪುಣ್ಯಜೀವಿಗಳವ್ವಾ!
ನಾನೆನ್ನ ನಲ್ಲನೆಂಥಾವನೆಂದರಿಯೆನವ್ವಾ!
ಮಹಾಲಿಂಗ ಗಜೇಶ್ವರದೇವನು ನಿರಿಯ ಸೆರಗ ಸಡಿಲಿಸಲೊಡನೆ
ಅನೇನೆಂದರಿಯೆನವ್ವಾ.


೨೫೬
ಹಗಲು ಮನಸಿಂಗಂಜಿ ಇರುಳು ಕನಸಿಂಗಂಜಿ
ಧ್ಯಾನ ಮೋನಿಯಾಗಿರ್ದಳವ್ವೆ.
ಸಖಿ ಬಂದು ಬೆಸಗೊಂಡಡೆ,
ಏನೆಂದು ಹೇಳುವಳವ್ವೆ ಏನೆಂದು ನುಡಿವಳವ್ವೆ?
ಸಾಕಾರದಲ್ಲಿ ಸವೆಸವೆದು ನಿರಾಕಾರದಲರ್ಪಿಸಿದಡೆ
ಮಹಾಲಿಂಗ ಗಜೇಶ್ವರನುಮೇಶ್ವರನಾಗಿರ್ದನವ್ವೆ.


*
Previous ಕೋಲ ಶಾಂತಯ್ಯ ಗಜೇಶ ಮಸಣಯ್ಯಗಳ ಪುಣ್ಯಸ್ಥ್ರೀ ಮಸಣಮ್ಮ Next