Previous ನಿವೃತ್ತಿ ಸಂಗಯ್ಯ ನುಲಿಯ ಚಂದಯ್ಯ Next

ನೀಲಾಂಬಿಕೆ (ನೀಲಮ್ಮ)

*

ನೀಲಾಂಬಿಕೆ (ನೀಲಮ್ಮ)

ಅಂಕಿತ: ಸಂಗಯ್ಯ

೮೧೧
ಅಟ್ಟಡವಿಯಲ್ಲಿ ಬಿಟ್ಟುಹೋದಿರಿ ಬಸವಯ್ಯಾ.
ನಟ್ಟನಡುಗ್ರಾಮವ ಕೆಡಿಸಿಹೋದಿರಿ ಬಸವಯ್ಯಾ.
ಹುಟ್ಟಿಲ್ಲದ ಬಂಜೆಗೆ ಮಕ್ಕಳಕೊಟ್ಟಿರಿ ಬಸವಯ್ಯಾ.
ಆ ಮಕ್ಕಳ ಫಲವಿಲ್ಲದಂತೆ ಮಾಡಿದಿರಿ ಬಸವಯ್ಯಾ.
ಸಂಗಯ್ಯನಲ್ಲಿ ನೀನೆಂತಪ್ಪ ಮಹಿಮನಯ್ಯಾ ಬಸವಯ್ಯಾ ?

ಬಸವಣ್ಣನವರ ಧರ್ಮಪತ್ನಿ. ಸಿದ್ಧರಸನ ಮಗಳು. ಬಿಜ್ಜಳನ ಸಾಕುತಂಗಿ. ಈಕೆಗೆ ಬಾಲಸಂಗಯ್ಯ ಹೆಸರಿನ ಮಗನಿದ್ದನೆಂದು ಸಣ್ಣ ವಯಸ್ಸಿನಲ್ಲಿ ತೀರಿಕೊಂಡನೆಂದು ತಿಳಿದುಬರುತ್ತದೆ. 'ವಿಚಾರಪತ್ನಿ' ಎಂದು ತನ್ನನ್ನು ಕರೆದುಕೊಂಡ ಈಕೆ, ಬಸವಣ್ಣನವರ ಬದುಕಿನಲ್ಲಿ ಬಹುಮುಖ್ಯ ಪಾತ್ರವಹಿಸಿದ್ದಾಳೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಕೂಡಲಸಂಗಮ ಸಮೀಪದ ತಂಗಡಗಿಯಲ್ಲಿ ಐಕ್ಯಳಾದಳೆಂದು ತಿಳಿಯುತ್ತದೆ. ಕಾಲ-೧೧೬೦.

೮೩೩
ಅಲ್ಲಲ್ಲಿಯ ಶರಣರು ಅಲ್ಲಲ್ಲಿಯೇ ನಿಲಲು,
ಅಲ್ಲಲ್ಲಿಯ ಭಕ್ತಿ ಅಲ್ಲಲ್ಲಿಯೆ ಅಡಗಿತ್ತು.
ಅಲ್ಲಲ್ಲಿಯ ಕಾಯವಲ್ಲಲ್ಲಿಯೆ ಸಂದು ನಾನು
ಅಲ್ಲಲ್ಲಿಯೆ ಅಡಗಿಯಾನು ಅನುಮಿಷ ದೃಷ್ಟಿಯುಳ್ಳವಳಾದೆನು.
ಅಲ್ಲಲ್ಲಿಯೇ ಭ್ರಮಿಸಲು ಭ್ರಮೆಯಡಗಿ
ಸಂಗಯ್ಯನಲ್ಲಿ ಮುಖವರಿತೆನಯ್ಯ ಬಸವಪ್ರಭುವೆ.

ನೀಲಾಂಬಿಕೆ ಅಧಿಕ ಸಂಖ್ಯೆಯ ವಚನಗಳನ್ನು ರಚಿಸಿದ್ದಾಳೆ. ಅಂಕಿತ 'ಸಂಗಯ್ಯ' ಸದ್ಯ ೨೮೮ ವಚನಗಳು ಉಪಲಬ್ಧವಾಗಿವೆ. ಅವುಗಳಲ್ಲಿ ಹೆಚ್ಚಾಗಿ. ಬಸವ ಸ್ತುತಿ, ಅವರ ಅಗಲಿಕೆಯ ನೋವಿನ ಧ್ವನಿ ಕೇಳಿಬರುತ್ತವೆ.

೮೩೨
ಅಲ್ಲಮನ ಸಂಗ, ಅಜಗಣ್ಣನ ಸಂಗ,
ಕಕ್ಕಯ್ಯನ ಸಂಗ, ಚಿಕ್ಕಯ್ಯನ ಸಂಗ,
ಎಲ್ಲರ ಸಂಗ, ಯತಿಗಳ ಸಂಗ, ಜತಿಗಳ ಸಂಗ,
ಮಾನ್ಯರ ಸಂಗ, ಮುಖ್ಯರ ಸಂಗ.
ಸಂಗಯ್ಯಾ, ಎನ್ನ ಸಂಗ, ಎನ್ನ ಬಸವಯ್ಯನ ಸಂಗ.

೮೭೭
ಎನಗೆ ಲಿಂಗವು ನೀವೆ ಬಸವಯ್ಯಾ,
ಎನಗೆ ಸಂಗವು ನೀವೆ ಬಸವಯ್ಯಾ,
ಎನಗೆ ಪ್ರಾಣವು ನೀವೆ ಬಸವಯ್ಯಾ,
ಎನಗೆ ಪ್ರಸಾದವು ನೀವೆ ಬಸವಯ್ಯಾ,
ಎನಗೆ ಪ್ರಭೆಯಮೂರ್ತಿಯು ನೀವೆ ಬಸವಯ್ಯಾ.
ಎನಗೆ ಸಂಗಯ್ಯನು ನೀವೆ ಬಸವಯ್ಯಾ.

೧೦೭೫
ಸರ್ವಾಂಗಶುದ್ಭವಾಗಿ ಲಿಂಗದೇಹಿಯಾನಾದೆನು.
ಸರ್ವ ಪ್ರಪಂಚವನಳಿದು ಸಮಯಾಚಾರಮೂರ್ತಿಯ ಪಡದೆನು.
ಸರ್ವಾಂಗಶುದ್ಧವಾಗಿ ವಿವರವನರಿದೆನಯ್ಯ ಸಂಗಯ್ಯ.

೧೦೦೪
ಬಸವಣ್ಣನೆ ಗುರುವೆಂದು ಭಾವಿಸಲಾಗಿ,
ಎನಗೆ ಬಸವಣ್ಣನೆ ಗುರುವಾದನಯ್ಯಾ.
ಚೆನ್ನಬಸವಣ್ಣನೆ ಲಿಂಗವೆಂದು ಭಾವಿಸಲಾಗಿ,
ಎನಗೆ ಚೆನ್ನಬಸವಣ್ಣನೆ ಲಿಂಗವಾದನಯ್ಯಾ.
ಪ್ರಭುದೇವರೆ ಜಂಗಮವೆಂದು ಭಾವಿಸಲಾಗಿ,
ಎನಗೆ ಪ್ರಭುದೇವರೆ ಜಂಗಮವಾದನಯ್ಯಾ.
ಚಿಲ್ಲಾಳದೇವನೆ ದೇಹವೆಂದು ಭಾವಿಸಲಾಗಿ,
ಎನಗೆ ಚಿಲ್ಲಾಳದೇವನೆ ದೇಹವಾದನಯ್ಯಾ.
ಇಹಃಪಗೆಯಾಂಡರೆ ಧನವೆಂದು ಭಾವಿಸಲಾಗಿ,
ಇಹಃಪಗೆಯಾಂಡರೆ ಧನವಾದನಯ್ಯಾ.
ಇಂತೀ ಐವರ ಕಾರುಣ್ಯಪ್ರಸಾದವನುಂಡು ಮಹಾಮನೆಯಲ್ಲಿ ಸುಖಿಯಾದೆ, ಸಂಗಯ್ಯಾ.

ಪರಮ ದಾಸೋಹಿ ಲಿಂಗಾಂಗ ಯೋಗಿ ನೀಲಾಂಬಿಕಾ ತಾಯಿ

ಪರಮ ದಾಸೋಹವನು ನೆರೆಮಾಡಿ ಜಂಗಮದ ಪರಮ ಪ್ರಸಾದವನು ಸವಿದು ಸುಖದಿ ಕರದಿಷ್ಟಲಿಂಗದೊಳೂ ಶರೀರವನಿಂಬಿಟ್ಟ ಕರುಣಿ ನೀಲಮ್ಮ ಶರಣು ಯೋಗಿನಾಥ.
-ಬಸವಯೋಗಿ ಸಿದ್ಧರಾಮೇಶ್ವರರು.

ವಿಶ್ವ ವಿಭೂತಿ, ಜ್ಞಾನಜೋತಿ, ವಿಶ್ವ ಗುರು ಭಕ್ತಿ ಭಂಡಾರಿ ವಿಶ್ವಗುರು ಬಸವಣ್ಣನವರು ತಮ್ಮ ಸುತ್ತಲಿನ ಸಮಾಜದಲ್ಲಿರುವ ವೈಷಮ್ಯ ಮತ್ತು ಅಸಮಾನತೆಯನ್ನು ತೊಡೆದುಹಾಕಿ ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ಹೊಸ ಲಿಂಗಾಯತ ಧರ್ಮವನ್ನು ನೀಡಿ ಹೊಸ ಸಮಾಜವನ್ನು ರಚಿಸುವ ಕಾರ್ಯದಲ್ಲಿ ತೊಡಗಿದಾಗ, ಅಕ್ಕನಾಗಮ್ಮನವರಿಂದ ಲಿಂಗಾಯತ ಧರ್ಮ ದೀಕ್ಷೆಯನ್ನು ಪಡೆದು ಆತ್ಮೋನ್ನತಿಯ ಮಾರ್ಗವನ್ನು ತುಳಿದು ಗುರು ಬಸವಣ್ಣನವರ ವಿಚಾರಪತ್ನಿ (Intellectual companion)ಯಾಗಿ ಬಾಳಿದವರು ಪರಮ ದಾಸೋಹಿ ಲಿಂಗಾಂಗ ಯೋಗಿ ನೀಲಾಂಬಿಕಾ ತಾಯಿ. ನೀಲಲೋಚನೆ, ಗಂಗಾಂಬಿಕೆ, ನೀಲಗಂಗಾ, ನೀಲಗಂಗಾಬಿಕೆ ನೀಲವ್ವ ಎಂದೂ ಇವರನ್ನು ಕರೆಯುತ್ತಿದ್ದರು.

ಬಾಲ್ಯ:

ಕಲಚೂರ್ಯ ಬಿಜ್ಜಳನ ಮಹಾಮಂತ್ರಿ ಬಲದೇವರಸರ ಏಕೈಕ ಪುತ್ರಿ ನೀಲಾಂಬಿಕೆ ಇವರ ತಾಯಿಯ ಹೆಸರು ಮುಕ್ತಾಂಬೆ ಎಂದು ಸಾಹಿತ್ಯದಲ್ಲಿ ಹೇಳಲಾಗಿದೆ. ರಾಜಕೀಯ ಮನೆತನದಲ್ಲಿ ಬೆಳೆದುದರಿಂದ ಧೈರ್ಯ ಸ್ಥೈರ್ಯಗಳು ಸ್ವಭಾವಿಕವಾಗಿ ಬೆಳೆದು ಬಂದಿದ್ದವು. ಸಾಹಿತ್ಯ, ಸಂಗೀತ, ಕತ್ತಿವರಸೆಗಳಲ್ಲೂ ಬಲ್ಲಿದವರಾಗಿದ್ದರು. ತಂದೆಯ ಪ್ರತಿಯೊಂದು ಕಾರ್ಯದಲ್ಲಿಯೂ ನೆರವಾಗಿ ನಿಲ್ಲುತ್ತಿದ್ದರು.

ಅಂದಿನ ಕಾಲದಲ್ಲಿ ಬಾಲ್ಯ ವಿವಾಹ ಪ್ರಚಲಿತದಲ್ಲಿರುವುದರಿಂದ ಗುರು ಬಸವಣ್ಣನವರು ಎಂಟನೆಯ ವಯಸ್ಸಿಗೆ ಉಪನಯನವನ್ನು ತಿರಸ್ಕರಿಸಿ ಮನೆಬಿಡುವುದಕ್ಕೂ ಮುಂಚೆಯೇ ನೀಲಾಂಬಿಕೆಯವರಿಗೆ ಗುರು ಬಸವಣ್ಣನವರ ಜೊತೆ ವಿವಾಹ ಮಾಡಲಾಗಿತ್ತು ಎಂದು ಭೀಮಕವಿಯ ಬಸವಪುರಾಣದಲ್ಲಿ ಹೇಳಲಾಗಿದೆ. ಈ ವಿಚಾರ ಗುರು ಬಸವಣ್ಣನವರ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣವಾದ ಸ್ಥಾನವನ್ನು ಪಡೆದುಕೊಳ್ಳುತ್ತದೆ. ಗುರು ಬಸವಣ್ಣನವರ ವಚನಗಳಿಂದ ಅವರ ವ್ಯಕ್ತಿತ್ವವನ್ನು ಗುರುತಿಸುವದಾದರೆ ಅವರು ಆಳವಾದ ಅಧ್ಯಾತ್ಮ ಜೀವಿಯಾಗಿದ್ದರು ಮತ್ತು ಸ್ವಭಾವತಃ ವೈರಾಗ್ಯ ಮೂರ್ತಿಯಾಗಿದ್ದರು. ಸಂಸಾರಿಕ ಜೀವನದಲ್ಲಿ ಆಸಕ್ತಿ ಇಲ್ಲದವರಾಗಿದ್ದರು. ಆದರೆ ಅವರ ಮನಸ್ಸು ಪ್ರೌಢಾವಸ್ಥೆಗೆ ಬರುವ ಮೊದಲೇ ಬಾಲ್ಯ ವಿವಾಹ ನಡೆದು ಹೋಗಿದ್ದರಿಂದ ಒಬ್ಬ ಸ್ತ್ರೀಯ ಜೀವನಕ್ಕೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ಪ್ರೌಢಾವಸ್ಥೆಗೆ ಬಂದಾಗ ಸಂಸಾರ ಜೀವನದಲ್ಲಿ ಕಾಲಿಟ್ಟರು ಎನಿಸುತ್ತದೆ.
ತಾಯಿ ನೀಲಾಂಬಿಕೆಯವರ ಸಮಗ್ರ ವ್ಯಕ್ತಿತ್ವವನ್ನು ಚೆನ್ನವೀರ ಕಣವಿಯವರು ಹೀಗೆ ಕೊಂಡಾಡುತ್ತಾರೆ.

ಸದುವಿನಯದ ತುಂಬಿದ ಕೊಡ ತಂದಳು ನೀಲಾಂಬಿಕೆ
ಕಲ್ಯಾಣದ ಅಂಗಳದಲ್ಲಿ ತಳಿ ಹೊಡೆದರು ಚೆಂದಕೆ

ಸಮಚಿತ್ತದ ರಂಗೋಲಿಯು ಒಳಹೊರಗೂ ಧೂಪವವು
ಹಾದಾಡುವ ಹೊಸ್ತಿಲಲಿ ಹೊಯ್ದಾಡದ ದೀಪವು
ಮಹಾಮನೆಯ ಮಹಾತಾಯಿ ಮಾಸದ ಮಡಿ ಹಾಸಲು
ದಾಸೋಹಕೆ ಮೀಸಲಾದ ತೃಪ್ತಿಯ ನಗೆ ಸೂಸಲು

ಎಲ್ಲೆಲ್ಲಿಯ ಗಣತಿಂಥಿಣಿ ತಣಿದು ಹಾಡಿ ಹರಸಲು
ಭಕ್ತಿಯ ಭಾಂಡಾರ ತುಂಬಿ ಹರಡಿತು ಬೆಳುದಿಂಗಳು
ಅಯ್ಯನ ಕೈನೋವು ಎನಲು ಆಭರಣವು ಕೊಟ್ಟಳು
ಅನುಭಾವದ ಅಲಂಕಾರ ಆಚರಣೆಯ ತೊಟ್ಟಳು

ನೆರಳಾದಳು ಬಸವಣ್ಣನ ಹರಳಾದಳು ಬೆರಳಿಗೆ
ಅರಳಾದಳು ಲಿಂಗದಲ್ಲಿ ಪರಿಮಳಿಸುತ ಪೂಜೆಗೆ
ಏನೂ ನೋವು ಹೇಳಲಿಲ್ಲ ಕೇಳಲಿಲ್ಲ ಮಡದಿಗೆ
ಹಾಗೆ ಹೊರಟು ಹೋದರಣ್ಣಾ ಕಲ್ಯಾಣದ ಹುಡದಿಗೆ

ಕೂಡಲದಲ್ಲಿ ನೀರು ಹರಿದು ತಿಳಿಗೊಂಡಿತು ನೋಡಿರೆ
ನೀಲಾಂಬಿಕೆ ನೆನಪಾದಳು ಬೇಗನೆ ಕರೆತನ್ನಿರೆ
ಕರಸ್ಥಲದ ಬಸವರೂಪು ಪರಿಣಾಮವ ಮೀರಿಸಿ
ಬಸವಯ್ಯನು ಮಾಡಿದಾಟ ಲಿಂಗದೆಡೆಗೆ ತೋರಿಸಿ

ಅಲ್ಲಿ ಇಲ್ಲಿ ಉಭಯವಳಿದು ಅಂಗೈಯಲ್ಲಿ ಸಂಗಮ
ಅಲ್ಲಿದ್ದವರೂ ಇಲ್ಲಿಲ್ಲವೇ ಜಗದಜೀವ ಜಂಗಮ.
ನೀಲಾಂಬೆಯ ನಿಲುವಿನಲ್ಲಿ ಮಹಾಲಿಂಗ ಹೊಳೆಯಲು
ಬಸವಣ್ಣನ ಭಕ್ತಿ ಕಳಶ ಸಂಗಮನಡಿ ತೊಳೆಯಲು

ಗಾಳಿಯಾಗಿ ಗಾಳಿಯಾಗಿ ಮಹಾಬೆಳಕು ಸಂದಿತು
ಪ್ರಾಣಲಿಂಗದಲ್ಲಿ ಕರಗಿ ನೀಲಾಂಬರ ಮಿಂಚಿತು.

ವ್ಯಕ್ತಿತ್ವ

ವಿದ್ಯೆ, ವಿನಯ ಮತ್ತು ಸುಸಂಕೃತಿಗಳ ತ್ರಿವೇಣಿ ಸಂಗಮವಾಗಿದ್ದ ತಾಯಿ ನೀಲಲೋಚನೆಯವರು ಗುರುಬಸವಣ್ಣನವರ ಭಕ್ತಿ, ಆತ್ಮಶಕ್ತಿ ಮತ್ತು ಮೃದು ಹೃದಯಕ್ಕೆ ಮಾರುಹೋಗಿ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಮಂತ್ರಿಯ ಏಕ ಮಾತ್ರ ಪುತ್ರಿಯಾಗಿ ಸುಖದ ಸುಪ್ಪತಿಗೆಯಲ್ಲಿ ಬೆಳೆದರೂ ಗುರು ಬಸವಣ್ಣನವರ ವ್ಯಕ್ತಿತ್ವಕ್ಕೆ ಮಾರುಹೋಗಿ ಸರಳ ಜೀವನವನ್ನೇ ತಮ್ಮದಾಗಿಸಿಕೊಂಡರು. ನಿತ್ಯವೂ ಬಸವ ಮಹಾಮನೆಯಲ್ಲಿ ಲಕ್ಷದಮೇಲೆ ತೊಂಬತ್ತಾರು ಸಾವಿರ ಶರಣರಿಗೆ ನಡೆಯುವ ದಾಸೋಹದ ಕಾರ್ಯಭಾರ ಹಾಗು ಮೇಲ್ವಿಚಾರಣೆಯನ್ನು ನೀಲಾಂಬಿಕೆ ತಾಯಿಯವರು ವಹಿಸಿಕೊಂಡರು. ಮಹಾಮನೆಯ ದಾಸೋಹಕಾರ್ಯದ ಜೊತೆಗೆ ಅನುಭವ ಮಂಟಪದ ಜ್ಞಾನ ದಾಸೋಹ ಕಾರ್ಯಗಳಲ್ಲಿ ತನು-ಮನ-ಧನಗಳನ್ನು ಸವೆಸುತ್ತಿದ್ದರು. ಮಹಾಮನೆಗೆ ಬರುವ ಅತಿಥಿಗಳ ಸತ್ಕಾರ, ಅನುಭವ ಮಂಟಪದ ಕಾರ್ಯಕ್ರಮಗಳ ಸಿದ್ಧತೆ ಎಲ್ಲದರಲ್ಲೂ ಸಹಭಾಗಿಯಾಗುತ್ತಿದ್ದರು. ಪತಿಯ ಮನದಿಚ್ಛೆಯನ್ನರಿತು ಕಾರ್ಯಗೈವ ಮುತ್ಸದ್ದಿತನ ತಾಯಿ ನೀಲಾಂಬಿಕೆಯವರಲ್ಲಿತ್ತು. ಅವರು ತಮ್ಮ ಆತ್ಮಶಕ್ತಿಯ ಬಲದಿಂದ ಗುರುಬಸವಣ್ಣನವರ ಜಂಗಮ ಪ್ರೇಮಕ್ಕೆ ಆಧಾರವಾಗಿದ್ದರು. ಲಾಂಛನಕ್ಕೆ ಶರಣೆಂದು ಬೇಡಿದವರ್ಗೆ ಇಲ್ಲೆನ್ನದೀವುತ್ತ, ಕಳ್ಳನಲ್ಲಿಯೂ ಲಿಂಗದೇವನ್ನು ಕಾಣುವ ಅನುಭಾವಿ ಗುರು ಬಸವಣ್ಣನವರಂಥ ಮಹಾಮಹಿಮರ ಪತ್ನಿಯಾಗಿ ಅವರ ಮನದಿಚ್ಛೆಯಂತೆ ಕಾರ್ಯಗೈವ ಕಾಯಕ ಸುಲಭದ್ದಾಗಿರಲಿಲ್ಲ. ಆದರೆ ತಾಯಿ ನೀಲಾಂಬಿಕೆಯವರು ಲಿಂಗದೇವ ಭಕ್ತಿ ಮತು ಪತಿಭಕ್ತಿಯ ಬಲದಿಂದ ಆದರ್ಶ ಪತ್ನಿಯಾದರು. ಮಹಾಮನೆಯ ಮಹಾತಾಯಿ ಎಂದು ಪ್ರಸಿದ್ಧಿ ಪಡೆದರು.

ಲಕ್ಕಣ್ಣ ದಂಡೇಶ ಶಿವ ತತ್ವ ಚಿಂತಾಮಣಿಯಲ್ಲಿ ತಾಯಿ ನೀಲಾಂಬಿಕೆಯವರ ಬಗ್ಗೆ ಹೀಗೆ ಬರೆಯುತ್ತಾರೆ.

ಮುನಿಕಶ್ಯಪಂಗದಿತಿ ಸಾವಿತ್ರಿ ಸತ್ಯಪಂಗನಸೂಯೆ ಅತ್ರಿಗೆ ವಷಿಷ್ಠಂಗರುಂಧತಿಯು ಜನಕ ವಂಶದಲಿ ಲೋಪಾಮುದ್ರೆ ಕುಂಭಜಗೆ ಸೇರಿ ಪತಿಗಳ ಸೇವೆಯ ವಿನಯದಿಂ ಮಾಳ್ಪಂತೆ ಗಂಗಾಂಬಿಕೆಯು ತನು ಮನವನೊಚ್ಚತಗೊಟ್ಟು ಬಸವರಾಜನ ಚಿತ್ತದನುಗುಣದ ಸತಿಯಾದಳೆಂದು ಕೊಂಡಾಡುವವರ ಚರಣಾಂಬುಜಕ್ಕೆ ಶರಣು

ಮಹಾಮನೆಗೆ ಸತತವಾಗಿ ಬರುವ ಶರಣ ಸಮುದಾಯದ ಮಧ್ಯದಲ್ಲೂ ತ್ರಿಕಾಲ ಲಿಂಗಾರ್ಚನೆ ಮಾಡುತ್ತ ಲಿಂಗಾಂಗಯೋಗಿಯಾಗಿ ಅಪ್ರತಿಮವಾದ ಸಿದ್ಧಿಯನ್ನು ಪಡೆದುಕೊಂಡರು. ಜೊತೆಗೆ ಅನುಭವ ಮಂಟಪಕ್ಕೆ ಆಗಮಿಸುವ ಅಸಂಖ್ಯಾತ ಸಾಧಕರಿಗೆ ಮಾರ್ಗದರ್ಶನ ಮಾಡುವ ಗುರುವಾದರು ಮಹಾ ತಾಯಿಯಾದರು. ಅದಕ್ಕಾಗಿಯೇ ಅಕ್ಕಮಹಾದೇವಿಯವರನ್ನು ಅವ್ವೆ ನೀಲಾಂಬಿಕೆಯ ಮೋಹದ ಮಗಳು ಎಂದು ಕರೆಯುತ್ತಾರೆ.

ಹೆತ್ತವ್ವೆ ನೀಲಮ್ಮ ಮುತ್ತವ್ವೆ ಮಹಾದೇವಿ ಎತ್ತಿ ಸಲಹಿದಳಕ್ಕ ನಾಗಲೆಯು ತಾಯಿ ಇತ್ತ ಬಾರೆಂದು ತಾಂಬೂಲ ಪ್ರಸಾದವಿತ್ತ ಮುಕ್ತಾಯಕ್ಕಗೆ ಶರಣು ಯೋಗಿನಾಥ.
ತಾಯೆ, ಪರಮ ಸುಖಾಚಾರದ ಮೂರ್ತಿಯನಡಗಿಸಿ ನೀನೆಯಾದೆಯವ್ವಾ. ತಾಯೆ, ಮಹಾಜ್ಞಾನಕಲ್ಪಿತದಲ್ಲಿ ನೀನೆಯಡಗಿದೆಯವ್ವಾ. ತಾಯೆ, ನೀಲಮ್ಮನೆಂಬ ಸುಖವಾಸಮೂರ್ತಿ, ಕಪಿಲಸಿದ್ಧಮಲ್ಲಿನಾಥಯ್ಯ, ನಮ್ಮ ತಾಯೆ ನೀಲಮ್ಮನಾದಳು.

ಹೆತ್ತವ್ವೆ, ಎನ್ನ ತಾಯಿ ಎಂದು ಗುರು ಸಿದ್ಧರಾಮೇಶ್ವರರು ಗೌರವಿಸುತ್ತಾರೆ. ಅವರ ಚರಣಕ್ಕೆ ಶರಣೆಂದು ಧನ್ಯರಾಗುತ್ತಾರೆ

ಎಮ್ಮಪ್ಪ ಬಸವಣ್ಣ ಎಮ್ಮವ್ವೆ ನೀಲಮ್ಮ ಎಮ್ಮಯ್ಯ ಪ್ರಭುರಾಯ ಚೆನ್ನಬಸವ ಇನ್ನುಳಿದ ಶರಣರ ಚರಣಕ್ಕೆ ಶರಣೆಂದು ಧನ್ಯನಾದೆನು ಗುರುವೆ ಯೋಗಿನಾಥ

ಈ ಎಲ್ಲಾ ಕಾರ್ಯಗಳ ಮಧ್ಯೆಯೂ ತಮ್ಮ ಅನುಭಾವವನ್ನು ವಚನಗಳ ರಚನೆಯಲ್ಲಿ ಚೆಲ್ಲವರಿದಿದ್ದಾರೆ. ನೀಲಮ್ಮನ ವಚನ ಲಕ್ಷದ ಹನ್ನೊಂದು ಸಾಸಿರ ಎನ್ನುವ ಗುರು ಸಿದ್ಧರಾಮೇಶ್ವರರ ವಾಣಿಯನ್ನು ಕೇಳಿದರೆ ನಮಗೆ ತಾಯಿ ನೀಲಾಂಬಿಕೆಯವರ ಚಲನಶೀಲ ವ್ಯಕ್ತಿತ್ವ ಅಗಾಧವೆನಿಸುತ್ತದೆ. ಅವರ ಸಹನಶೀಲತೆ, ಶಾಂತ ಸ್ವಭಾವ, ಉದಾರ ಹೃದಯ, ಅಂತಃಕರುಣೆಯಿಂದ ತುಂಬಿದ ಭಕ್ತಿ ಭಾವ ಭರಿತ ಪ್ರಶಾಂತವಾದ ಮುಖವನ್ನು ಕಂಡವರೆಲ್ಲರೂ ಅವರ ವ್ಯಕ್ತಿತ್ವದ ಘನತೆಗೆ ಶಿರಬಾಗಿ ನಮಿಸುತ್ತಿದ್ದರು. ಅವರ ಪಾದದ ಪಾದುಕೆಯ ಧೂಳಾದರೂ ನನ್ನ ಪುಣ್ಯ ಎಂದು ಅನೇಕ ಮಹಾಮಹಿಮರೂ ಭಾವಿಸಿದ್ದರು.

ಜ್ಞಾನಕ್ರಿಯಾದಿಗಳಿಂದ ಲಿಂಗದಲ್ಲಿ ನಿಬ್ಬೆರಗಾದ ನೀಲಮ್ಮನ ಪಾದದ ಕಂದ ನಾನು, ಪಾದದ ದಾಸ ನಾನು,
ಪಾದದ ಪಾದುಕೆ ನಾನು, ಪಾದುಕೆಯ ಧೂಳಿ ನಾನು, ಕಪಿಲಸಿದ್ಧಮಲ್ಲಿಕಾರ್ಜುನದೇವರದೇವಾ.

ಅಲ್ಲಮ ಪ್ರಭುಗಳನ್ನು ಮೊದಲಿಗೆ ಕಂಡಾಗ ಅಬ್ಬರಿಸಿದ ಗುರು ಸಿದ್ಧರಾಮೇಶ್ವರರು ನೀಲಮ್ಮ ತಾಯಿಯವರ ಶ್ರೀ ಚರಣದಲ್ಲಿ ಕರಗುವುದನ್ನು ನೋಡಿದರೆ ಆ ಮಹಾ ತಾಯಿಯ ನಿಲುವು ನಮ ಕಲ್ಪನೆಗೂ ಮಿಗಿಲು ಎಂದೆನಿಸುತ್ತದೆ.

ಸಾಧನೆ

ಹನ್ನೆರಡನೇ ಶತಮಾನದ ಶರಣರಲ್ಲಿ ಕೆಲವೇ ಕೆಲವರು ಇಚ್ಚಾಮರಣತ್ವದ ಸಿದ್ಧಿಯನ್ನು ಸಾಧಿಸಿದವರಾಗಿದ್ದರು. ಅವರಲ್ಲಿ ತಾಯಿ ನೀಲಾಂಬಿಕೆಯವರೂ ಇಚ್ಚಾಮರಣ ಶಕ್ತಿಯುಳ್ಳವರಾಗಿದ್ದರು. ಭಾವಲಿಂಗೈಕ್ಯ ಸ್ಥಿತಿಯನ್ನು ಪಡೆದುಕೊಂಡವರಾಗಿದ್ದರು.

ಅಂಗದ ಸಂಗವ ಹಿಂಗಿ ಅಂಗವನಳಿದೆನಯ್ಯ.
ಆ ಅಂಗವನಳಿದ ಬಳಿಕ
ಅಣೋರಣೀಯಾನ್ ಮಹತೋಮಹೀಯಾನ್‍ಯೆಂಬ ಶಬ್ದವಡಗಿತ್ತು.
ಮನವನರಿದು, ಆ ಮನ ಘನವ ತಿಳಿದು,
ಆನು ಬದುಕಿದೆನಯ್ಯ, ಆನು ಸುಖಿಯಾದೆನಯ್ಯ.
ಆನು ಇಹಪರದ ಹಂಗಹರಿದು,
ಸುಖ ವಿಸುಖ ಸಂಗಯ್ಯ

ಅಂಗಗುಣಗಳನ್ನಳಿದುಕೊಂದು ಲಿಂಗವೇ ತಾವಾದ ಬಳಿಕ ಸುಖಿಯಾದೆನೆಂದು ಹೇಳುತ್ತಾರೆ.

ಮೂರಳಿದು, ಮೂರ್ತಿಯ ಕಳದು,
ಅನಿಮಿಷಯೋಗ ವಿಚಾರವನನುಭವಿಸಿ,
ವಿಚಾರವನಂಗವನಂಗೈಸಿದಂಗವನಂಗದಲ್ಲಿಯೆ
ಅಡಗಿ ನಿಂದೆನಯ್ಯ ಸಂಗಯ್ಯ.

ಅನಿಮಿಷ ದೃಷ್ಟಿಯಿಂದ ಇಷ್ಟಲಿಂಗಯೋಗ ಮಾಡುತ್ತ ಸ್ಥೂಲ, ಸೂಕ್ಷ್ಮ, ಕಾರಣ ಶರೀರ ವೆಂಬ ಮೂರಳಿದು, ಭಾವ ಲಿಂಗೈಕ್ಯಸ್ಥಿತಿಯನ್ನು ಪಡೆದುಕೊಂಡಿರುವ ತಮ್ಮ ಅನುಭವವನ್ನು ಮೇಲಿನ ವಚನದಲ್ಲಿ ಹೇಳತ್ತಾರೆ.

ಪಶ್ಚಿಮ ಚಕ್ರವಿಡಿದು ಪರಮನಾದಳು ಕೂಡಲಸಂಗಮದೇವನ ಮರುಳು ಮಗಳು ನೀಲಲೋಚನೆ, ಚೆನ್ನಬಸವಣ್ಣಾ! ಎಂದು ಗುರುಬಸವಣ್ಣನವರೇ ಹೇಳುವಾಗ ತಮ್ಮ ದೇಹದ ಎಲ್ಲಾ ಚಕ್ರಗಳನ್ನು ಜಾಗ್ರತಮಾಡಿಕೊಂಡು ಇಚ್ಛಾಮರಣ ಶಕ್ತಿಯನ್ನು ಗಳಿಸಿಕೊಂಡು ಸಾಧನೆಯ ತುಟ್ಟ ತುದಿಯನ್ನು ತಲುಪಿದ್ದರು ಎನ್ನುವುದು ಮನದಟ್ಟಾಗುತ್ತದೆ.

ಲಿಂಗವಾದಡೆ ಚೆನ್ನಬಸವಣ್ಣನಂತಾಗಬೇಕು.
ವೀರನಾದಡೆ ಮಡಿವಾಳಯ್ಯನಂತಾಗಬೇಕು.
ನಿಗ್ರಹಿಯಾದರೆ ಹೊಡೆಹುಲ್ಲ ಬಂಕಯ್ಯನಂತಾಗಬೇಕು
ಧೀರನಾದಡೆ ಘಟ್ಟಿವಾಳಯ್ಯನಂತಾಗಬೇಕು.
ಲಿಂಗದಲ್ಲಿ ನಿರ್ವಯಲಾದರೆ ನೀಲಲೋಚನೆಯಮ್ಮನಂತಾಗಬೇಕಯ್ಯ.
ಈ ಐವರ ಕಾರುಣ್ಯ ಪ್ರಸಾದವ ಕೊಂಡು ಬದುಕಿದೆನಯ್ಯಾ
ಕಪಿಲಸಿದ್ಧ ಮಲ್ಲಿಕಾರ್ಜುನದೇವರ ದೇವಾ.

ಎಂದು ನೀಲಾಂಬಿಕೆತಾಯಿಯಚರುಯವರು ಲಿಂಗದಲ್ಲಿ ಪಡೆದ ನಿರ್ವಯಲ ಪದವಿಯನ್ನು ಕುರಿತು ಗುರು ಸಿದ್ಧರಾಮೇಶ್ವರು ಕೊಂಡಾಡುತ್ತಾರೆ.

ಪತಿಯ ಜೊತೆ ಬಾಂಧವ್ಯ:

ಮದುವೆಯಾದ ಹೊಸದರಲ್ಲಿ ಪತಿ-ಪತ್ನಿಯಂತೆ ಇದ್ದು, ಬಾಲ ಸಂಗಯ್ಯನೆಂಬ ಮಗನನ್ನು ಪಡೆದರು. ನಂತರ ಬಾಲ ಸಂಗಯ್ಯನವರು ಕೆಲವು ವರ್ಷಗಳಲ್ಲೇ ಲಿಂಗೈಕ್ಯರಾದರೆಂದು ತೋರುತ್ತದೆ. ಅದಾದ ನಂತರ ಅವರು ಪತಿ ಪತ್ನಿ ಎಂಬ ಭಾವವಳಿದು ಗುರು-ಶಿಷ್ಯೆ ಎಂಬ ಭಾವವಳವಡಿಸಿಕೊಳ್ಳುತ್ತಾರೆ.

ಆದಿ ಅನಾದಿ ತತ್ವವ ಭೇದಿಸಿಕೊಟ್ಟ ಗುರುವೆ,
ಅಪ್ರಮಾಣದ ಬೆಳಗ ಭೇದಿಸಿಕೊಟ್ಟ ಗುರುವೆ,
ಅಕಾರ ಉಕಾರ ಮಕಾರ ಕಳೆಯನರುಹಿಸಿಕೊಟ್ಟ ಗುರುವೆ,
ಇಷ್ಟ ಪ್ರಾಣ ಭಾವವಿದೆಂದು ತೋರಿದ ಗುರುವೆ,
ನಿಜದರಿವನರುಹಿಸಿಕೊಟ್ಟ ಗುರುವೆ,
ನಿರ್ಮಳಪ್ರಭೆಯ ತೋರಿದ ಗುರುವೆ,
ನಿಜವನನುಭವಕ್ಕೆ ತಂದ ಗುರುವೆ
ನಿಮ್ಮ ಘನವ ಕಾಬ ಕಣ್ಣು ಕ್ರಮಗೆಟ್ಟಿತ್ತು ಸಂಗಯ್ಯಾ,
ಬಸವನ ಪ್ರಭೆ ಎಲ್ಲಿ ಅಡಗಿತ್ತೊ

ಗುರು ಬಸವಣ್ಣನವರನ್ನು ನೀಲಾಂಬಿಕೆಯವರು ಕೇವಲ ಪತಿ ಎಂದು ಭಾವಿಸದೇ ಗುರು ಎಂದು ಭಾವಿಸಿದ್ದರು.

ಮಡದಿ ಎನಲಾಗದು ಬಸವಂಗೆ ಎನ್ನನು.
ಪುರುಷನೆನಲಾಗದು ಬಸವನ ಎನಗೆ.
ಉಭಯದ ಕುಳವ ಹರಿದು ಬಸವಂಗೆ ಶಿಶುವಾನಾದೆನು,
ಬಸವನೆನ್ನ ಶಿಶುವಾದನು. ಪ್ರಮ ಥರು ಪುರಾತರು ಸಾಕ್ಷಿಯಾಗಿ
ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಗಾನಡಗಿದೆ.

ಮಡದಿ-ಪುರುಷ ಎಂಬ ಉಭಯ ಭಾವವನ್ನು ಹರಿದು ತಂದೆ ಮಗಳು, ತಾಯಿ ಮಗ ಎಂಬ ಭಾವನೆಯಳಡಿಸಿಕೊಂಡಿದ್ದರು. ನಿಜವಾಗಿಯೂ ಇದು ಅದ್ಭುತವಾದ ಸಾಧನೆ. ಲಿಂಗಾಯತ ಧರ್ಮದಲ್ಲಿ ದಾಂಪತ್ಯ ಜೀವನದ ಸಾರವೇ ಇದಾಗಿದೆ. ಪ್ರತಿಯೊಬ್ಬ ಲಿಂಗಾಯತ ಧರ್ಮಿಯೂ ಒಂದು ಹಂತದಲ್ಲಿ ಈ ಭಾವವನ್ನು ಅಳವಡಿಸಿಕೊಳ್ಳಬೇಕು. ಪತಿ-ಪತ್ನಿಯರಿಬ್ಬರೂ ದೇವರಿಗೆ ಸತಿಯಾಗಿ ಇಬ್ಬರೂ ಶರಣ ಸತಿ ಲಿಂಗ ಪತಿ ಭಾವವನ್ನು ಅಳವಡಿಸಿಕೊಳ್ಳಬೇಕು. ಈ ವಿಚಾರವನ್ನು ಪರೋಕ್ಷವಾಗಿ ಸಂದೇಶ ನೀಡುತ್ತಾರೆ.

ಸಂದೇಶ

ಆಗಿಂಗೆ ಮುಯ್ಯಾನದಿರು, ಚೇಗಿಂಗೆ ಬೆಂಬೀಳದಿರು,
ಆಹಾ ಮನವೆ, ಸಂತೈಸಿಕೊ ನಿನ್ನ ನೀನೆ.
ಆಗೆಂದಡೆ ನಿನ್ನ ವಶವಲ್ಲ, ಹೋಗೆಂದಡೆ ನಿನ್ನಿಚ್ಫೆಯಲ್ಲ,
ಭೋಗಾದಿಭೋಗಂಗಳೆಲ್ಲವು ಸಂಗಯ್ಯನಧೀನವಾಗಿ.

ಬಹುಶಃ ಈ ವಚನವನ್ನು ಬಾಲಸಂಗಯ್ಯನವರು ಲಿಂಗೈಕ್ಯರಾದಾಗ ಬರೆದಂತೆ ತೋರುತ್ತದೆ. ನಮ್ಮ ಜೀವನದಲ್ಲಿ ಬರುವ ಸುಖ-ದಃಖ, ನೋವು-ನಲಿವು, ಆಪತ್ತು-ವಿಪತ್ತುಗಳೆಲ್ಲವೂ ಲಿಂಗದೇವರ ಅಧೀನದಲ್ಲಿರುತ್ತವೆ ಅದಕ್ಕಾಗಿ ನಾವು ವಿಹ್ವಲಗೊಳ್ಳಬಾರದು ಎನ್ನುವುದೇ ಈ ವಚನದ ಸಂದೇಶವಾಗಿದೆ.

ಎಲೆ ಶರಣರಿರಾ, ಎಲೆ ಭಕ್ತರಿರಾ,
ಭಕ್ತಿಕಾಂಡದ ಮೂಲಿಗನ ಕಾಣಿರೆ ಬಸವನ ?
ಆ ಭಕ್ತಿಯಸಂಗದ ಐಕ್ಯನ ಕಾಣಿರೆ ಬಸವನ ?
ಭಕ್ತಿಯ ನಿಜಸಮಾದಿsಯ ಸುಖವ ಕರುಣಿಸುವ ಅಯ್ಯ ಬಸವನ,
ಸಂಗಯ್ಯನ ಪ್ರಸಾದಿಯಾದ ಬಸವನ ಕಾಣಿರೆ ಭಕ್ತರು ?

ಗುರು ಬಸವಣ್ಣನವರು ವೈಚಾರಿಕವಾದ ಭಕ್ತಿ ಪರಂಪರೆಯ ಮೂಲಿಗರಾಗಿದ್ದಾರೆ. ಅವರನ್ನು ನಂಬಿ ಭಕ್ತಿಯ ನಿಜ ಸುಖವನ್ನು ಅನುಭವಿಸಿರಿ. ಗುರು ಬಸವಣ್ಣನವರು ಪರಮಾತ್ಮನು ಈ ಜಗತ್ತಿಗೆ ನೀಡಿದ ಪ್ರಸಾದ ಅವರನ್ನು ಭಕ್ತಿಯಿಂದ ಸ್ವೀಕರಿಸಿ ಎನ್ನುತ್ತಾರೆ.
ಆತ್ಮ ಕಥನದಂತಿರುವ ವಚನಗಳು ಅವರು ಜೀವಿಸಿದ ಬಗೆ, ಸಂಧಿಗ್ಧ ಪರಿಸ್ಥಿತಿಯಲ್ಲಿ ಅವರು ನಡೆದುಕೊಂಡ ರೀತಿ, ತೆಗೆದುಕೊಂಡ ನಿರ್ಣಯಗಳ ಬಗ್ಗೆ ತಿಳಿಸುತ್ತವೆ. ಹೀಗಾಗಿ ಅವರ ಎಲ್ಲಾ ವಚನಗಳು ಒಂದಿಲ್ಲ ಒಂದು ಸಂದೇಶವನ್ನು ಕೊಡುತ್ತವೆ.

ಲಿಂಗೈಕ್ಯ

ಗಡಿಪಾರಿನ ಆಜ್ಞೆ ಹೊತ್ತು ಗುರು ಬಸವಣ್ಣನವರ ಕೂಡಲ ಸಂಗಮದಲ್ಲಿ ತಪೋಮಗ್ನರಾಗುತ್ತಾರೆ. ಲಿಂಗದೇವನಿಂದ ತನ್ನಲ್ಲಿ ಒಡವೆರದು ಒಂದಾಗುವಂತೆ ಸಂದೇಶವನ್ನು ಪಡೆಯುತ್ತಾರೆ. ಆಗ ನೀಲಾಂಬಿಕೆಯವರನ್ನು ಕರೆತರುವಂತೆ ಅಪ್ಪಣ್ಣನವರಿಗೆ ಹೇಳಿ ಕಳಿಸುತ್ತಾರೆ. ಕೂಡಲ ಸಂಗಮ ಮತ್ತು ತಂಗಡಿಗೆ ಗ್ರಾಮಗಳು ಕೃಷ್ಣಾ ನದಿಯ ಎರಡು ದಂಡೆಗಳ ಮೇಲಿರುವ ಗ್ರಾಮಗಳು. ಮಳೆಗಾಲವಾದ್ದರಿಂದ ಕೃಷ್ಣ ನದಿ ತುಂಬಿ ಹರಿಯುತ್ತಿದೆ. ಬಸವಕಲ್ಯಾಣದಿಂದ ಆಗಮಿಸಿದ ತಾಯಿ ನೀಲಾಂಬಿಕೆ ಮತ್ತು ಅಪ್ಪಣ್ಣನವರು ತಂಗಡಿಗೆಯಲ್ಲಿ ಬೀಡು ಬಿಟ್ಟಿರುತ್ತಾರೆ. ಅಂದಿನ ಕಾಲದಲ್ಲಿ ತಂಗಡಿಗೆಯಿಂದ ಕೂಡಲಸಂಗಮಕ್ಕೆ ಬರಲು ನದಿ ಹರಿಯುವಾಗ ದೋಣಿಯಲ್ಲಿ ಬರಬೇಕಿತ್ತು ಇಲ್ಲವೇ ಬೇಸಿಗೆಯಲ್ಲಿ ನಡೆದು ಬರಬಹುದಾಗಿತ್ತು ಅದೊಂದೇ ದಾರಿ. ಹೀಗಾಗಿ ನದಿ ತುಂಬಿ ಹರಿಯುತ್ತಿರುವಾಗ ನದಿ ದಾಟಲಿಕ್ಕಾಗದೆ 2-3 ದಿನ ಅಲ್ಲಿಯೇ ತಂಗುತ್ತಾರೆ. ಆ ಕಡೆ ಕೂಡಲ ಸಂಗಮದಲ್ಲಿ ಇಷ್ಟಲಿಂಗಯೋಗ ನಿರತರಾಗಿದ್ದ ಗುರುಬಸವಣ್ಣನವರು ದಿನಾಂಕ 30-7-1196ಶ್ರಾವಣ ಶುದ್ಧ ಪಂಚಮಿಯಂದು ಲಿಂಗೈಕ್ಯರಾಗುತ್ತಾರೆ. ಅವರ ಸಮಾಧಿ ಮಾಡಿ ಅದರ ಮೇಲೆ ಜ್ಯೋತಿಯನ್ನು ಹಚ್ಚಿರುವುದನ್ನು ನೋಡಿ ನೀಲಾಂಬಿಕೆಯವರು ಗುರು ಬಸವಣ್ಣನವರು ಲಿಂಗೈಕ್ಯರಾಗಿರುವುದನ್ನು ತಿಳಿದುಕೊಳ್ಳುತ್ತಾರೆ. ಗುರು ಬಸವಣ್ಣನವರು ಲಿಂಗೈಕ್ಯರಾದ ಮೇಲೆ ತಾಯಿ ನೀಲಾಂಬಿಕೆಯವರು ಬರೆದ ವಚನಗಳನ್ನು ಓದಿದರೆ ನಮ್ಮ ಹೃದಯ ಕಲಕಿದಂತಾಗುತ್ತದೆ. ಆ ವಚನಗಳಲ್ಲಿ ಬಸವ ಪ್ರಲಾಪವಿದೆ. ಅದು ಅಲೌಕಿಕವಾದ ಪ್ರಲಾಪ ಒಬ್ಬ ಗುರುವನ್ನು ಕಳೆದುಕೊಂಡ ಪ್ರಲಾಪವಿದೆ.

ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮಕ್ಕೆ
ಮಾಡುವ ಮಾಟವಳಿಯಿತ್ತು ಬಸವಾ
ಇಂದಿಗೆ ಊಟವಳಿಯಿತ್ತು ಬಸವಾ.
ಇಂದಿಂಗೆ ಅವರ ಸಂಗವಳಿದು
ನಿರಾಲಂಬಮೂರ್ತಿಯ ಇರವು ಕಾಣಿಸಿತಯ್ಯಾ ಬಸವಾ,
ಸಂಗಯ್ಯಾ, ಬಸವನ ರೂಪು ಎನ್ನಲ್ಲಿ ಅಡಗಲು

ಸಮಯಾಚಾರವಡಗಿದ ಬಸವಾ,
ಸಂಗ ನಿಸ್ಸಂಗವಾದ ಬಸವಾ,
ಶಬ್ದವಡಗಿದ ಬಸವಾ, ಶೂನ್ಯವಳಿದ ಬಸವಾ,
ಪ್ರಸಾದ ಹಿಂಗಿದ ಬಸವಾ,
ಪ್ರಸನ್ನಮೂರ್ತಿಯ ಕಂಡ ಬಸವಾ.
ಪ್ರಭೆಯಳಿದ ಬಸವಾ, ಪ್ರಸನ್ನರೂಪ ಬಸವಾ,
ಕಾಯವನಳಿದನಯ್ಯಾ ಸಂಗಯ್ಯನ ಗುರುಬಸವ.

ಆದಿ ನಾದದ ಬಿಂದುವನರಿದು ಭಕ್ತಿಸಂಭಾಷಣೆಯ ಮಾಡಿದ ಬಸವಾ,
ಪ್ರಣವದಲ್ಲಿ ನಿಜವ ಕಂಡು ತೋರಿದ ಬಸವಾ.
ಆ ಪ್ರಣವದ ಘನವ ಕಂಡ ಬಸವಾ.
ಇತರ ತೃಪ್ತಿಯನನುಭವಿಸಬಲ್ಲ ಬಸವಾ
ನೀನೆನ್ನಲ್ಲಿ ಅಡಗಿ, ನಾ ನಿನ್ನಲ್ಲಿ ಅಡಗಿ,
ನಾ ನಿನ್ನ ಮನದ ಅರಿವನರಿದು ಉಭಯವಿಲ್ಲವೆಂದೆನೆಂದೆ ಬಸವಾ.
ಸುಖದ ಸಮಯಾಚಾರವ ಕಂಡು ನಿಜದಲ್ಲಿ ನಿಂದವಳಾನು ನಾನಯ್ಯ ಬಸವಾ.
ಸಂಗಯ್ಯನಲ್ಲಿ ನಿಜವಿಡಿದ ಹೆಣ್ಣು ನಾನೇ ಅಹುದೆಂದು
ನುಡಿದೆನಯ್ಯಾ ಅಪ್ಪಣ್ಣಾ.

ನಾಡಿನ ಹೆಣ್ಣುಗಳೆಲ್ಲಾ ಬನ್ನಿರೆ ಅಕ್ಕಗಳಿರಾ,
ಅಕ್ಕನರಸ ಬಸವಯ್ಯನು ಬಯಲ ಕಂಡು ಬಟ್ಟಬಯಲಾದನು
ಅಕ್ಕನರಸನಿಲ್ಲದೆ ನಿರಕ್ಕರನಾದನು ಬಸವಯ್ಯನು.
ನಮ್ಮ ಸಂಗಯ್ಯನಲ್ಲಿ ಬಸವಯ್ಯನೈಕ್ಯ ಬಯಲಿಲ್ಲದ ಬಯಲು.

ಕೊನೆಗೆ ತಮ್ಮ ಮನಸ್ಸನ್ನು ಸ್ಥಿಮಿತಕ್ಕೆ ತಂದು ಕೊಂಡು ಅಲೌಕಿವಾದ ಪ್ರಲಾಪವನ್ನು ಮೀರಿ ಅಂದಿನ ಸಂಜೆಯ ಇಷ್ಟಲಿಂಗ ಪೂಜೆಯಲ್ಲಿ ನಿರತರಾಗುತ್ತಾರೆ. ಗುರು ಬಸವಣ್ಣನವರು ಬೆಳಕಿನ ಶರೀರಧಾರಿಯಾಗಿ ನೀಲಾಂಬಿಕೆಯವರ ಕರಸ್ಥಲದ ಇಷ್ಟಲಿಂಗದಲ್ಲಿ ದರ್ಶನ ಕೊಡುತ್ತಾರೆ. ನಾನು ಲಿಂಗದೇವನಲ್ಲಿ ಒಡವೆರದು ಒಂದಾಗಿದ್ದೇನೆ ನೀನು ಸಹ ಲಿಂಗೈಕ್ಯಳಾಗು ಎನ್ನುವ ಸಂದೇಶವನ್ನೂ ಪಡೆಯುತ್ತಾರೆ. ಆಗ ತಮ್ಮ ಮನಸ್ಸಿಗೆ ಈ ರೀತಿಯಾಗಿ ಸಮಾಧಾನ ಹೇಳಿಕೊಳ್ಳುತ್ತಾ ತಾವೂ ಲಿಂಗೈಕ್ಯರಾಗುತ್ತಾರೆ.

ನಾನಾರ ಸಾರುವೆನೆಂದು ಚಿಂತಿಸಲೇತಕ್ಕಯ್ಯಾ ಬಸವಾ ?
ನಾನಾರ ಹೊಂದುವೆನೆಂದು ಭ್ರಮೆಬಡಲೇತಕ್ಕಯ್ಯಾ ಬಸವಾ ?
ನಾನಾರ ಇರವನರಿವೆನೆಂದು ಪ್ರಳಾಪಿಸಲೇತಕ್ಕಯ್ಯಾ ಬಸವಾ ?
ಪರಿಣಾಮಮೂರ್ತಿ ಬಸವನರೂಪು ಎನ್ನ ಕರಸ್ಥಲದಲ್ಲಿ ಬೆಳಗಿದ
ಬಳಿಕ ಸಂಗಯ್ಯನ ಹಂಗು ನಮಗೇತಕ್ಕಯ್ಯಾ ಬಸವಾ ?


ನಾನೀಗ ಯಾರ ಹತ್ತಿರ ಹೋಗಲಿ? ಯಾರನ್ನು ನನ್ನವರೆನ್ನಲಿ? ಎಂದು ಕಳವಳ ಪಡಬೇಡ. ಯಾರ ಇರುವನ್ನು ಅರಿಯಬೇಕು ಎನ್ನುವ ಪ್ರಲಾಪವೇಕೆ? ಗುರು ಬಸವಣ್ಣನವರು ನನ್ನ ಕರಸ್ಥಲದ ಇಷ್ಟಲಿಂಗದಲ್ಲಿಯೇ ಇರುವಾಗ ನಾನು ಅದರಲ್ಲಿಯೇ ಒಡವೆರದು ಒಂದಾಗಬೇಕು ಎಂದು ಇಷ್ಟಲಿಂಗಯೋಗ ನಿರತರಾಗಿ ಮರುದಿನ ತಾವೂ ಉರಿಯುಂಡ ಕರ್ಪೂರದಂತೆ ತೆರಹಿಲ್ಲದೆ ನಿಂದೆನಯ್ಯ. ನಿಂದು ನಿರ್ವಯಲಾಗಿ ಲಿಂಗ ಲಿಂಗಾಂಗಿಯಾನಾಗಿ, ನೀರೊಳಗೆ ನೀರು ಬೆರದಂತಾನಾದೆನಯ್ಯ ಸಂಗಯ್ಯ ಸಂಗಯ್ಯ

ಎನಗೆ ಇಲ್ಲಿ ಏನು ಬಸವ ಬಸವಾ ? ಎನಗೆ ಅದರ ಕುರುಹೇನು ಬಸವಾ ? ಎನಗೆ ಬಸವ ನಡೆದ ಭಕ್ತಿಸ್ಥಲದಲ್ಲಿ ನಿಂದು, ಭಕ್ತಿಸ್ಥಲ ಬಸವನಲ್ಲಿ ಕುರುಹಳಿದು, ನಾನು ಬಸವನ ಶ್ರೀಪಾದದಲ್ಲಿ ಉರಿಯುಂಡ ಕರ್ಪೂರದಂತಡಗಿದ ಬಳಿಕ ಸಂಗಯ್ಯಾ ? ಎಂದು ಲಿಂಗೈಕ್ಯರಾಗುತ್ತಾರೆ.

*
ಪರಿವಿಡಿ (index)
Previous ನಿವೃತ್ತಿ ಸಂಗಯ್ಯ ನುಲಿಯ ಚಂದಯ್ಯ Next