ಶಿವಲೆಂಕ ಮಂಚಣ್ಣ

*
ಅಂಕಿತ: ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ
ಕಾಯಕ: ಪಂಡಿತ

ಪರಧನವನೊಲ್ಲದಿಪ್ಪುದೆ ವ್ರತ, ಪರಸ್ತ್ರೀಯರ ಕೂಡದಿಪ್ಪುದೆ ಶೀಲ.
ಸರ್ವಜೀವವ ಕೊಲ್ಲದಿಪ್ಪುದೆ ನೇಮ.
ತಥ್ಯಮಿಥ್ಯವನಳಿದಿಪ್ಪುದೆ ನೇಮ.
ಇದು, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಸಂದೇಹವಿಲ್ಲದ ವ್ರತ.

ಪಂಡಿತ ಪರಂಪರೆಗೆ ಸೇರಿದ ಈತನ ಮೂಲಸ್ಥಳ ಕಾಶಿ. ಕಲ್ಯಾಣಕ್ಕೆ ಬಂದು ಶರಣನಾಗುತ್ತಾನೆ. ಉರಿಲಿಂಗದೇವ ಈತನ ಶಿಷ್ಯ. ಕಾಲ-೧೧೬೦. ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗ ಅಂಕಿತದಲ್ಲಿ ೧೩೨ ವಚನಗಳು ದೊರೆತಿವೆ. ಪುರಾಣಗಳಲ್ಲಿ ಈತ ಪರವಾದಿಗಳನ್ನು ವಾದದಲ್ಲಿ ಸೋಲಿಸಿ ಶಿವಾಧಿಕ್ಯವನ್ನು ಮೆರೆಯುತ್ತ, ಹಲವು ಕಡೆ ಸಂಚರಿಸಿದ ಸಂಗತಿ ಉಕ್ತವಾಗಿದೆ. ಅಷ್ಟಾವರಣ, ಷಟ್-ಸ್ಥಲ, ವ್ರತಾಚಾರಗಳ ನಿರೂಪಣೆ ಈತನ ವಚನಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ. ಜೊತೆಗೆ ಡಾಂಭಿಕ ಗುರುಗಳ ಟೀಕೆ, ಕಾಯಕ ದಾಸೋಹಗಳ ವಿವರಣೆಯೂ ಬಂದಿದೆ.

ಷಟ್ ಸ್ಥಲ, ಅಷ್ಟಾವರಣಗಳ ನಿರೂಪಣೆ, ಒಳ್ಳೆಯ ಚಿಂತಕ, ಸಾಮಾಜಿಕ ವಿಡಂಬನೆಯಲ್ಲಿ ಮೊನಚಿದೆ

ಅಂಗಕ್ಕೆ ಲಿಂಗವ ಕೊಟ್ಟವ ಆಚಾರ್ಯನಾದ.
ಮನಕ್ಕರಿವ ತೋರಿದಾತ ಮೋಕ್ಷ ಆಚಾರ್ಯನಾದ.
ಮೋಕ್ಷ ವಿಮೋಕ್ಷವಾಗಿ ಉಭಯದ ಗೊತ್ತ ತೋರಿ,
ಕಾಯದ ಕರ್ಮವ ಕೆಡಿಸಿ, ಜೀವನ ಭವವ ಛೇದಿಸಿ,
ತದ್ರೂಪ ತೋರಿದ ಜ್ಞಾನಗುರು.
ಆತ ಪ್ರಕಾಶ, ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗವು ತಾನೆ.

ಅಂಗದೇಹಿ ಲಿಂಗೋದಕವ ಕೊಳಲಾಗದು.
ಪ್ರಕೃತಿಜೀವಿ ಪಾದೋದಕವ ಕೊಳ್ಳಲಾಗದು.
ಭವಜೀವ ಪ್ರಸಾದೋದಕವ ಕೊಳಲಾಗದು.
ಇಂತೀ ತ್ರಿವಿಧಭೇದಂಗಳಲ್ಲಿ ತ್ರಿವಿಧಶುದ್ಧವಾಗಿ ಕೊಳಬಲ್ಲಡೆ,
ತ್ರಿವಿಧೋದಕ ಸಮರ್ಪಣ,
ಈಶಾನ್ಯಮೂರ್ತಿ ಮಲ್ಲಿಕಾರ್ಜುನಲಿಂಗಕ್ಕೆ ಅರ್ಪಿತ.


*
Previousಶಿವನಾಗಮಯ್ಯಷಣ್ಮುಖಸ್ವಾಮಿNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.