Previous ಆಯ್ದಕ್ಕಿ ಲಕ್ಕಮ್ಮ ಒಕ್ಕಲಿಗ ಮುದ್ದಣ್ಣ Next

ಆಯ್ಕಕ್ಕಿ ಮಾರಯ್ಯ

*
ಅಂಕಿತ: ಅಮರೇಶ್ವರಲಿಂಗ
ಕಾಯಕ: ಆಕ್ಕಿಯನ್ನು ಆಯುವ ಕಾಯಕ

ಬೇಡಿ ತಂದು ದಾಸೋಹವ ಮಾಡುವನ್ನಬರ,
ಪಂಗುಳನ ಪಯಣದಂತೆ.
ಯಾಚಕತ್ವ ಭಕ್ತಂಗುಂಟೆ ?
ಭಕ್ತನಾಗಿ ಹುಟ್ಟಿ ಭಕ್ತರ ಬೇಡಿತಂದು ಮಾಡಿ ಮುಕ್ತಿಯನರಸಲುಂಟೆ ?
ಅದು ಅಮರೇಶ್ವರಲಿಂಗವ ಮುಟ್ಟದೆ ಇತ್ತಲೆ ಉಳಿಯಿತ್ತು.

ಈತನ ಸ್ಥಳ ರಾಯಚೂರ ಜಿಲ್ಲೆಯ ಲಿ೦ಗಸೂರ ತಾಲೂಕಿನ ಅಮರೇಶ್ವರ. ಸತಿ-ಲಕ್ಕಮ್ಮ. ಅಧಿದೈವ ಅಮರೇಶ್ವರ. ಕಾಲ-೧೧೬೦. ಕಲ್ಯಾಣಕ್ಕೆ ಬಂದ ಈತನ ಕಾಯಕ ಬೀದಿಯಲ್ಲಿ ಬಿದ್ದ ಅಕ್ಕಿಯನ್ನು ಆಯುವುದು. ಕಾಯಕ-ದಾಸೋಹ ನಿಷ್ಠ ಶರಣರಲ್ಲಿ ಅಗ್ರಗಣ್ಯ. "ಕಾಯಕವೇ ಕೈಲಾಸ" ಎ೦ಬುದು ಇವನ ಬದುಕಿನ ಮುಖ್ಯ ಸಿದ್ವಾಂತ. 'ಅಮರೇಶ್ವರಲಿಂಗ' ಆಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಸದ್ಯ ದೊರೆತ ೩೨ ವಚನಗಳಲ್ಲಿ ಕಾಯಕತ್ವದ ವಿಚಾರವೇ ಪ್ರಧಾನವಾಗಿದೆ.

ತೊಟ್ಟು ಬಿಡುವನ್ನಕ್ಕ ಮತ್ತಾ ಬುಡದಾಸೆ ಬೇಕು.
ಮರ್ತ್ಯದ ಹಂಗುಳ್ಳನ್ನಕ್ಕ
ಸತ್ಯಶರಣರ ಸಂಗ, ನಿತ್ಯ ಜಂಗಮ ಸೇವೆ ಕೃತ್ಯವಿರಬೇಕು
ಅಮರೇಶ್ವರಲಿಂಗವನರಿವುದಕ್ಕೆ. ಸವಸ6/ 1179/16

ಆಯ್ದಕ್ಕಿ ಮಾರಯ್ಯ ಸವಸ6/ 1170/7
ಕಾಯಕದಲ್ಲಿ ನಿರತನಾದಡೆ, ಗುರುದರ್ಶನವಾದಡೂ ಮರೆಯಬೇಕು,
ಲಿಂಗಪೂಜೆಯಾದಡೂ ಮರೆಯಬೇಕು,
ಜಂಗಮ ಮುಂದೆ ನಿಂದಿದ್ದಡೂ ಹಂಗುಹರಿಯಬೇಕು.
ಕಾಯಕವೇ ಕೈಲಾಸವಾದ ಕರಣ.
ಅಮರೇಶ್ವರಲಿಂಗವಾಯಿತ್ತಾದಡೂ ಕಾಯಕದೊಳಗು.
ಆಯ್ದಕ್ಕಿ ಮಾರಯ್ಯ

ಕಟ್ಟಿಗೆ ಕಸ ನೀರು ತಂದು,
ಸತ್ಯರ ಮನೆಯಲ್ಲಿ ಒಕ್ಕುದನೀಸಿಕೊಂಡು,
ತನ್ನ ಕೃತ್ಯ ತಪ್ಪದೆ ಒಕ್ಕುದ ಕೊಂಡು,
ಸತ್ಯನಾಗಿಪ್ಪ ಭಕ್ತನಂಗವೆ ಅದು ಅಮರೇಶ್ವರಲಿಂಗದ ಸಂಗ./1169

ಹಾಗದ ಕಾಯಕವ ಮಾಡಿ, ಹಣವಡ್ಡವ ತಾ ಎಂಬಲ್ಲಿ
ಸತ್ಯದ ಕಾಯಕ ಉಂಟೆ ?
ಭಕ್ತರಲ್ಲಿ ಕಾಯಕಕ್ಕೆ ಕಡಿಮೆಯಾಗಿ ತಾ ಎಂಬುದು
ಅಮರೇಶ್ವರಲಿಂಗಕ್ಕೆ ಚಿತ್ತಶುದ್ಧದ ಕಾಯಕ.

ಪರಿವಿಡಿ (index)
*
Previous ಆಯ್ದಕ್ಕಿ ಲಕ್ಕಮ್ಮ ಒಕ್ಕಲಿಗ ಮುದ್ದಣ್ಣ Next