Previous ಕೊಟ್ಟಣದ ಸೋಮಮ್ಮ ಗಜೇಶ ಮಸಣಯ್ಯ Next

ಕೋಲ ಶಾಂತಯ್ಯ

*
ಅಂಕಿತ: ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ
ಕಾಯಕ: ಕಟ್ಟಿಗೆ ಅಥವಾ ಕೋಲು ಹಿಡಿದು ಕಾಯಕ ಮಾಡುವವನು.

೧೯೦
ಎನ್ನಾಕಾರವೆ ನೀನಯ್ಯ ಬಸವಣ್ಣ.
ನಿ [ನ್ನಾಕಾರವೆ] ಕೋಲ ಶಾಂತ.
ಹಿಡಿದಿರ್ದ ಕರಸ್ಥಲ ಬಸವಣ್ಣನಿಂದ ಉದಯವಾದ ಕಾರಣ
ಆ ಬಸವಣ್ಣನ ಶ್ರೀಪಾದಕ್ಕೆ ಅಹೋರಾತ್ರಿಯಲ್ಲಿ
ನಮೋ ನಮೋಯೆಂಬೆ.
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.

ಪಶುಪಾಲನ ವೃತ್ತಿಯನ್ನು ಕೈಕೊಂಡಿದ್ದ ಈತನ ಹೆಸರು ವಚನಸಾಹಿತ್ಯ ಕ್ಷೇತ್ರದಲ್ಲಿ ಪ್ರಸಿದ್ಧವಾಗಿದೆ. ಸಕಲಪುರಾತನರ ಮೂರು ವಿಧದ ಕಟ್ಟುಗಳಲ್ಲಿ ಮೊದಲನೆಯದು ಈತನ ವಚನಗಳಿಂದ ಆರಂಭವಾಗುತ್ತಿರುವುದು ವಿಶೇಷವೆನಿಸಿದೆ. ಚೆನ್ನಬಸವ ಪುರಾಣ, ಭೈರವೇಶ್ವರಕಾವ್ಯದ ಕಥಾಮಣಿ ಸೂತ್ರರತ್ನಾಕರ ಮೊದಲಾದ ಕೃತಿಗಳಲ್ಲಿ ಈತನಿಗೆ ಸಂಬಂಧಿಸಿದ ಕಥೆ ನಿರೂಪಿತವಾಗಿದೆ. ಕಾಲ-೧೧೬೦. 'ಪುಣ್ಯಾರಣ್ಯ ದಹನ ಭೀಮೇಶ್ವರಲಿಂಗ' ಅಂಕಿತದಲ್ಲಿ ೧೦೩ ವಚನಗಳು ದೊರೆತಿವೆ. ಹೆಚ್ಚಾಗಿ ಎಲ್ಲವೂ ಬೆಡಗಿನ ರೂಪದಲ್ಲಿವೆ. ಭಕ್ತಿಯ ಸ್ವರೂಪ, ಸದ್ಗುರುವಿನ ರೀತಿ, ಆಷಾಢಭೂತಿಗಳ ಟೀಕೆ ಇತ್ಯಾದಿ ವಿಷಯಗಳು ಪ್ರತಿಪಾದಿತವಾಗಿದೆ. ಕೆಲವು ವಚನಗಳಲ್ಲಿ ತನ್ನ ಗೋಪಾಲ ವೃತ್ತಿಯ ಪರಿಭಾಷೆಯನ್ನು ಅರ್ಥಪೂರ್ಣವಾಗಿ ಬಳಸಿಕೊಂಡಿದ್ದಾನೆ.

೧೩೪
ಲಿಂಗಕ್ಕೆ ಮಜ್ಜನವ ಮಾಡಿದಲ್ಲಿ ತನುವಿನಾವಿಷ್ಕಾಂತದ ಕೇಡು.
ಕುಸುಮವ ಧರಿಸುವಲ್ಲಿ ಮನದ ಪ್ರಕೃತಿಯ ಕೇಡು.
ನೈವೇದ್ಯವ ಸಮರ್ಪಿಸುವಲ್ಲಿ ಸರ್ವ ಇಂದ್ರಿಯಂಗಳ ಕೇಡು.
ಕಾಯಕ್ಕೆ ಮಜ್ಜನ, ಚಿತ್ತದ ವಿಲಾಸಿತಕ್ಕೆ ಕುಸುಮ.
ಮನ ಘನದಲ್ಲಿ ನಿಂದುದಕ್ಕೆ ಅರ್ಪಿತ.
ಇಂತೀ ತ್ರಿವಿಧದ ಮರೆಯಲ್ಲಿ ಕುರುಹುದೋರಿದವನ ನಿನ್ನ ನೀನರಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.


೧೭೭
ಭಕ್ತನಾದಲ್ಲಿ ಆವ ಸೋಂಕು ಬಂದಡೂ ಭಾವಶುದ್ಧವಾಗಿರಬೇಕು.
ಭಕ್ತಂಗಲ್ಲದೆ ತಾಕು ಸೋಂಕು ಮತ್ತೊಬ್ಬರಿಗೆ ಬಾರವು.
ಬಿರಿದ ಕಟ್ಟಿದ ಬಂಟಂಗೆ ತಡಹಲ್ಲದೆ ಬರುಬರಿಗುಂಟೆ
ಮನೆದಗಹು?
ನಿಮ್ಮನರಿವಂಗೆ ಮರವೆ ಬಂದಡೆ
ನಿಮ್ಮನರಿದು ತನ್ನ ತಾನರಿಯಬೇಕೆಂಬುದ ನಿನ್ನ ನೀ ತಿಳಿ,
ಪುಣ್ಯಾರಣ್ಯದಹನ ಭೀಮೇಶ್ವರಲಿಂಗ ನಿರಂಗಸಂಗ.


*
Previous ಕೊಟ್ಟಣದ ಸೋಮಮ್ಮ ಗಜೇಶ ಮಸಣಯ್ಯ Next