Previous ಬಾಲ ಸಂಗಯ್ಯ ಬಾಲಸಂಗಣ್ಣ Next

ಬಾಲಬೊಮ್ಮಣ್ಣ

*
ಅಂಕಿತ: ವೀರಶೂರ ರಾಮೇಶ್ವರ

ಗುರುವಾಗಿ ಬಂದರಯ್ಯಾ ರೇವಣಸಿದ್ಧೇಶ್ವರದೇವರು.
ಲಿಂಗದಲ್ಲಿ ನಿಬ್ಬೆರಗಾದರಯ್ಯಾ ಅನುಮಿಷದೇವರು.
ಜಂಗಮವಾಗಿ ಸುಳಿದರಯ್ಯಾ ಪ್ರಭುದೇವರು.
ಪ್ರಸಾದವ ಕೊಂಡು ಪಥವ ತೋರಿದರಯ್ಯಾ ಬಿಬ್ಬಿಬಾಚಯ್ಯಗಳು.
ಲಿಂಗದಲ್ಲಿ ನಿರ್ವಯಲಾದರಯ್ಯಾ ನೀಲಲೋಚನೆಯಮ್ಮನವರು.
ಸೌರಾಷ್ಟ್ರಮಂಡಲದಲ್ಲಿ ಮೆರೆದರಯ್ಯಾ ಓಹಿಲದೇವರು.
ಇಂತಿವರ ಒಕ್ಕುಮಿಕ್ಕ ಬಯಲಪ್ರಸಾದ
ಕೊಂಡು ಬದುಕಿದೆನಯ್ಯಾ, ವೀರಶೂರ ರಾಮೇಶ್ವರಾ /೨೩೬[1]

'ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ'ದಲ್ಲಿ ಈತನ ಕುರಿತು ಹೀಗೆ ಹೇಳಲಾಗಿದೆ. ಸಿದ್ಧರಾಮಯ್ಯ ಸೊಲ್ಲಾಪುರದಲ್ಲಿ ದೇವಾಲಯ ಕಟ್ಟಿಸಿ ಲಿಂಗಪೂಜೆಯನ್ನು ನೆರವೇರಿಸುತ್ತಿದ್ದ. ಆಗ ಬಾಲಬೊಮ್ಮಣ್ಣ ತನಗೆ ಲಿಂಗಪ್ರತಿಷ್ಠೆ ಮಾಡಿ ಪೂಜಿಸುವುದಕ್ಕೆ ಹಣವಿಲ್ಲವೆಂದು ಚಿಂತೆಗೀಡಾದ. ಸಿದ್ಧರಾಮಯ್ಯ ಆತನ ಮನಸ್ಥಿತಿ ಕಂಡು ಹತ್ತಿರ ಕರೆದು ಹಾರೆ, ಗುದ್ದಲಿ ಕೊಟ್ಟು ಅಂಗಳದಲ್ಲಿ ಅಗೆಯಲು ಹೇಳಿದ, ನೆಲವನ್ನು ಅಗೆಯಲು ಹೊನ್ನಿನ ಕೊಪ್ಪರಿಗೆ ದೊರೆಯಿತು. ಆದರಿಂದ ಗುಡಿಯನ್ನು ಕಟ್ಟಿಸಿ, ಲಿಂಗಪ್ರತಿಷ್ಠೆಮಾಡಿ ಪೂಜಿಸುತ್ತ ಬೊಮ್ಮಣ್ಣ ಸುಖವಾಗಿದ್ದನು. ಈ ಕಥೆಯನ್ನು ಸಮರ್ಥಿಸುವಂತೆ ಈತನ ವಚನಗಳಲ್ಲಿ ಉಲ್ಲೇಖಗಳು ಬಂದಿವೆ. ಕಾಲ-೧೧೬೦. 'ವೀರಶೂರ ರಾಮೇಶ್ವರ' ಅಂಕಿತದಲ್ಲಿ ೧೧ ವಚನಗಳು ದೊರೆತಿವೆ. ಶರಣಸ್ತುತಿ, ಲಿಂಗನಿಷ್ಠೆ, ತತ್ವಬೋಧೆ ಇವುಗಳಲ್ಲಿ ವ್ಯಕ್ತವಾಗಿವೆ.

ರೇವಣಸಿದ್ಧೇಶ್ವರರು, ಅನಿಮಿಷ, ಪ್ರಭು, ಬಿಬ್ಬಿಬಾಚಯ್ಯ, ನೀಲಲೋಚನೆ, ಓಹಿಲ ಇತರ ಬಯಲ ಪ್ರಸಾದವನ್ನು ಸ್ವೀಕರಿಸಿ ಬದುಕಿದೆ ಎಂದಿರುವನು. ಹಾವಿನ ಬಿಲದಲ್ಲಿ ಕೋಲನ್ನು ಇಕ್ಕಲಾಗಿ ಕೋಲಿನ ಹಿಂದೆ ಬರುವ ಹಾವಿನಂತೆ ನಿಶ್ಚಯವಸ್ತು ಎನ್ನುವ ಉಪಮೆ ಮನೋಹರವಾಗಿದೆ.

ಕಂಡುದೆಲ್ಲವೂ ಜಗದ ಸೊಮ್ಮು.
ಕಾಣುದದೆಲ್ಲವೂ ಮಾಯೆಯ ಸೊಮ್ಮು.
ಕಂಡುದ, ಕಾಣದುದ ತಾ ನಿಧಾನಿಸಿಕೊಂಡು
ತನಗಿಲ್ಲದುದ ತಾನರಿದು, ನಷ್ಟವಪ್ಪುದ ಜಗಕ್ಕೆ ಕೊಟ್ಟು
ಬಟ್ಟಬಯಲ ತುಟ್ಟತುದಿಯ ದೃಷ್ಟವ ಕಾಬುದಕ್ಕೆ ಮುನ್ನವೆ
ದೃಕ್ಕು ದೃಶ್ಯಕ್ಕೆ ಹೊರಗಾಗಬೇಕು,
ವೀರಶೂರ ರಾಮೇಶ್ವರಲಿಂಗವ ಕೂಡಬಲ್ಲಡೆ /೨೩೩ [1]

ಸೂತ್ರದ ಸಂಚದಿಂದ ಉಭಯ ಬೊಂಬೆ ನಡೆದು
ಹೊಡೆದಾಡಿ ಕೆಡದ ಮತ್ತೆ ಸಂಚದ ನೂಲು ಅಲ್ಲಿಗೆ ಲಕ್ಷ.
ಇಷ್ಟ ಪ್ರಾಣ ಒಡಗೂಡಿದ ಮತ್ತೆ
ಕೊಟ್ಟಿಹೆ ಕೊಂಡಿಹೆನೆಂಬ ಅರಿವು ದೃಷ್ಟವ ಕಂಡದರಲ್ಲಿ ನಷ್ಟ.
ಇಂತೀ ಭೇದಂಗಳಲ್ಲಿ ವೇಧಿಸುವನ್ನಕ್ಕ
ವೀರಶೂರ ರಾಮೇಶ್ವರಲಿಂಗವ
ಉಜ್ಜುತ್ತ ಒರೆಸುತ್ತ ತೊಳೆವುತ್ತ ಹಿಳಿವುತ್ತ
ಪೂಜಿಸಿ ಆಳುತ್ತ ಇರಬೇಕು. /೨೩೯ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಬಾಲ ಸಂಗಯ್ಯ ಬಾಲಸಂಗಣ್ಣ Next