Previous ಕಾಡಸಿದ್ಧೇಶ್ವರ ಕನ್ನಡಿ ಕಾಯಕದ ರೇವಮ್ಮ Next

ಕನ್ನಡಿ ಕಾಯಕದ ಅಮ್ಮಿದೇವಯ್ಯ

*
ಅಂಕಿತ: ಚನ್ನಬಸವಣ್ಣಪ್ರಿಯ ಕಮಳೇಶ್ವರಲಿಂಗ
ಕಾಯಕ: ಕ್ಷೌರಿಕ (ಕನ್ನಡಿ ಕಾಯಕ)

೧೪
ಎನ್ನ ಕನ್ನಡಿ ಒಳ ಹೊರಗಿಲ್ಲ.
ಎನ್ನ ಘಳಿಹ ಮುಟ್ಟನೊಳಕೊಂಡ
ಚಿರ ಹಡಪಕ್ಕೆ ಅಳವಲ್ಲ.
ಕತ್ತಿಯ ಬಸವಣ್ಣ ಕೊಟ್ಟ.
ಕತ್ತರಿಯ ಚೆನ್ನಬಸವಣ್ಣ ಕೊಟ್ಟ.
ಕಿತ್ತುಹಾಕುವ ಚಿಮ್ಮಟಿಕೆಯ ಪ್ರಭುರಾಯ ಕೂಟ್ಟ.
ಮಿಕ್ಕಾದ ಎನ್ನಯ ಮುಟ್ಟ ಸತ್ಯಶರಣರು ಕೊಟ್ಟರು.
ದೃಷ್ಟವ ತೋರಿ ಅಡಗುವ ಮುಕುರವ ಕೊಟ್ಟವರ ಹೇಳುವೆನು
ದೃಷ್ಟ ಪ್ರಸಿದ್ಧ ಆಪ್ರತಿಮ ಪ್ರಸನ್ನ
ಚೆನ್ನಬಸವಣ್ಣ ಪ್ರಿಯ ಕಮಳೇಶ್ವರಲಿಂಗವು
ಎನಗೆ ದೃಷ್ಟವ ಕೊಟ್ಟು ತಾ ಬೆಳಗಿನೊಳಗಾದ!

೧೧೬೦ರಲ್ಲಿ ಇದ್ದ ಈತನ ಕಾಯಕ ಕ್ಷೌರಿಕತನ. 'ಕಮಳೇಶ್ವರ ಲಿಂಗ' ಅಂಕಿತದಲ್ಲಿ ೧೦ ವಚನಗಳು ಉಪಲಬ್ಧವಾಗಿವೆ. ಹಡಪ, ಕನ್ನಡಿ, ಕತ್ತಿ. ಕತ್ತರಿ, ಚಿಮ್ಮುಟಿ, ಹಣಿಗೆ ಮುಂತಾದ ವೃತ್ತಿ ಸಂಬಂಧಿ ಪದಗಳ ಬಳೆಕೆಯೊಂದಿಗೆ ಅನುಭಾವವನ್ನು ಪ್ರಕಟಿಸುವ ರೀತಿ ಆಪ್ತವೆನಿಸಿದೆ. 'ವ್ಯಾಧಿಗೆ ನಾನರಸು' ಎನ್ನುವ ಮಾತು ಈತ ವೈದ್ಯ ವಿಷಯದಲ್ಲಿಯೂ ಬಲ್ಲವನಾಗಿದ್ದನೆಂಬುದನ್ನು ಸೂಚಿಸುತ್ತದೆ. ೧೮ ಕಾಯಕಗಳ ಉಲ್ಲೇಖ ಮಾಡುವುದು, 'ಆವ ಜಾತಿ ಗೋತ್ರದಲ್ಲಿ ಬಂದಡೂ ತಮ್ಮ ತಮ್ಮ ಕಾಯಕಕ್ಕೆ, ಭಕ್ತಿಗೆ ಸೂತಕವಿಲ್ಲದಿರಬೇಕು' ಎಂದು ಹೇಳುವುದು. ಈತನ ಸಮತಾಭಾವದ ನಿಲುವಿಗೆ ನಿದರ್ಶನವಾಗಿದೆ. ಜಾನಪದ ವೈದ್ಯವನ್ನು ತನ್ನ ವಚನಗಳಲ್ಲಿ ಹೇಳಿರುವನು. ಕಾಯಕದ ಹಿರಿಮೆಯನ್ನು ಪ್ರಸ್ತಾಪಿಸಿರುವನು.

೧೩
ಆವಾವ ಜಾತಿ ಗೋತ್ರದಲ್ಲಿ ಬಂದಡೂ
ತಮ್ಮ ತಮ್ಮ ಕಾಯಕಕ್ಕೆ, ಭಕ್ತಿಗೆ ಸೂತಕವಿಲ್ಲದಿರಬೇಕು.
ಆವಾವ ವ್ರತವ ಹಿಡಿದಡೂ, ಇದಿರ ದಾಕ್ಷಿಣ್ಯವ ಮರೆದು
ತನ್ನಯ ತ್ರಿಕರಣ ಶುದ್ಧವಾಗಿ ನಡೆಯಬೇಕು.
ಪರಪುರುಷಾರ್ಥಕ್ಕೆ ಅರಿಯಿಸಿಕೊಂಬಡೆ ಮೂಗ
ಅರುಹಿರಿಯರು ಹೇಳಿದರೆಂದು ಕಲಸಬಹುದೆ ಅಮಂಗಲವ.
ಇಂತೀ ಕ್ರೀಯಲ್ಲಿ ಭಾವಶುದ್ಧವಾಗಿ
ಭಾವದಲ್ಲಿ ದಿವ್ಯಜ್ಞಾನಪರಿಪೂರ್ಣವಾಗಿಪ್ಪ ಗುರುಚರಭಕ್ತಂಗೆ
ಚೆನ್ನಬಸವಣ್ಣ ಸಾಕ್ಷಿಯಾಗಿ
ಕಮಳೇಶ್ವರಲಿಂಗವು ತಾನೆಯೆಂದು ಭಾವಿಸುವನು.


*
Previous ಕಾಡಸಿದ್ಧೇಶ್ವರ ಕನ್ನಡಿ ಕಾಯಕದ ರೇವಮ್ಮ Next