ಕರುಳ ಕೇತಯ್ಯ

*
ಅಂಕಿತ: ಮನಕ್ಕೆ ಮನೋಹರ ಶಂಕೇಶ್ವರಲಿಂಗ

೨೭
ಈ ವ್ರತ ತಪ್ಪಿತ್ತೆಂದು ಘಟವ ಬಿಟ್ಟಲ್ಲಿ
ಮೆಚ್ಚುವ ದೈವ ಬೇಡ.
ಇಂತೀ ಕ್ರೀ ಓಸರಿಸಿದಲ್ಲಿ ಬಟ್ಟಡೆ ಪ್ರಾಣವ
ಮೆಚ್ಚಿ ಕೈಲಾಸಕ್ಕೆ ಕರೆವ ದೈವವುಂಟೆ?
ಇಂತೀ ಉಭಯ ಭ್ರಷ್ಟವಾದಲ್ಲಿ ಸಿಕ್ಕಿತ್ತು ವ್ರತ.
ಮನಕ್ಕೆ ಮನೋಹರ ಶಂಕೇಶ್ವರ ಲಿಂಗ ತಪ್ಪಿದಡೂ
ಹೊರಗೆಂಬೆನು.

ವ್ರತಾಚಾರನಿಷ್ಠ ಶರಣನಾದ ಈತನ ಜೀವನೇತಿಹಾಸದ ವಿವರಗಳು ದೊರಕುವುದಿಲ್ಲ. ಕಾಲ - ೧೧೬೦. ಅ೦ಕಿತ - ಶಂಖೇಶ್ವರ. ಎ೦ಟು ವಚನಗಳು ದೊರೆತಿವೆ. ಅವುಗಳಲ್ಲಿ 'ಭವಿಯ ಸೋಂಕಲಾಗದು, ಅನಪಿ೯ತವ ಸ್ವೀಕರಿಸಲಾಗದು' ಎಂಬ ವ್ರತನಿಷ್ಠೆ, 'ವ್ರತ ತಪ್ಪಿತ್ತೆಂದು ಘಟವ ಬಿಟ್ಟಲ್ಲಿ ಮೆಚ್ಚುವ ದೈವ ಬೇಡ' ಎ೦ಬ ಡಾಂಭಿಕ ವ್ರತಾಚಾರಿಗಳ ನಿಂದೆ ವಿಶೇಷವಾಗಿ ತೋರುತ್ತದೆ.

೨೯
ಜಲ ನೆಲ ಅನಲ ಅನಿಲ ಮಿಕ್ಕಾದ
ದೃಷ್ಟಂಗಳೆಲ್ಲವನೂ ನಿರೀಕ್ಷಿಸಿ ಸಾಧಿಸಿಕೊಂಡು
ಶ್ರುತ ದೃಷ್ಟ ಅನುಮಾನಂಗಳಲ್ಲಿ ತಿಳಿದು,
ಹಿಂದಣ ಮುಂದಣ ಸಂದೇಹವ ಹರಿದು
ಮುಟ್ಟೂದು ಘಟಕ್ರಿಯಾಭೇದ
ಮನಕ್ಕೆ ಮನೋಹರ ಸಂಕೇಶ್ವರ ಲಿಂಗವನರಿವುದಕ್ಕೆ.

೩೩
ದ್ರವ್ಯಶೀಲ ಧನಶೀಲ ತನುಶೀಲ ಆತ್ಮಶೀಲ
ಇಂತಿವರೊಳಗಾದ ನಾನಾ ಶೀಲಂಗಳೆಲ್ಲವೂ
ಓಸರಿಸಿದಲ್ಲಿ ಭಾಷೆ ಹೋಯಿತ್ತು.
ಕಳ್ಳನ ತಾಯ ಕಣಿಯ ಕೇಳ ಹೋದಂತೆ.
ಅಲ್ಲಿಗಲ್ಲಿಗೆ ಹೋಗದೆ, ಎಲ್ಲರ ಕೂಡಿ
ಎನಗೊಂದರಲ್ಲಿ ಇರೆಂದು ಕೇಳುವ ಆತ್ಮಗಳ್ಳನ ಶೀಲ
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವ
ಮುಟ್ಟದೆ ಹೋಯಿತ್ತು.


೩೨
ದೃಷ್ಟಿ ಕಾಮ್ಯಾರ್ಥದಲ್ಲಿ ನೆಟ್ಟು ನೋಡಿ,
ಒಡೆಯರು ಭಕ್ತರ ವಧುಗಳಲ್ಲಿ
ಮತ್ತಾ ದೃಷ್ಟಿಯ ಮುಟ್ಟಲೇತಕ್ಕೆ?
ಮತ್ತೆ ಇತ್ಯಾದಿಗಳ ಬಿಟ್ಟು ಹೆಣ್ಣವ್ರತ ಕಟ್ಟೆಂದು ಮಾಡಬಹುದೆ?
ಮತ್ತದ ಕಟ್ಟಿಕೊಂಡು ಮಿಟ್ಟಿಯ ಭಂಡರಂತೆ
ಕುಟ್ಟಿಯಾಡಬಹುದೆ?
ಇಂತೀ ಬಾಹ್ಯ ದೃಷ್ಟಿಗಳ್ಳರ, ಆತ್ಮಚಿತ್ತಗಳ್ಳರ
ವ್ರತಸ್ಥರೆಂದು ಎನಲಾಗದು.
ಮನಕ್ಕೆ ಮನೋಹರ ಶಂಕೇಶ್ವರ ಲಿಂಗವು
ಅವರುವ ಮುಟ್ಟದಿಹನಾಗಿ


*
Previousಕರಸ್ಥಲದ ಮಲ್ಲಿಕಾರ್ಜುನ ದೇವ/ಕರಸ್ಥಲದ ಮಲ್ಲಿಕಾರ್ಜುನೊಡೆಯಕಲಕೇತಯ್ಯNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.