Previous ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ Next

ಉಳಿಯುಮೇಶ್ವರ ಚಿಕ್ಕಣ್ಣ

*
ಅಂಕಿತ: ಉಳಿಯುಮೇಶ್ವರ

ವಾರಣಾಸಿ, ಅವಿಮುಕ್ತಿ ಇಲ್ಲಿಯೇ ಇದ್ದಾನೆ.
ಹಿಮದ ಕೇತಾರ, ವಿರೂಪಾಕ್ಷ ಇಲ್ಲಿಯೇ ಇದ್ದಾನೆ.
ಗೋಕರ್ಣ, ಸೇತುರಾಮೇಶ್ವರ ಇಲ್ಲಿಯೇ ಇದ್ದಾನೆ.
ಶ್ರೀಶೈಲ ಮಲ್ಲಿನಾಥ ಇಲ್ಲಿಯೇ ಇದ್ದಾನೆ.
ಸಕಲಲೋಕಪುಣ್ಯಕ್ಷೇತ್ರ ಇಲ್ಲಿಯೇ ಇದ್ದಾನೆ,
ಸಕಳಲಿಂಗ ಉಳಿಯುಮೇಶ್ವರ ತನ್ನಲ್ಲಿ ಇದ್ದಾನೆ.

ಈತ ರಾಯಚೂರ ಜಿಲ್ಲೆಯ ಸಿಂಧನೂರ ತಾಲೂಕಿನ ದೇವರಗುಡಿ ಗ್ರಾಮಕ್ಕೆ ಸೇರಿದವನು. ಇಲ್ಲಿನ ದೇವರು ಹುಳಿಯಮೇಶ್ವರ ಅ೦ದರೆ ಇಂದಿನ 'ಮಲ್ಲಿಕಾರ್ಜುನ' ಈತನ ಆಧಿದೈವ. ಕಲ್ಲೆದೇವರಪುರ ಶಾಸನ(೧೨೭೯)ದಲ್ಲಿ ಬರುವ 'ಚಿಕ್ಕ' ಎಂಬುದು ಈ ಚಿಕ್ಕಯ್ಯನ ಹೆಸರೇ ಆಗಿರಬೇಕು. ದೇವರಗುಡಿ ಗ್ರಾಮದ ಶಾಸನಗಳಿಂದ ಈತನು ಮೂಲತ: ಕಾಳಾಮುಖ ಶೈವ ಅಚಾರ್ಯನೆಂದು ತಿಳಿದುಬರುತ್ತದೆ. 'ಉಳಿಯುಮೇಶ್ವರ' ಆಂಕಿತದಲ್ಲಿ ಈಗ ಈತನ ೧೨ ವಚನಗಳು ದೊರೆತಿವೆ. ಸೆಂಸಾರಹೇಯ, ಶರಣರ ಸ್ತುತಿ, ನಿರ್ವಾಣದ ಬಯಕೆ, ಭೃತ್ಯಭಾವ, ಉದಾರ ದೃಷ್ಟಿ - ಇವುಗಳಲ್ಲಿ ಕಂಡುಬರುವ ಮುಖ್ಯ ವಿಷಯಗಳಾಗಿವೆ.

ಬಸವಣ್ಣ, ಚೆನ್ನಬಸವಣ್ಣ, ಸಿದ್ಧರಾಮ, ಮರುಳ ಶಂಕರದೇವ, ಪ್ರಭುದೇವ ಇವರನ್ನು ಒಂದು ವಚನದಲ್ಲಿ ಸ್ಮರಿಸಿರುವನು. "ಶೈವನೇಮಸ್ತರ ಕೈಯ ಉಪದೇಶವಾದೊಡೇನಯ್ಯ ಅಲ್ಲಿ ಏನು ವಿನಯವಿಲ್ಲ, ಪಾರಂಪರ್ಯದಲ್ಲಿ ಬಂದಿತ್ತಾಗಿ ನದಿಯ ಮೂಲವನೂ ಗುರುವಿನ ಮೂಲವನೂ ಅರಸುವರೆ?"ಎಂಬ ಇವನ ಮಾತಿನಲ್ಲಿನ ಉದಾರಗುಣ ಆ ಕಾಲಕ್ಕೆ ವಿಶೇಷವೆನ್ನಿಸುತ್ತದೆ.

ಎನ್ನಂತರಂಗದ ಜ್ಯೋತಿಯೆ ಬಸವಣ್ಣನಯ್ಯಾ,
ಎನ್ನ ಬಹಿರಂಗದ ಜ್ಯೋತಿಯೆ ಚೆನ್ನಬಸವಣ್ಣನಯ್ಯಾ,
ಎನ್ನ ಸರ್ವಾಂಗದ ಜ್ಯೋತಿಯೆ ಪ್ರಭುದೇವನಯ್ಯಾ,
ಇಂತಿವರ ಶ್ರೀಪಾದದಲ್ಲಿ ಉರಿ ಕರ್ಪುರ ಸಂಯೋಗದಂತೆ
ಬೆರೆಸಿದೆನಯ್ಯಾ ಉಳಿಯುಮೇಶ್ವರಾ.

ಪರಿವಿಡಿ (index)
*
Previous ಉರಿಲಿಂಗಪೆದ್ದಿಗಳ ಪುಣ್ಯಸ್ತ್ರೀ ಕಾಳವ್ವೆ ಎಚ್ಚರಿಕೆ ಕಾಯಕದ ಮುಕ್ತನಾಥಯ್ಯ Next