*
ಅಂಕಿತ: |
ನಿಜಗುರು ಸ್ವತಂತ್ರ ಸಿದ್ಧಲಿಂಗೇಶ್ವರ |
೯೦೧
ಹಾವಾಡಿಗ ಹಾವನಾಡಿಸುವಲ್ಲಿ, ತನ್ನ ಕಾಯ್ದುಕೊಂಡು,
ಹಾವನಾಡಿಸುವಂತೆ,
ಆವ ಮಾತನಾಡಿದಡೂ, ತನ್ನ ಕಾಯ್ದು ಆಡಬೇಕು.
ಅದೆಂತೆಂದಡೆ,
ತನ್ನ ವಚನವೆ ತನಗೆ ಹಗೆಯಹುದಾಗಿ.
ಅನ್ನಿಗರಿಂದ ಬಂದಿತ್ತೆನ್ನಬೇಡ.
ಅಳಿವುದು ಉಳಿವುದು ತನ್ನ ವಚನದಲ್ಲಿಯೆ ಅದೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರಾ,
ಹಗೆಯು ಕೆಳೆಯು ತನ್ನ ವಚನವೇ, ಬೇರಿಲ್ಲ.
ತೋಂಟದ ಸಿದ್ಧಲಿಂಗರ ಶಿಷ್ಯ ಪರಂಪರೆಗೆ ಸೇರಿದ ಮತ್ತೊಬ್ಬ ವಚನಕಾರ. ಕಾಲ ೧೬ನೇಯ ಶತಮಾತದ ಉತ್ತರಾರ್ಧ. ಸ್ಥಳ -ಮಂಡ್ಯ ಜಿಲ್ಲೆ ಕೃಷ್ಣರಾಜಪೇಟೆ ತಾಲೂಕಿನ ಕಾಪನಹಳ್ಳಿ. ಅಚರ ಸಮೀಪದ 'ಗಜರಾಜಗಿರಿ' ಈತನ ಶಿವಯೋಗ ಸಾಧನೆಯ ಸ್ಥಾನ. ಅಲ್ಲಿಯೇ ಐಕ್ಯ. ಸದ್ಯ ಈತನ ೪೩೦ ವಚನಗಳು ದೊರೆತಿವೆ. 'ನಿಜಗುರುಸ್ವತಂತ್ರಸಿದ್ಧಲಿಂಗೇಶ್ವರ' ಎಂಬುದು ಅಂಕಿತ. ಜಂಗಮರಗಳೆ, ಮುಕ್ತ್ಯಾಂಗನಾ ಕಂಠಮಾಲೆ ಎಂಬ ಕೃತಿಗಳನ್ನು ರಚಿಸಿದ್ದಾನೆ. ಆರು ಸ್ಥಲಗಳಲ್ಲಿ ಹಂಚಿಕೊಂಡಿರುವ ಈತನ ವಚನಗಳಲ್ಲಿ ಷಟ್-ಸ್ಥಲ ತತ್ವ ನಿರೂಪಣೆ ಮುಖ್ಯ ವಸ್ತುವಾಗಿದೆ. ಸಾಂಪ್ರದಾಯಿಕ ರೀತಿಯಲ್ಲಿ ಸಕ್ರಮವಾಗಿ ತತ್ವ ಪ್ರತಿಪಾದನೆ ಮಾಡಿದ್ದಾನೆ.
೯೫೨
ಹಲವು ದೇವರುಗಳ ಭಜಿಸಿ ಹೊಲಬುದಪ್ಪಿ ಹೋದರೆಲ್ಲ.
ದೇವರುದೇವರೆಂದರೇನು? ಒಮ್ಮರ ದೇವರೇ?
ವಿಶ್ವಾಧಿಪತಿ ಶಿವನೊಬ್ಬನೆ ದೇವನಲ್ಲದೆ,
ಉಳಿದವರೆಲ್ಲ ದೇವರೆ?
ಬ್ರಹ್ಮ ದೇವರೆಂಬಿರೇ? ಬ್ರಹ್ಮನ ಶಿರವ ಹರ ಚಿವುಟಿದ.
ವಿಷ್ಣು ದೇವರೆಂಬಿರೇ? ಹತ್ತವತಾರದಲ್ಲಿ ಹರನಿಂದ ಹತಿಸಿಕೊಂಡ.
ಇಂದ್ರ ದೇವರೆಂಬಿರೇ? ಇಂದ್ರನ ಮೈಯೆಲ್ಲಾ ಭಗವಾಗಿ
ನಿಂದೆಗೊಳಗಾದ.
ಚಂದ್ರ ದೇವರೆಂಬಿರೇ? ಕುಂದ ಹೆಚ್ಚ ತಾಳಿ ಕ್ಷಣಿಕನಾದ.
ಸೂರ್ಯ ದೇವರೆಂಬಿರೇ? ಸೂರ್ಯ ಕುಷ್ಠರೋಗದಿಂದ ಭ್ರಷ್ಟಾದ.
ಇನ್ನುಳಿದ ದೇವತೆಗಳು ಭಂಗಬಟ್ಟುದಕ್ಕೆ ಕಡೆಯಿಲ್ಲ.
'ಸರ್ವದೇವ ಪಿತಾ ಶಂಭುಃ ಭರ್ಗೋಃ ದೇವಸ್ಯ ಧೀಮಹಿ'
ಎಂದುದಾಗಿ,
ಸರ್ವದೇವರುಗಳ ಉತ್ಪತ್ಯ ಸ್ಥಿತಿ ಲಯಂಗಳ ಮಾಡುವ ಕರ್ತ
ಶಿವನೊಬ್ಬನೇ ದೇವನೆಂದು ನುಡಿದೆನು ನಡೆದೆನು,
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನಲ್ಲದೆ ಇಲ್ಲವೆಂದು.
ಮಹಾದೇವಿಯಕ್ಕ ಬಸವಣ್ಣ ಮೊದಲಾದ ವಚನಕಾರರಿಂದ ಪ್ರಭಾವಿತನಾಗಿದ್ದಾನೆ. ಬಸವಣ್ಣ, ಮಡಿವಾಳ ಮಾಚಿದೇವ, ಚನ್ನ ಬಸವಣ್ಣ, ಪ್ರಭುದೇವ, ಅಜಗಣ್ಣ ಇವರೆಲ್ಲ ತನಗೆ ಷಡುಸ್ಥಲವನ್ನಿತ್ತರೆಂದು ಹೇಳಿರುವನು. ನಿರೂಪಣೆಗೆ ಒಳ್ಳೆಯ ದೃಷ್ಟಾಂತಗಳನ್ನು ಬಳಸಿಕೊಳ್ಳುವುದರಿಂದ ವಚನಗಳು ಕಾವ್ಯಕಮನೀಯತೆಯಿಂದ ಕಂಗೊಳಿಸುತ್ತವೆ.
*