Previous ಪರಂಜ್ಯೋತಿ ಪ್ರಸಾದಿ ಭೋಗಣ್ಣ Next

ಪುರದ ನಾಗಣ್ಣ

*
ಅಂಕಿತ: ಅಮರಗುಂಡದ ಮಲ್ಲಿಕಾರ್ಜುನಾ

೧೦
ಶರಣ ಲಿಂಗಸಮರಸವಾಗಿ ಆಚರಿಸುವ.
ಶರಣನ ಲಿಂಗ ಭಿನ್ನವಾಗಿ ಓಸರಿಸಿಹೋದರೆ
ನೋಡಿ, ಅರಸಿ ಸಿಕ್ಕಿದ ಸಮಯದಲ್ಲಿ
ಆ ಲಿಂಗವ ಪರೀಕ್ಷಿಸಿ ನೋಡುವುದು.
ಆರು ಸ್ಥಾನಂಗಳಲ್ಲಿ ಬಿನ್ನವಿಲ್ಲದಿರ್ದಡೆ ಧರಿಸಿಕೊಂಬುದು.
ಸರ್ವಮಾಹೇಶ್ವರರು ನೋಡಿ ಶಂಕೆಯುಳ್ಳಡೆ ಬಿಡುವುದು.
ಅದೆಂತೆಂದಡೆ :
ಶರಣನ ಸಂಕಲ್ಪ ಸನ್ಮತ ತನ್ನದೆಂಬುದೆ ದಿಟವೆಂದು ತಾ ನಿಶ್ಚೈಸಿ
ತೆತ್ತಿಗರಾದ ಸರ್ವಮಾಹೇಶ್ವರರು
ಮಂತ್ರಬೋಧನೆಯ ಕರ್ಣದಲ್ಲಿ ಬೋಧಿಸಬೇಕಲ್ಲದೆ
ಆ ಲಿಂಗಧ್ಯಾನಾರೂಢನಪ್ಪಾತಂಗೆ ಧೂಪ ದೀಪ ಅಂಬರಗಳೆಂಬ
ಬಂಧನವೈಕ್ಯವಂ ಮಾಡಲಾಗದು.
ಮಾಡಿದಡೆ ಜ್ಞಾನಿಗಳೊಪ್ಪರು.
ಅದು ಕಾರಣವಾಗಿ ಶಿವಧ್ಯಾನ ನಿಶ್ಚಿಂತವ ಮಾಡಿದ ಕಾರಣ
ಅವರ ತೆತ್ತಿಗರಲ್ಲವೆಂಬೆ, ದಿಟ ಕಾಣಾ ನೀ ಸಾಕ್ಷಿ
ನಿಮ್ಮಾಣೆನಿಮ್ಮಅರ್ಧಾಂಗಿಯಾಣೆ ಅಮರಗುಂಡದ ಮಲ್ಲಿಕಾರ್ಜುನಾ

ಈತ ಅಮರಗುಂಡದ ಮಲ್ಲಿಕಾರ್ಜುನನ ಮಗ. ಸ್ಥಳ ಅಮರಗುಂಡ, ಅಂದರೆ ತುಮಕೂರು ಜಿಲ್ಲೆಯ ಗುಬ್ಬಿ. ಕಾಲ ೧೧೬೦ 'ಅಮರಗುಂಡದ ಮಲ್ಲಿಕಾರ್ಜುನ' ಅಂಕಿತದಲ್ಲಿ ೯ ವಚನಗಳು ದೊರೆತಿವೆ. ಬಸವಾದಿ ಶರಣರ ಸ್ತುತಿ, ನಿಜಾನಂದ ಭಕ್ತಿಯ ಬಯಕೆ, ಗುರುಪಾದೋದಕದ ಮಹಿಮೆ, ಶರಣನ ಸ್ವರೂಪ, ಲಿಂಗನಿಷ್ಠೆ ಮೊದಲಾದ ವಿಷಯಗಳ ವಿವರ ಅವುಗಳಲ್ಲಿದೆ. ಕೆಲವು ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ.


ಕಾಯವೆಂಬ ಪಟ್ಟಣಕ್ಕೆ ಸತ್ಯವೆಂಬ ಕೋಟೆಯನಿಕ್ಕಿ
ಧರ್ಮಾರ್ಥಿಕಾಮಮೋಕ್ಷಂಗಳೆಂಬುಕ್ಕಡದವರೆಚ್ಚತ್ತಿರಿ
ಭಯ ಘನ ಭಯ ಘನ.
ಅಜ್ಞಾನವೆಂಬ ತೀವ್ರ ಕತ್ತಲೆ ಕರ ಘನಕರ ಘನ.
ಒಂಬತ್ತು ಬಾಗಿಲ ಜತನವ ಮಾಡಿ
ಜ್ಞಾನಜ್ಯೋತಿಯ ಪ್ರಬಲವ ಮಾಡಿ ಪ್ರಬಲವ ಮಾಡಿ
ಐವರು ಕಳ್ಳರು ಕನ್ನವ ಕೊರೆವುತ್ತೈದಾರೆ.
ಸುಯಿಧಾನವಾಗಿರಿ ಜೀವಧನವ ಜತನವ ಮಾಡಿ ಜತನವ ಮಾಡಿ
ಬಳಿಕಿಲ್ಲ ಬಳಿಕಿಲ್ಲ.
ಆ ಪಟ್ಟಣದ ಮೂಲಸ್ಥಾನದ ಶಿಖರದ ಮೇಲಣ
ಬಾಗಿಲ ತೆರದು ನಡೆವುದೆ ಸುಪಥ, ಸ್ವಯಂಭುನಾಥನಲ್ಲಿರೆ.
ಇದನರಿತು ಮಹಾಮಹಿಮ ಅಮರಗುಂಡದ ಮಲ್ಲಿಕಾರ್ಜುನದೇವರಲ್ಲಿ
ಎಚ್ಚರಿಕೆಗುಂದದಿರಿ, ಎಚ್ಚರಿಕೆಗುಂದನಿರಿ.

ಪಾದೋದಕದ ಮಹಿಮೆಯನ್ನು ಹೇಳಿರುವನು. ನೆನೆವ ಮನಕ್ಕೆ ಮಣ್ಣನ್ನೂ, ನೋಡುವ ಕಣ್ಣಿಗೆ ಹೆಣ್ಣನ್ನೂ, ಪೂಜಿಸುವ ಕೈಗೆ ಹೊನ್ನನ್ನೂ ಕೊಟ್ಟು ಮರಹನ್ನು ಅನುಗ್ರಹಿಸಿದ ಪರಮಾತ್ಮನ ಲೀಲೆಯನ್ನು ನೋಡಿ ಬೆರಗಾಗಿರುವನು. ಬೇಸಾಯದ ಕ್ರಿಯೆಯನ್ನು ಹೇಳುತ್ತಾ ಆಧ್ಯಾತ್ಮವನ್ನು ಅದಕ್ಕೆ ಅನ್ವಯಿಸುವನು. ಭಕ್ತನ ಲಿಂಗ ಭಿನ್ನವಾಗಲು ಆ ಲಿಂಗದೊಡನೆ ಪ್ರಾಣವನ್ನು ಬಿಡಬೇಕೆನ್ನುವನು


ನೆನೆವ ಮನಕ್ಕೆ ಮಣ್ಣನೆ ತೋರಿದೆ.
ನೋಡುವ ಕಣ್ಣಿಗೆ ಹೆಣ್ಣನೆ ತೋರಿದೆ.
ಪೂಜಿಸುವ ಕೈಗೆ ಹೊನ್ನನೆ ತೋರಿದೆ.
ಇಂತೀ ತ್ರಿವಿಧವನೆ ತೋರಿ ಕೊಟ್ಟು
ಮರಹನಿಕ್ಕಿದೆಯಯ್ಯಾ.
ಅಮರಗುಂಡದ ಮಲ್ಲಿಕಾರ್ಜುನಯ್ಯಾ
ನೀ ಮಾಡಿದ ಬಿನ್ನಾಣಕ್ಕೆ ನಾನು ಬೆರಗಾದೆನು.


*
Previous ಪರಂಜ್ಯೋತಿ ಪ್ರಸಾದಿ ಭೋಗಣ್ಣ Next