Previous ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ ನಿ:ಕಳಂಕ ಚೆನ್ನ ಸೋಮೇಶ್ವರ Next

ಸಿದ್ಧರಾಮ ಶಿವಯೋಗಿ

*
ಅಂಕಿತ: ವಚನ ಮತ್ತು ಸ್ವರವಚನಗಳಲ್ಲಿ 'ಕಪಿಲಸಿದ್ಧ ಮಲ್ಲಿಕಾರ್ಜುನ' ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ 'ಯೋಗಿನಾಥ'
ಕಾಯಕ: ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕ, ಅನುಭವ ಮಂಟಪದ ಗೋಷ್ಠಿಯಲ್ಲಿ ಪಾಲ್ಗೊಂಡು, ಮಹಾಶಿವಯೋಗಿಯಾದ

ಸಿದ್ಧರಾಮೇಶ್ವರರು

ಸೊನ್ನಲಾಪುರದಲ್ಲಿ ಸುಗ್ಗವ್ವೆ ಮುದ್ದೆಗೌಡರ ಪುಣ್ಯಗರ್ಭದಲ್ಲಿ ಮುದ್ದಿನ ಮಗನಾಗಿ ಸಿದ್ಧರಾಮೇಶ್ವರರು ಜನಿಸುತ್ತಾರೆ. ಚಿಕ್ಕಂದಿನಿಂದಲೂ ಆಟಪಾಟಗಳಲ್ಲಿ ತೊಡಗದೆ ಪೂಜೆ-ಧ್ಯಾನಗಳಲ್ಲೇ ಮಗ್ನನಾಗಿರುತ್ತಿದ್ದ ಸಿದ್ಧರಾಮ, ಯಾರೊಡನೆ ಮಾತನಾಡದೆ ತಾನಾಗಿ ಬಂದು ತಿನ್ನದೆ, ಉಣ್ಣದೆ ತನ್ನಲ್ಲಿ ತಾನು ಮೌನಿಯಾಗಿರುತ್ತಿದ್ದ. ತಂದೆ-ತಾಯಿಗೆ ಚಿಂತೆಯಾಗುತ್ತದೆ. ದನಕಾಯಲು ಹೊಲಕ್ಕೆ ಕಳಿಸಿದರೆ ಹಸಿವೆಯಾಗಿ ಉಣ್ಣಬಹುದು ಎಂದು ತಾಯಿ ಬುತ್ತಿ ಕಟ್ಟಿಕೊಟ್ಟರೆ, ಕಟ್ಟಿದ ಬುತ್ತಿಯನ್ನು ಸಂಗಡಿಗರಿಗೆ ತಿನ್ನಿಸಿ ತಾನು ಗಿಡದ ಕೆಳಗೆ ಕುಳಿತು ಧ್ಯಾನಸ್ಥನಾಗುತ್ತಿದ್ದ.

ಒಂದು ದಿನ ಸಿದ್ಧರಾಮ ತಂದೆ ಬಿತ್ತಿದ ನವಣೆ ಹೊಲದಲ್ಲಿ ಪ್ರಕೃತಿ ವೀಕ್ಷಿಸುತ್ತ ನಿಂತಿದ್ದ. ಬಾಲಕ ಸಿದ್ದರಾಮನ ಭಕ್ತಿ ಪರೀಕ್ಷಿಸಲು ಪರಮಾತ್ಮ ಜಂಗಮ ವೇಷದಲ್ಲಿ ಕಾಣಿಸಿಕೊಳ್ಳುತ್ತಾನೆ. ವಿಶಾಲವಾದ ಹಣೆಯ ಮೇಲೆ ವಿಭೂತಿ, ಕೊರಳಲ್ಲಿ ರುದ್ರಾಕ್ಷಿ, ಕೈಯಲ್ಲಿ ತಂಬೂರಿ ಅವರನ್ನು ಕಾಣುತ್ತಲೆ ಹೋಗಿ ಕಾಲಿಗೆರಗುತ್ತಾನೆ. ಅವರಿಗೆ ಕಂಬಳಿ ಹಾಸಿ ಕೂಡಿಸುತ್ತಾನೆ. ನವಣೆಯ ಸೀತನಿಯನ್ನು ಕೊಡುತ್ತಾನೆ. ಆ ಜಂಗಮ ಅಷ್ಟಕ್ಕೆ ತೃಪ್ತಿಯಾಗದೆ ಮನೆಗೆ ಹೋಗಿ ಮಜ್ಜಿಗೆ ಅಂಬಲಿ ತರುವೆಯಾ ಎಂದು ಕೇಳುತ್ತಾನೆ. ಸಂತೋಷದಿಂದ ಓ ತರುತ್ತೇನೆ. ನಾನು ತರುವವರೆಗೆ ಇರುವನೋ ಇಲ್ಲವೋ ಎಂದು ಅಳುಕುತ್ತಾನೆ. ತಮ್ಮ ಹೆಸರೇನು? ತಾವು ಎಲ್ಲಿ ಇರುವುದು ಎಂದು ಕೇಳುತ್ತಾನೆ. ಜಂಗಮ ಹೇಳುತ್ತಾನೆ. ನನ್ನ ಹೆಸರು ಮಲ್ಲಯ್ಯ. ನಾವು ಶ್ರೀಶೈಲದಲ್ಲಿರುವೆವು. ಆಗ ಸಿದ್ಧರಾಮ ನಾನು ಅಲ್ಲಿಗೆ ಬರಲೆ? ಎಂದಾಗ ಮೊದಲು ಅಂಬಲಿ ಮಜ್ಜಿಗೆ ತೆಗೆದುಕೊಂಡು ಬಾ ಆಮೇಲೆ ಬರುವಿಯಂತೆ ಎಂದಾಗ, ಓಡೋಡಿಕೊಂಡು ಮನೆಗೆ ಬಂದ. ಅಮ್ಮ ಅಮ್ಮ ಅಂಬಲಿ ಮಜ್ಜಿಗೆ ಕೊಡಮ್ಮ ಎಂದು ಕೇಳಿದಾಗ ಮೌನಮುರಿದು ಮಾತನಾಡಿದನಲ್ಲಾ ಮಗ
ಎಂದು ಸಂತೋಷದಿಂದ ತಾಯಿ ಸುಗ್ಗವ್ವ ಅಂಬಲಿ ಮಜ್ಜಿಗೆ ಮೊಸರನ್ನ ಮಾಡಿಕೊಡುತ್ತಾಳೆ. ತೆಗೆದುಕೊಂಡು ಬರುವುದರೊಳಗೆ ಮಲ್ಲಯ್ಯ ಇರಲಿಲ್ಲ. ಹಾಸಿದ ಕಂಬಳಿ ಇತ್ತು. ಮಲ್ಲಯ್ಯ ಮಲ್ಲಯ್ಯ ಎಂದು ಕೂಗುತ್ತ ಶ್ರೀಶೈಲದಾರಿವಿಡಿದು ಹೊರಟೇ ಬಿಟ್ಟ ಬಾಲಕ ಸಿದ್ಧರಾಮ. ಜಾತ್ರೆಗೆ ಹೊರಟ ಜನರು ಅವನನ್ನು ಕರೆದುಕೊಂಡು ಹೋಗಿ ಶ್ರೀಶೈಲದಲ್ಲಿರುವ ಮಲ್ಲಿನಾಥ ದೇವಾಲಯ ತೋರಿಸಿದಾಗ ಇವನು ಮಲ್ಲಯ್ಯ ಅಲ್ಲ. ಕಲ್ಲಯ್ಯ ನನಗೆ ಮಲ್ಲಯ್ಯ ಬೇಕು ಎಂದು ಉತ್ಕಟ ಇಚ್ಛೆಯಿಂದ ಕೂಗುತ್ತಾನೆ. ಅಲ್ಲಿ ಕಾಣದೆ ಹೋದಾಗ, ರುದ್ರಗಮ್ಮರಿ ಮೇಲಿಂದ ಹಾರಲು ಹೋದಾಗ ಅಲ್ಲಿ ಮಲ್ಲಯ್ಯನ ನಿಜ ದರ್ಶನವಾಗುತ್ತದೆ. ಆಗ ಸಿದ್ಧರಾಮ ಸಂತೋಷಗೊಂಡು ನಾನಿಲ್ಲೆ ಇರುತ್ತೇನೆ ಎಂದಾಗ ಬೇಡ ನೀನು ಸೊನ್ನಲಾಪುರಕ್ಕೆ ಹೋಗಬೇಕು. ನಿನ್ನಿಂದ ಲೋಕ ಕಲ್ಯಾಣ ಕಾರ್ಯಗಳು ನಡೆಯಬೇಕು. ನಡೆ ನಿನ್ನ ಜೊತೆ ನಾನು ಸದಾ ಇರುವೆ ಎನ್ನುತ್ತಾನೆ.

ಸೊನ್ನಲಾಪುರಕ್ಕೆ ಆಗಮಿಸುತ್ತಾನೆ. ಅಲ್ಲಿ ಬಾವಿ ತೋಡುವುದು ಕೆರೆ-ಗುಡಿ ಕಟ್ಟುವುದರಲ್ಲಿ ಮಗ್ನನಾಗಿದ್ದ ಸಿದ್ಧರಾಮನಲ್ಲಿಗೆ ಅಲ್ಲಮಪ್ರಭುಗಳು ಆಗಮಿಸುತ್ತಾರೆ. ಕೆರೆಯನ್ನು ಕಟ್ಟುತ್ತಿದ್ದ ಶಿಷ್ಯರಿಗೆ ಕೆಣಕಿ ನಿಮ್ಮ ಒಡ್ಡರಾಮಯ್ಯ ಎಲ್ಲಿದ್ದಾನೆ ಎಂದಾಗ ಆ ಶಿಷ್ಯರು ಕೋಪಗೊಂಡು ಕೈಯಲ್ಲಿಯ ಕಲ್ಲು ಅಲ್ಲಮನೆಡೆಗೆ ಬೀಸುತ್ತಾರೆ. ಆ ಕಲ್ಲುಗಳು ಪುನಃ ಶಿಷ್ಯರ ತಲೆಗೆ ಬಡಿದು ರಕ್ತ ಸೋರುತ್ತದೆ. ಇದನ್ನು ತಿಳಿದು ಪವಾಡಪುರುಷ ಸಿದ್ದರಾಮ ಕೋಪೋದ್ರಿಕ್ತನಾಗಿ ಮೂರನೆ ಕಣ್ಣನ್ನು ತೆಗೆಯುತ್ತಾನೆ. ಆ ಉರಿ ಅಲ್ಲಮ ತನ್ನ ಅಂಗಾಲಲ್ಲಿ ಅಡಗಿಸಿಕೊಳ್ಳುತ್ತಾನೆ. ಆ ಕ್ಷಣದಲ್ಲಿ ಸಿದ್ದರಾಮನ ಕೋಪವಡಗಿ ಶಾಂತವಾಗುತ್ತದೆ. ಈ ಶಕ್ತಿ ನಿನಗೆಲ್ಲಿಂದ ಬಂತು ಎಂದು ಅಲ್ಲಮನನ್ನು ಕೇಳಿದಾಗ ಇಷ್ಟಲಿಂಗಯೋಗ ಸಾಧನೆಯಿಂದ ಎಂದಾಗ, ನನಗೂ ಕೊಡು ಎನ್ನುತ್ತಾನೆ. ಆಗ ಅಲ್ಲಮಪ್ರಭುದೇವರು 'ಕರಸ್ಥಲದನುವನು ಗುಹೇಶ್ವರನ ಶರಣ ಸಂಗನ ಬಸವಣ್ಣನೇ ಬಲ್ಲ’. ನಡೆ ಸಿದ್ಧರಾಮ ಎಂದು ಅಲ್ಲಮಪ್ರಭುಗಳು ಕಲ್ಯಾಣಕ್ಕೆ ಕರೆದುಕೊಂಡು ಬರುತ್ತಾರೆ.

ಕಲ್ಯಾಣವನ್ನು ಕಂಡು ಸಿದ್ಧರಾಮರು ರೋಮಾಂಚಿತರಾಗುತ್ತಾರೆ. ಬಸವಣ್ಣನವರ ಮಹಾಮನೆಯ ಅಂಗಳ ಕಂಡಾಗಲಂತೂ ಅಷ್ಟಾಷಷ್ಠಿ ತೀರ್ಥಂಗಳು ನೆಲಸಿಪ್ಪವಯ್ಯ ಎಂಬ ಅನುಭವ ಅವರಿಗಾಯಿತು. ಕಪಿಲಸಿದ್ಧ ಮಲ್ಲಿನಾಥಾ ನಿಮ್ಮ ಶರಣ ಸಂಗನಬಸವಣ್ಣನ ಮಹಾಮನೆಗೆ ನಮೋ ನಮೋ ಎಂದು ಬದುಕಿದೆನು! ಎಂದು ಆ ಮಹಾಮನೆಗೆ ಕೈಮುಗಿದು ಪ್ರವೇಶಿಸುತ್ತಾರೆ.

ಷಟಸ್ಥಲ ಚಕ್ರವರ್ತಿ ಚನ್ನಬಸವಣ್ಣನವರಿಂದ ಇಷ್ಟಲಿಂಗ ದೀಕ್ಷೆ ನೆರವೇರುತ್ತದೆ. ಕರ್ಮಯೋಗಿ ಸಿದ್ಧರಾಮ ಇಷ್ಟಲಿಂಗಯೋಗಿ ಸಿದ್ಧರಾಮರಾಗುತ್ತಾರೆ. ಸುಮಾರು ದಿನಗಳ ಕಾಲ ಅನುಭವ ಮಂಟಪದ ಶರಣ ಸಮೂಹದಲ್ಲಿ ಉಳಿಯುತ್ತಾರೆ. ಕಪಿಲಸಿದ್ಧ ಮಲ್ಲಿಕಾರ್ಜುನ ವಚನಾಂಕಿತ ವಿಟ್ಟುಕೊಂಡು ವಚನಗಳನ್ನು ಬರೆಯುತ್ತಾರೆ. ಅರವತ್ತೊಂದು ಸಾವಿರ ವಚನಂಗಳ ಹಾಡಿ ಸೋತಿತೆನ್ನ ಮನ ನೋಡಯ್ಯ ಎಂದು ಅವರೇ ಹೇಳಿಕೊಂಡಿದ್ದರೂ ಕೇವಲ ೧೬೦೦, ವಚನಗಳು ಮಾತ್ರ ಸಿಕ್ಕಿವೆ. ಯೋಗಿನಾಥ ವಚನಾಂಕಿತವಿಟ್ಟುಕೊಂಡು ಬಸವಸ್ತೋತ್ರದ ತ್ರಿವಿಧಿ ಮಿಶ್ರತ್ರಿವಿಧಿಗಳನ್ನು ರಚಿಸಿದ್ದಾರೆ.

ಬಸವಣ್ಣನೇ ತಾಯಿ
ಬಸವಣ್ಣನೇ ತಂದೆ
ಬಸವಣ್ಣನೇ ಪರಮ ಬಂಧುವೆನಗೆ
ವಸುಧೀಶ ಕಪಿಲಸಿದ್ಧ ಮಲ್ಲಿಕಾರ್ಜುನ
ನಿಮ್ಮ ಹೆಸರಿಟ್ಟ ಗುರು ಬಸವಣ್ಣನಯ್ಯ
.

ಹನ್ನೆರಡನೆಯ ಶತಮಾನದ ಪ್ರಥಮ ಶ್ರೇಣಿಯ ವಚನಕಾರರಲ್ಲಿ ಒಬ್ಬ. ಈತನ ಜೀವನ ಜರಿತ್ರೆಗೆ ಸಂಬಂಧಿಸಿದ ಅನೇಕ ಅಧಾರಗಳು ವಚನ, ಕಾವ್ಯ ಶಾಸನ, ಐತಿಹ್ಯಗಳಲ್ಲಿ ದೊರಿಯುತ್ತವೆ. ಸೊನ್ನಲಿಗೆ (ಮಹಾರಾಷ್ಟ್ರದ ಇಂದಿನ ಸೊಲ್ಲಾಪುರ) ಈತನ ಜನ್ಮಸ್ಥಳ. ತಂದೆ-ಮುದ್ದುಗೌಡ. ತಾಯಿ-ಸುಗ್ಗಲೆ. ಮನೆದೈವ-ಧೂಳಿಮಾಕಾಳ. ರೇವಣಸಿದ್ಧನ ವರದಿಂದ ಹುಟ್ಟಿದ. ತಂದೆ ತಾಯಿ ಇಟ್ಟ ಹೆಸರು ಧೂಳಿಮಾಕಾಳ. ಅನಂತರ ನಾಥಸಿದ್ಧ ಸಂಪ್ರದಾಯದವನಾಗುವಲ್ಲಿ ಸಿದ್ಧರಾಮನೆಂದು ಪ್ರಸಿದ್ಧನಾದ. ಬಾಲ್ಯದಲ್ಲಿ ಮುಗ್ಧಭಕ್ತ. ದನಕಾಯುವ ಕಾಯಕ. ಶ್ರೀಶೈಲಕ್ಕೆ ಹೋಗಿ ಮಲ್ಲಿಕಾರ್ಜುನನ ದರ್ಶನ ಪಡೆದ. ಸೊನ್ನಲಿಗೆಗೆ ಬಂದು ದೇವಾಲಯ ಸ್ಥಾಪಿಸಿ, ಆ ಆವರಣಕ್ಕೆ 'ಯೋಗ ರಮಣೀಯ ಕ್ಷೇತ್ರ'ವೆಂದು ಹೆಸರಿಸಿದ. ಲಿಂಗಸ್ಥಾಪನೆ, ಸಕಲ ಜೀವಾವಳಿಯ ನೆಮ್ಮದಿಯ ಬದುಕಿಗಾಗಿ ಕೆರೆ ಕಟ್ಟೆಗಳನ್ನು ಕಟ್ಟಿಸುವ ಕಾಯಕದಲ್ಲಿ ತೊಡಗಿ ಕರ್ಮಯೋಗಿ ಎನಿಸಿದ. ಪ್ರಭುದೇವ ಅವನನ್ನು ಕಲ್ಯಾಣಕ್ಕೆ ಕರೆದೋಯ್ದು ಚೆನ್ನಬಸವಣ್ಣನವರಿಂದ ಇಷ್ಟಲಿಂಗದೀಕ್ಷೆ ಕೊಡಿಸಿದ. ಅನುಭವ ಮಂಟಪದ ಗೋಷ್ಠಿಯಲ್ಲಿ ಪಾಲ್ಗೊಂಡು, ಮಹಾಶಿವಯೋಗಿಯಾದ. ಕಲ್ಯಾಣಕ್ರಾಂತಿಯ ನಂತರ ಸೊನ್ನಲಿಗೆಗೆ ಬಂದು ಅಲ್ಲಿಯೇ ಐಕ್ಯನಾದ.

ಸಿದ್ಧರಾಮ ವಚನ, ಸ್ವರವಚನ, ಬಸವಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಎಂದು ಮುಂತಾಗಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಮಾಡಿದ್ದಾನೆ. ವಚನ ಮತ್ತು ಸ್ವರವಚನಗಳಲ್ಲಿ 'ಕಪಿಲಸಿದ್ಧ ಮಲ್ಲಿಕಾರ್ಜುನ' ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ 'ಯೋಗಿನಾಥ' ಅಂಕಿತವಿದೆ. ಸದ್ಯ ಈತನ ೧೧೬೨ ವಚನಗಳು ದೊರೆತಿದ್ದು ಅವುಗಳಲ್ಲಿ ವೈಯುಕ್ತಿಕ ಬದುಕಿನ ಸಂಗತಿಗಳು ಧರ್ಮತತ್ವ ಜಿಜ್ಞಾಸೆ, ಸಾಮಾಜಿಕ ಕಳಕಳಿ ಪ್ರಧಾನವೆನಿಸಿವೆ.

ಗುರುವಾಗಿ ಬಂದೆನಗೆ ದೀಕ್ಷೆಯ ಮಾಡಿದಿರಿ,
ಲಿಂಗವಾಗಿ ಬಂದೆನ್ನ ಮನದ ಮಲಿನವ ಕಳೆದಿರಿ,
ಜಂಗಮವಾಗಿ ಬಂದೆನ್ನ ಪ್ರಪಂಚಕತನವ ಕಳೆದು ಪರಮ ಸೀಮೆಯ ಮಾಡಿದಿರಿ.
ಇಂತಿವೆಲ್ಲವೂ ಬಸವಣ್ಣನಾಗಿ ಎನಗೆ
ಪ್ರಸಾದವ ನೀಡಿಸಲಹಿದ ಕಪಿಲಸಿದ್ದಮಲ್ಲಿಕಾರ್ಜುನ
ಇನ್ನೆನಗತಿಶಯವೇನೂ ಇಲ್ಲ.

ಕಲ್ಯಾಣ ಕ್ರಾಂತಿಯ ನಂತರ ಮೂರನೆಯ ಶೂನ್ಯ ಪೀಠಾಧಿಕಾರಿಯಾಗಿ ಕಲ್ಯಾಣದಲ್ಲಿ ಶರಣತತ್ತ್ವ ರಕ್ಷಣೆಯ ಭಾರ ಹೊತ್ತುಕೊಳ್ಳುತ್ತಾರೆ. ಕೆಲ ಕಾಲದ ನಂತರ ಈ ಮರ್ತ್ಯ ಲೋಕದಾಟ ಸಾಕೆನಿಸಿ ಸೊನ್ನಲಾಪುರಕ್ಕೆ ಆಗಮಿಸುತ್ತಾರೆ. ಅಲ್ಲಿಯೇ ತಾನು ಕಟ್ಟಿದ ಕೆರೆಯ ಮಧ್ಯದಲ್ಲಿ ಜೀವಂತ ಸಮಾಧಿ ಸ್ವೀಕರಿಸುತ್ತಾರೆ.

ಸಿದ್ಧರಾಮರ ದೃಷ್ಟಿಯಲ್ಲಿ ಸ್ತ್ರೀ ವಿವೇಚನೆ

ತಾ ಮಾಡಿದ ಹೆಣ್ಣು ತನ್ನ ತಲೆಯನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನೇರಿತ್ತು
ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತ್ತು
ಅದು ಕಾರಣ, ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ;
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ದಮಲ್ಲಿಕಾರ್ಜುನ ನೋಡಾ!

ಸರ್ವ ಸಂಗ ಪರಿತ್ಯಾಗಿ ಪರಿಶುದ್ಧಯೋಗಿಯ ವಸ್ತುನಿಷ್ಠ ದೃಷ್ಟಿಗೆ ವಸ್ತುಗಳ ಹಿಂದಿನ ಸತ್ಯಗಳು ಸ್ಪಟಿಕದಂತೆ ಸ್ಪಷ್ಟವಾಗಿ ಕಂಡುದು ಸಹಜ. ಮಾನವಳಾಗಿ ಹುಟ್ಟಿದ ಪಿಂಡಕ್ಕೆ ಹೆಣ್ಣೆಂದು ಹೆಸರಿಟ್ಟು ಹೀನ ಸ್ಥಿತಿಗಿಳಿಸಿದ ಮೂಢಮನುಜರಿಗೆ, 'ಹರಿಬ್ರಹ್ಮರಿಬ್ಬರೂ ಸ್ತ್ರೀಯರಯ್ಯಾ' ಎಂದು ಬುದ್ಧಿ ಹೇಳುತ್ತಾರೆ. ಇದು ಅವರ ಅಧ್ಯಾತ್ಮಿಕ ಅನುಭವದ ಸತ್ಯ ಅಭಿವ್ಯಕ್ತಿಯಾಗಿದೆ. ಅಷ್ಟೇ ಅಲ್ಲ, ಅದು ಇಪ್ಪತ್ತೊಂದನೇ ಶತಮಾನದ ವಿಜ್ಞಾನ ಅತ್ಯಂತ ಪರಿಶ್ರಮದ ಉಚ್ಚ ಸಂಶೋಧನೆಯಿಂದ ಸಿದ್ಧಪಡಿಸಿದ ವೈಜ್ಞಾನಿಕ ಸತ್ಯವೂ ಆಗಿದೆ. ಮೂಲದಲ್ಲಿ ಮನುಜರ ಎಲ್ಲಾ ಪಿಂಡಗಳು ಸ್ತ್ರೀ ಪಿಂಡವಾಗಿಯೇ ಧಾರಣೆ ಹೊಂದುತ್ತವೆ. ಹೀಗೆ ಧಾರಣೆಯಾದ ಪಿಂಡಗಳಲ್ಲಿ ಪುರುಷರಾಗಿ ಜನ್ಮತಾಳುವ ಪಿಂಡಗಳು ಮುಂದಿನ ಕೆಲವು ದಿನಗಳಲ್ಲಿ 'ವಾಯ್' ಕ್ರೋಮೋಜೋಂದಿಂದ ಸ್ರವಿಸಲಾದ ವಸ್ತುಗಳ ಪ್ರಭಾವದಲ್ಲಿ ಸ್ತ್ರೀ ಪಿಂಡದಿಂದ ಪುರುಷ ಪಿಂಡವಾಗಿ ಪರಾವರ್ತನೆ ಹೊಂದಿ ಜನ್ಮ ತಾಳುತ್ತವೆ. ಮೂಲ ಪಿಂಡಕ್ಕೆ ಪರಾವರ್ತಿತಗೊಳಿಸುವ 'ವಾಯ್' ಕ್ರೋಮೋಜೋಂ ಇಲ್ಲದಿದ್ದರೆ ಎಲ್ಲಾ ಪಿಂಡಗಳು ಸ್ತ್ರೀ ಎಂದೆ ಜನಿಸುತ್ತವೆ. ಅದಕ್ಕಾಗಿ ಸಿದ್ಧರಾಮರು ಹೇಳುತ್ತಾರೆ, ’ಬಂದ ಬಳಿಕ ಪುರುಷನಾದೆ' ಅಂದರೆ ದಿವ್ಯ ಶರಣ ಸತ್ಯವನರಿದಿದ್ದ ತಾನು ಪುರುಷನಾಗಿದ್ದರೂ ಸ್ತ್ರೀ ಎಂದಾಗಿಯೇ ತಾಯಿಯ ಗರ್ಭದಲ್ಲಿ ಮೂಡಿದ್ದರು.

ಜ್ಞಾನಿಗಳು ತಾವಾದ ಬಳಿಕ ಅನ್ಯರ ಸ್ತೋತ್ರಕ್ಕೆ ಒಳಗಾಗಬಾರದು ಎನ್ನುತ್ತಾರೆ ಶರಣ ಸಿದ್ದರಾಮರು. ಯಾವ ಮುಟ್ಟಿನಿಂದಾಗಿ ಇಡೀ ಮಾನವ ಕುಲವನ್ನೇ ಹೆತ್ತುತ್ತಾಳೆಯೋ ಆ ಹೆಣ್ಣು ಅದು ಹೇಗೆ ನರಕದ ಕುರುಹಾಗಲು ಸಾಧ್ಯ? ತಾಯಿಯನ್ನು ಪೂಜಿಸುವ ಮಾತೃ ಪ್ರಧಾನ ಸಮಾಜದ ಮೂಲ ಸಂಸ್ಕೃತಿ ನಮ್ಮದಾಗಿರಲು ಅವಳನ್ನ ನರಕಕ್ಕಿಳಿಸುವ ತಪ್ಪು ಸಂಸ್ಕೃತಿಗೆ ನಾವು ಬಲಿಯಾದದ್ದು ಮಹಘನ ತಪ್ಪು ಎಂದು ಸಾರುತ್ತಾರೆ. ಶರಣರು ಕಿತ್ತೊಗೆಯಿರಿ ಅನ್ಯರ ಸ್ತೋತ್ರ ಎಂಬುದೇ ನಿರ್ದೇಶನವಾಗಿದೆ. ಸ್ತ್ರೀ ಧ್ವನಿಯನಾಲಿಸಿ ಎಂದು ಹೇಳುತ್ತಾರೆ. ’ಚಿತ್ತದಾ ಕಥನದಿಂದ ಮತ್ತೇ ಶುದ್ಧವಾಗೆಂದಳು ಕಪಿಲಸಿದ್ಧಮಲ್ಲಿನಾಥನವ್ವ' ಪರುಷರು ಸ್ತ್ರೀಯ ವಿಷಯದಲ್ಲಿ ತಮ್ಮ ಚಿತ್ತದ ಭ್ರಮೆಯನ್ನು ಅಳಿದು ಸತ್ಯವನರಿದು ಅವಳಿಗೆ ಆದರದ ಸಮಭಾವದಿಂದ ಕಾಣಲು ಸೂಚಿಸುತ್ತಾರೆ.

Waldo Emerson ಎಂಬ ಜಗತಪ್ರಸಿದ್ಧ ತತ್ತ್ವಜ್ಞಾನಿ ಹೇಳುತ್ತಾನೆ - "man is a bundle of relations, a knot of roots whos flower & fruitage is the world" ಜಗತ್ತೆಂಬುದು ಮತ್ತೇನು ಬೇರೆ ಆಗಿರದೆ ಮನುಷ್ಯರ ಸಂಬಂಧಗಳ ಫಲಪುಷ್ಟವಾಗಿದೆ. ಇದರ ಗರ್ಭಿತ ಅರ್ಥ ಸ್ತ್ರೀ-ಪುರುಷನ ಸಮ ಸಂಬಂಧದಿಂದ ಜಗತ್ತು ಹುಟ್ಟಿ ಬೆಳೆಯುತ್ತಿದೆ. ಎಮರ್‌ಸನ್‌ಗಿಂತ ೮೦೦ ವರ್ಷಗಳ ಹಿಂದೆಯೇ ಸಿದ್ಧರಾಮರು ಬಹು ಮುಂದೆ ಹೋಗಿ ಹೇಳುತ್ತಾರೆ.

'ಹೆತ್ತಳವೆ ಸಕಲ ಬ್ರಹ್ಮಾಂಡಗಳ' ವಸುಧೆಯಲ್ಲವು ಹೆಣ್ಣು. ಇದು ಕೇವಲ ಶರಣ ಸಿದ್ಧರಾಮರ ಸ್ತ್ರೀ ಶಕ್ತಿಯೆ? ಅವರ ತಾಯಿಯ ಪ್ರತಿಯಿರುವ ಅವರ ಮನದಲ್ಲಿಯ ಆದರವೇ ಎಂದು ಹೇಳಲಿಕ್ಕೆ ಸಾಧ್ಯವಿಲ್ಲ. ಇದು ನಿರಂಜನ ಶರಣರಿಗಾದ ಸತ್ಯದ ದರ್ಶನ ಆಧ್ಯಾತ್ಮಿಕ ಸತ್ಯದ ಸಾಕ್ಷಾತ್ಕಾರದ ಅನುಭಾವದ ಬಾಹ್ಯಾಭಿವ್ಯಕ್ತಿ ಮನ್ನಿಸಲೇಬೇಕು ! ಸೃಷ್ಟಿಯ ನಿಜ ಪ್ರತಿರೂಪವೆಂದರೆ ಹೆಣ್ಣು ಎಂದು ವಿಜ್ಞಾನ ಸಿದ್ಧಪಡಿಸಿದೆ

ಶರಣ ಶಿವಯೋಗಿ ಸಿದ್ಧರಾಮರು ಸಾರುತ್ತಾರೆ-

ತಾ ಮಾಡಿದ ಹೆಣ್ಣು ನಾರಾಯಣನ ಎದೆಯನೇರಿತು !
ಅದು ಕಾರಣ ಹೆಣ್ಣು ಹೆಣ್ಣಲ್ಲ
ಹೆಣ್ಣು ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನಾ ನೋಡಾ

ನಾವು ಹೆಣ್ಣೆಂದು ಹೀನ ಬಗೆದರೆ ಅವಳು ಪರಮಾತ್ಮನ ಹೃದಯವನ್ನು ಮೀರಿದವಳಾಗಿರುತ್ತಾಳೆ. ಪರಮಾತ್ಮನೆ ಆಗಿದ್ದಾಳೆ. ಎಲ್ಲಾ ತತ್ತ್ವಜ್ಞಾನದ ತಳಹದಿಯಲ್ಲಿರುವ ಒಂದು ಚಿರಂತನ ವಿಚಾರವೆಂದರೆ ಅಖಂಡ ಅಸ್ತಿತ್ವಾತ್ಮಕ, ಅಸ್ತಿತ್ವಸಾಮರ್ಥ್ಯ ಹೊಂದಿದ್ದು ಕೇವಲ ಒಂದೇ ಒಂದಾಗಿದೆ. ತದೇಕಂ, ಈ ತದೇಕಂದ ಆಧಾರ ಆತ್ಮವಾಗಿದೆ. ಆತ್ಮ ಹೆಣ್ಣು ಗಂಡಿನ ಸಮ್ಯಕ್ ಸ್ವರೂಪವಾಗಿದ್ದು ಆಭೇದವಾಗಿದೆ. ಶರಣ ದೇವರದಾಸಿಮಯ್ಯ ಹೇಳುತ್ತಾನೆ. ಆತ್ಮ ಹೆಣ್ಣು ಅಲ್ಲ ಗಂಡು ಅಲ್ಲ. ರಾಮನಾಥ, ಈ ಸತ್ಯ ತತ್ತ್ವದ ಅನುಪಮ ಆಧಾರದ ಅನುಭವದಡಿಯಲ್ಲಿ ಸಾಮ್ಯಯೋಗ ಸಿದ್ಧ ಶರಣ ಸಿದ್ದರಾಮ ಹೆಣ್ಣಿಗೆ ಪ್ರತ್ಯಕ್ಷ ಕಪಿಲಸಿದ್ಧಮಲ್ಲಿಕಾರ್ಜುನ ಸ್ವರೂಪದಲ್ಲಿ ಕಂಡರು.

ಅಯ್ಯ ನಿಮ್ಮನರಿದವನ ಮಂದಿರ ಮಹಾದೇವಿಯರ ಮನೆಯಯ್ಯಾ ಎಂದು ಸಾರಿ ಹೆಣ್ಣಿದ್ದ ಪ್ರತಿಯೊಂದು ಮನೆಯನ್ನು ದೇವರ ದೇಗುಲವಾಗಿಸಿದರು. ಈ 'ಬಸವ ಸ್ತವನ ಸಂತತಂ' ಕೃತಿಯಲ್ಲಿ ಶಿವಯೋಗಿ ಸಿದ್ದರಾಮೇಶ್ವರರು ರಚಿಸಿದ 125 ಬಸವಸ್ತೋತ್ರ ತ್ರಿವಿಧಿಗಳಿವೆ. ಈ ತ್ರಿವಿಧಿಗಳನ್ನು ಸತತವಾಗಿ ಭಕ್ತಿ ಭಾವದಿಂದ ಪಠಣ ಮಾಡಿದರೆ ಸುಖ-ಶಾಂತಿ ಸಮೃದ್ಧಿ, ಸಂತೃಪ್ತಿ ಪ್ರಾಪ್ತವಾಗುತ್ತದೆ.

ಪರಿವಿಡಿ (index)
Previous ಹಡಪದಪ್ಪಣ್ಣಗಳ ಪುಣ್ಯಸ್ತ್ರೀ ಲಿಂಗಮ್ಮ ನಿ:ಕಳಂಕ ಚೆನ್ನ ಸೋಮೇಶ್ವರ Next