*
ಮರದೊಳಗಣ ಬೆಂಕಿ ತನ್ನ ತಾನೇ ಉರಿಯಬಲ್ಲುದೆ ?
ಶಿಲೆಯೊಳಗಣ ದೀಪ್ತಿ ಆ ಬೆಳಗ ತನ್ನ ತಾನೆ ಬೆಳಗಬಲ್ಲುದೆ ?
ಆ ತೆರನಂತೆ ಕುಟಿಲನ ಭಕ್ತಿ, ಕಿಸಕುಳನ ವಿರಕ್ತಿ
ಮಥನಿಸಿಯಲ್ಲದೆ ದಿಟಹುಸಿಯ ಕಾಣಬಾರದು.
ಸತ್ಯವನು ಅಸತ್ಯವನು ಪ್ರತ್ಯಕ್ಷ ಪ್ರಮಾಣಿಸಿದಲ್ಲದೆ
ನಿಶ್ಚಯವನರಿಯಬಾರದು,
ಗುರುವಾದಡೂ ಲಿಂಗವಾದಡೂ ಜಂಗಮವಾದಡೂ
ಪರೀಕ್ಷಿಸಿ ಹಿಡಿಯದವನ ಭಕ್ತಿ, ವಿರಕ್ತಿ,
ತೂತಕುಂಭದಲ್ಲಿಯ ನೀರು, ಸೂತ್ರ ತಪ್ಪಿದ ಬೊಂಬೆ, ನಿಜನೇತ್ರ ತಪ್ಪಿದ ದೃಷ್ಟಿ;
ಬೇರು ಮೇಲಾದ ಸಸಿಗೆ ನೀರಿನಾರೈಕೆಯುಂಟೆ ?
ಇಂತು ಆವ ಕ್ರೀಯಲ್ಲಿಯೂ ಭಾವಶುದ್ಧಾತ್ಮನಾಗಿ ಆರೈಕೆ ಬೇಕು, ಭೋಗಬಂಕೇಶ್ವರಲಿಂಗದ ಸಂಗದ ಶರಣನ ಸುಖ.
ಈತನ ಹನ್ನೊಂದು ವಚನಗಳು ದೊರೆತಿವೆ. ಅಂಕಿತ . 'ಭೋಗ ಬಂಕೇಶ್ವರಲಿಂಗ'. ವಚನಗಳು ಹೆಚ್ಚು ತಾತ್ವಿಕವಾಗಿದ್ದು,
ಅತ್ಮ- ಅರಿವುಗಳಿಗೆ ಸೋಂಕುವ ಸುಗುಣ-ದುರ್ಗುಣದ ಸ್ವರೂಪ, ಸಾಕಾರ-ನಿರಾಕಾರ ಏಕವಾಗಬೇಕೆಂಬ ನಿಲುವು,
ಭರಿತಾರ್ಪಣದ ರೀತಿ-ನೀತಿಗಳನ್ನು ತಿಳಿಸಿಕೊಡುತ್ತವೆ.
ಸಕಲಪದಾರ್ಥದ್ರವ್ಯಂಗಳೆಲ್ಲವ ಲಿಂಗಕ್ಕೆ ಮುಟ್ಟಿಸಿ
ಪ್ರಸಾದ ಮುಂತಾಗಿ ತಾ ಮುಟ್ಟಿಹೆನೆಂಬಲ್ಲಿ ತನ್ನ ಸಂಕಲ್ಪದ ಗುಣವೊ?
ಘನಲಿಂಗಕ್ಕೆ ತೃಪ್ತಿಮಾಡಿ ಒಕ್ಕುದ ಕೊಂಡಿಹೆನೆಂಬ ಕಟ್ಟಳೆಯ ಗುಣವೊ ?
ಇಂತೀ ಸತ್ಕ್ರೀಮಾರ್ಗಂಗಳನರಿದು ಅರ್ಪಿಸುವಲ್ಲಿ
ಲಿಂಗಮುಂತಾಗಿ ತಾ ಕೊಂಬನಾಗಿ ಲಿಂಗಕ್ಕೆ ಮರೆದು ತಾ ಕೊಂಡಿಹೆನೆಂಬಲ್ಲಿ
ಲಿಂಗಕ್ಕೆ ತಾನೊಳಗೊ ಹೊರಗೊ - ಎಂಬುದ ತಿಳಿದು, ಸಂದುದ ಕೈಕೊಂಡು,
ಸಲ್ಲದೆ ಮರವೆಯಿಂದ ಬಂದುದ
ಚರಲಿಂಗದ ಮುಖದಿಂದ ಸಂದುದ ಕೈಕೊಂಬುದು
ಅಂಗಸೋಂಕು, ಆತ್ಮಸೋಂಕು, ಅರಿವುಸೋಂಕು,
ಈ ತ್ರಿವಿಧ ಸೋಂಕು ಪರಿಪೂರ್ಣವಾದುದು ಅರ್ಪಿತ, ಅವಧಾನಿಯ ಕಟ್ಟು.
ಹೀಂಗಲ್ಲದೆ ಮಿಕ್ಕಾದುದೆಲ್ಲವೂ ವಾಚಾಲಕರ ಕಟ್ಟುಕದ ಮಾತು.
ಆ ಮಾತಿನ ಮಾಲೆಯೆಲ್ಲವೂ ಭ್ರಷ್ಟ, ಭೋಗಬಂಕೇಶ್ವರಲಿಂಗದಲ್ಲಿ ನಿಹಿತಾಚಾರಿಗಳ ಕಟ್ಟು.
*