Previous ಜಂಗಮಲಿಂಗ ಪ್ರಭುವೆ ನಿಜಮುಕ್ತಿ ರಾಮೇಶ್ವರ Next

ನಂಜುಂಡ ಶಿವ

*

ಈ ಅಂಕಿತದ ಕರ್ತೃ ಸು.1600ರಲ್ಲಿ ಇದ್ದಿರಬೇಕು ವಚನ, ಸ್ವರವಚನ ಎರಡೂ ಪ್ರಕಾರಗಳಲ್ಲಿ ಕೃತಿರಚನೆ ಮಾಡಿದ್ದಾನೆ. ಸದ್ಯ 24 ವಚನ, 5 ಸ್ವರ ವಚನಗಳು ದೊರೆತಿವೆ. ಹೆಚ್ಚಿನ ವಚನಗಳು ದೀರ್ಘವಾಗಿವೆ. ಸಂಸ್ಕೃತ ಉದ್ಧರಣೆಗಳಿಂದ ತುಂಬಿಕೊಂಡಿವೆ, ತತ್ವಪ್ರಧಾನವೆನಿಸಿವೆ. ವಚನಗಳಲ್ಲಿ ಸಂಸ್ಕೃತ ಶ್ಲೋಕಗಳ ಬಳಕೆ ಹೆಚ್ಚಿಗೆ ಇದೆ. ಗುರು-ಲಿಂಗ-ಜಂಗಮಗಳ ಪ್ರಸಾದ ವಿಶೇಷವನ್ನು ಹೇಳಲಾಗಿದೆ

ಗುರುಲಿಂಗಭಕ್ತನಾದರೆ ಪಾಶತ್ರಯ ವಿರಹಿತನಾಗಿರಬೇಕು.
ಗುರುಲಿಂಗನಿಷ್ಠನಾದರೆ ಅನ್ಯಭಜನೆಯಿಲ್ಲದಿರಬೇಕು.
ಗುರುಲಿಂಗಪ್ರಸಾದಿಯಾದರೆ ಅನ್ಯರಲ್ಲಿ ಕೈಯಾನದಿರಬೇಕು.
ಗುರುಲಿಂಗಪ್ರಾಣಿಯಾದರೆ ಅರ್ಪಿಸಿದಲ್ಲದ ಕೊಳ್ಳದಿರಬೇಕು.
ಗುರುಲಿಂಗಸಮರಸನಾದರೆ ಅನ್ಯರಿಗೆರಗದಿರಬೇಕು.
ಗುರುಲಿಂಗಶರಣನಾದರೆ ಇಹಪರವೆಂಬ ಇದ್ದೆಸೆಗೆಡಬೇಕು.
ಇಂತು ಷಟ್ಸ್ಥಲವಿಡಿದಾಚರಿಸಿ ಗುರುಲಿಂಗದಲ್ಲಿ ಎರಡಳಿದುಳಿದ
ನಿಜಜ್ಞಾನಿ ತಾನೆ. ನಮ್ಮ ಪರಮಗುರು ನಂಜುಂಡಶಿವನು./೧೨೮೦ [1]

ನನೆಯೊಳಗಣ ಪರಿಮಳದಂತೆ, ಶಿಲೆಯೊಳಗಣ ಪಾವಕನಂತೆ,
ಬೀಜದೊಳಗಣ ವೃಕ್ಷದಂತೆ, ಕ್ಷೀರದೊಳಗಣ ಘೃತದಂತೆ,
ತಿಲದೊಳಗಣ ತೈಲದಂತೆ, ಸುಪ್ತಿಯೊಳಗಣ ಎಚ್ಚರಿನಂತೆ
ನೀನಿದ್ದುದನಾರು ಬಲ್ಲರು ಹೇಳಾ. ಪರಮಗುರು ನಂಜುಂಡಶಿವಾ ? /೧೨೮೫ [1]

ವೇದ ಶಾಸ್ತ್ರಾಗಮ ತರ್ಕತಂತ್ರ ಇತಿಹಾಸ
ನಾನಾಪುರಾಣ ಪುರಾತನ ವಚನವ ಕಲಿತರೇನೊ ?
ಗುರುವಿನಲ್ಲಿ ವಿಶ್ವಾಸಿಗಳಲ್ಲ , ಲಿಂಗದಲ್ಲಿ ನಿಷ್ಠೆಯುಳ್ಳವರಲ್ಲ ,
ಜಂಗಮದಲ್ಲಿ ಸಾವಧಾನಿಗಳಲ್ಲ , ಪ್ರಸಾದದಲ್ಲಿ ಪರಿಣಾಮಿಗಳಲ್ಲ ,
ಪಾದೋದಕದಲ್ಲಿ ಪರಮಾನಂದಿಗಳಲ್ಲ.
ಇಂತೀ ಪಂಚಾಚಾರವನರಿದು ತಾನಳಿದುಳಿವ ಭೇದವನರಿಯದೆ,
ನಾನು ಭಕ್ತ, ನಾನು ವಿರಕ್ತನೆಂದರೆ ನಗರೆ ನಿಮ್ಮ ಶರಣರು !
ಪರಮಗುರುವೆ ನಂಜುಂಡಶಿವಾ. /೧೨೯೦ [1]

[1] ವಚನ ಸಂಖ್ಯೆ ೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

-??: ಈ ಪ್ರಶ್ನೆ ಚಿಹ್ನೆಯು ವಚನಕಾರನ ಹೆಸರು ಅಜ್ಞಾತವೆಂಬುದನ್ನು ಸೂಚಿಸುತ್ತದೆ.

ಪರಿವಿಡಿ (index)

*
Previous ಜಂಗಮಲಿಂಗ ಪ್ರಭುವೆ ನಿಜಮುಕ್ತಿ ರಾಮೇಶ್ವರ Next