ವೀರಗೊಲ್ಲಾಳ

*
ಅಂಕಿತ: ವೀರ ಬೀರೇಶ್ವರಾ
ಕಾಯಕ: ಕುರಿ ಕಾಯುವ ಕೆಲಸ

88
ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.
ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.
ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.
ಇಂತಿವನೆಲ್ಲವನರಿವ ಚಿತ್ತ ದೇವರಲ್ಲ.
ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.
ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ :
ಕಂಡವರೊಳಗೆ ಕೈಕೊಂಡಾಡದೆ,
ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,
ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ,
ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ,
ವೀರಬೀರೇಶ್ವರಲಿಂಗದೊಳಗಾದ ಶರಣ.

ಈತ ವಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮಕ್ಕೆ ಸೇರಿದವನು. ಮೂಲ ಹೆಸರು ಕಾಟಕೂಟ. ಕುರುಬ ಜಾತಿಯವನಾದ ಈತನ ಕಾಯಕ ಕುರಿ ಕಾಯುವುದು. ಕಾಲ-೧೧೬೦. ಶಿವಭಕ್ತನಾಗಿ ತುಂಬ ಪ್ರಸಿದ್ಧಿಯನ್ನು ಪಡೆದಿದ್ದಾನೆ. ಕಾವ್ಯ-ಪುರಾಣಗಳಲ್ಲಿ ಈತನ ಕಥೆ ನಿರೂಪಿತವಾಗಿದೆ. 'ವೀರಬೀರೇಶ್ವರ' ಅಂಕಿತದಲ್ಲಿ ಬರೆದ ೧೦ ವಚನಗಳು ದೊರೆತಿವೆ. ಅವುಗಳಲ್ಲಿ ಈತನ ಕುರುಬ ಕಾಯಕದ ವಿವರಗಳು ದಟ್ಟವಾಗಿ ಮೂಡಿನಿಂತಿವೆ. ಮುಗ್ಧಭಕ್ತನಾದ ಈತ ತನ್ನ ಸರಳ ನಡೆ, ನುಡಿಗಳಿಂದ ಸಾಮಾನ್ಯರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾನೆ. ಗೋಲಗೇರಿಯಲ್ಲಿ ಈತನ ದೇವಾಲಯವಿದ್ದು, ಪ್ರತಿವರ್ಷ ಜಾತ್ರೆ ನೆರವೇರುತ್ತದೆ.

ಆಡು, ಕುರಿ, ಹೋತಗಳ ಉಲ್ಲೇಖಗಳು, ಮೇಲಿಂದ ಮೇಲೆ ಬಂದಿವೆ. ಬೆಡಗಿನ ವಚನಗಳೇ ಹೆಚ್ಚು

94
ಹೋತನ ಹೊಡದು, ಆಡ ಕೂಡಿ, ಕುರಿಯ ನಿಲಿಸಿ,
ತಗರ ತಡದು, ಹಿಂಡನೊಬ್ಬುಳಿತೆಮಾಡಿ,
ಹುಲಿ ತೋಳ ಚೋರ ಭಯಮಂ ಕಳೆದು,
ಹಿಂಡಿಗೊಡೆಯನಾಗಿ ಕಾವ ಗೊಲ್ಲಾಳ ನೀನೆ, ವೀರಬೀರೇಶ್ವರಾ.


*
Previousವಚನ ಭಂಡಾರಿ ಶಾಂತರಸವೈದ್ಯ ಸಂಗಣ್ಣNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.