Previous ಅಂಬಿಗರ ಚೌಡಯ್ಯ ಮಾದಾರ ಚೆನ್ನಯ್ಯ Next

ಶರಣ ಡೋಹರ ಕಕ್ಕಯ್ಯ

*
ಅಂಕಿತ: ಅಭಿನವಮಲ್ಲಿಕಾರ್ಜುನ
ಕಾಯಕ: ಚರ್ಮ ಹದ ಮಾಡುವವನು

೯೮೨
ಎನಗೆ ಗುರುಸ್ಥಲವ ತೋರಿದಾತ ಸಂಗನ ಬಸವಣ್ಣನು.
ಎನಗೆ ಲಿಂಗಸ್ಥಲದ ತೋರಿದಾತ ಚನ್ನಬಸವಣ್ಣನು.
ಎನಗೆ ಜಂಗಮಸ್ಥಲವ ತೋರಿದಾತ ಸಿದ್ಧರಾಮಯ್ಯನು.
ಎನಗೆ ಪ್ರಸಾದಿಸ್ಥಲವ ತೋರಿದಾತ ಬಿಬ್ಬಬಾಚಯ್ಯನು.
ಎನಗೆ ಪ್ರಾಣಲಿಂಗಿಸ್ಥಲವ ತೋರಿದಾತ ಚಂದಯ್ಯನು.
ಎನಗೆ ಶರಣಸ್ಥಲವ ತೋರಿದಾತ ಸೊಡ್ಡಳ ಬಾಚರಸನು.
ಎನಗೆ ಐಕ್ಯಸ್ಥಲವ ತೋರಿದಾತ ಅಜಗಣ್ಣನು.
ಎನಗೆ ನಿಜಸ್ಥಲವ ತೋರಿದಾತ ಪ್ರಭುದೇವರು.
ಇಂತೀ ಸ್ಥಲಗಳ ಕಂಡು
ಏಳ್ನೂರೆಪ್ಪತ್ತು ಅಮರಗಣಂಗಳ ಶ್ರೀಪಾದಕ್ಕೆ ಶರಣೆಂದು
ಬದುಕಿದೆನು ಕಾಣಾ! ಅಭಿನವ ಮಲ್ಲಿಕಾರ್ಜುನಾ.

ಹನ್ನೆರಡನೇ ಶತಮಾನದ ಕರ್ನಾಟಕದ ಕಲ್ಯಾಣವು ಮಾನವಹಿತಸಾಧನೆಯ ಕಾರ್ಯಕ್ಷೇತ್ರವಾಗಿತ್ತು. ಬಸವಾದಿ ಶರಣರು ಮನುಕುಲೋದ್ಧಾರದ ಮಹಾಮಣಿಹದಲ್ಲಿ ತೊಡಗಿದ್ದರು. ಇದರ ಕೀರ್ತಿ ಎಲ್ಲ ಕಡೆ ಹಬ್ಬಿತು. ದೇಶದ ನಾನಾ ಕಡೆಯಿಂದ ಜನರು ಕಲ್ಯಾಣ ಪಟ್ಟಣಕ್ಕೆ ಬಂದು ಸೇರಿದರು. ಕಾಶ್ಮೀರದಿಂದ ಮಹದೇವ ಭೂಪಾಲ, ಅಫಘಾನಿಸ್ತಾನದಿಂದ ಮರುಳ ಶಂಕರದೇವ. ಸೌರಾಷ್ಟ್ರದಿಂದ ಆದಯ್ಯ, ಮಾಳವ ದೇಶದಿಂದ ಕಕ್ಕಯ್ಯ ಬಂದರು.

ಕಕ್ಕಯ್ಯ ಚಂಡಾಲರಲ್ಲಿ ಒಂದು ಪಂಗಡವಾದ ಡೋಹರ ಪಂಗಡಕ್ಕೆ ಸೇರಿದವರು. ಚರ್ಮ ಹದ ಮಾಡುವುದು ಆತನ ವೃತ್ತಿ. ಆತ ಬಸವಣ್ಣನೇ ಮೊದಲಾದ ಶರಣರ ಆಚಾರ ವಿಚಾರಗಳಿಂದ ಪ್ರಭಾವಿತನಾದ. ಆತ ಲಿಂಗದೀಕ್ಷೆಯನ್ನು ಹೊಂದಿ ತನ್ನ ಆಚಾರ ಸಂಪನ್ನತೆಯಿಂದ ವೀರ ಮಹೇಶ್ವರನೆಂಬ ಅಗ್ಗಳಿಕೆಗೆ ಪಾತ್ರನಾದನು. ಬಸವಣ್ಣನವರು ಕಕ್ಕಯ್ಯನ ಬಗ್ಗೆ ವಿಶೇಷ ಗೌರವವನ್ನು ಹೊಂದಿದ್ದರು. ಕಕ್ಕಯ್ಯನ ಪ್ರಸಾದಕ್ಕಾಗಿ ಹಾತೊರೆದರು.

೯೮೬
ಎನ್ನ ಕಷ್ಟ ಕುಲದಲ್ಲಿ ಹುಟ್ಟಿದೆನೆಂಬ ಕರ್ಮವ ಕಳೆದು
ಮುಟ್ಟಿ ಪಾವನವ ಮಾಡಿ
ಕೊಟ್ಟನಯ್ಯಾ ಎನ್ನ ಕರಸ್ಥಲಕ್ಕೆ ಲಿಂಗವ!
ಆ ಲಿಂಗ ಬಂದು ಸೋಂಕಲೊಡನೆ
ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ!
ಎನ್ನ ತನುವಿನಲ್ಲಿ ಗುರುವ ನೆಲೆಗೊಳಿಸಿದ,
ಎನ್ನ ಮನದಲ್ಲಿ ಜಂಗಮವ ನೆಲೆಗೊಳಿಸಿದ,
ಎನ್ನ ಅರುಹಿನಲ್ಲಿ ಪ್ರಸಾದವ ನೆಲೆಗೊಳಿಸಿದ!
ಇಂತೀ ತ್ರಿವಿಧ ಸ್ಥಾನವ ಶುದ್ಧವ ಮಾಡಿ
ಚತುರ್ವಿಧಸಾರಾಯಸ್ಥಲವ ಸಂಬಂಧವ ಮಾಡಿದ
ಸಂಗನ ಬಸವಣ್ಣನ ಕರುಣದಿಂದ
ಪ್ರಭುದೇವರ ಶ್ರೀಪಾದವ ಕಂಡು ಬದುಕಿದೆನು ಕಾಣಾ!
ಅಭಿನವ ಮಲ್ಲಿಕಾರ್ಜುನಾ.

ಶರಣ ಕಕ್ಕಯ್ಯ ಇಷ್ಟಲಿಂಗನಿಷ್ಟ, ಆಚಾರ ಸಂಪನ್ನ, ಜೊತೆಗೆ ಆತ ಗಣಾಚಾರಿ. ಶಿವನಿಂದೆ ಕೇಳದ ನಿಷ್ಠೆ. ಲಿಂಗವನ್ನು ಕಲ್ಲೆಂದವನನ್ನು ಶಿಕ್ಷಿಸಲೂ ಆತ ಹಿಂಜರಿಯಲಿಲ್ಲ. ಕೀಳು ಕುಲದಲ್ಲಿ ಹುಟ್ಟಿದ ತನ್ನನ್ನು ದೀಕ್ಷೆಯ ಮೂಲಕ ಪಾವನ ಮಾಡಿದ್ದನ್ನು ಆತ ಕೃತಜ್ಞತೆಯಿಂದ ನೆನೆದಿದ್ದಾನೆ.

ಡೋಹರ ಕಕ್ಕಯ್ಯ ಅನುಭವ ಮಂಟಪದಲ್ಲಿ ಪಾಲ್ಗೊಂಡು ಶರಣರೊಡನಾಡಿ ಅನುಭಾವ ಸಂಪನ್ನನೆನಿಸಿದನು. ಆತನು ವಚನಗಳನ್ನು ರಚಿಸಿದ್ದಾನೆ. ಆತನ ಆರು ವಚನಗಳು ದೊರೆತಿವೆ.

ಗಣಾಚಾರಿಯಾದ ಕಕ್ಕಯ್ಯ ಕಲ್ಯಾಣಕ್ರಾಂತಿಯಲ್ಲಿ ವೀರೋಚಿತವಾದ ಪಾತ್ರವಹಿಸಿರುವುದುತಿಳಿಯುತ್ತದೆ. ಉಳವಿಯ ಕಡೆ ಹೊರಟ ಶರಣರ ರಕ್ಷಣೆಗಾಗಿ ಆತ ಹೋರಾಟ ನಡೆಸಿದನು. ಕಾತರವಳ್ಳ ಕಾಳಗದ ನಂತರ ವೈರಿಗಳನ್ನು ಬೇರೆಡೆ ಸೆಳೆದು ಬೆಳಗಾವಿಯ ಕಕ್ಕೇರಿಯ ಕಡೆ ತಿರುಗಿಸಿದನು.

ಕಕ್ಕೇರಿಯ ಬಳಿ ಆತ ಹೋರಾಡುತ್ತ ಹುತಾತ್ಮನಾದಂತೆ ತಿಳಿಯುತ್ತದೆ. ಆತನ ಹೆಸರಿನ ಬಾವಿ ಮತ್ತು ಕೆರೆ ಅಲ್ಲಿ ಇವೆ. ಆತನ ಸಮಾಧಿಯೂ ಕೂಡ ಅಲ್ಲೇ ಇದೆ. ಶರಣ ಉಳವಿಗಾಗಿ, ವಚನ ಸಾಹಿತ್ಯ ಸಂಪದದ ರಕ್ಷಣೆಗಾಗಿ ಹೋರಾಡಿ ಆತ್ಮಾರ್ಪಣೆ ಮಾಡಿದ ಹಿರಿಯ ಶರಣ ಡೋಹರ ಕಕ್ಕಯ್ಯ. ಕಕ್ಕಯ್ಯನ ಒಂದು ವಚನ :

ನೆನೆಯಲರಿಯೆ, ನಿರ್ಧರಿಸಲರಿಯೆ ಮನವಿಲ್ಲವಾಗಿ
ಭಾವಿಸಲರಿಯೆ ಬೆರಸಲರಿಯೆ ಭಾವ ನಿರ್ಭಾವವಾಯಿತ್ತಾಗಿ
ಧ್ಯಾನ ಮೌನವನರಿಯೆ ಧ್ಯಾನಾತೀತ ತಾನಾಯಿತ್ತಾಗಿ
ಜ್ಞಾನ ಜ್ಞೇಯಂಗಳೆಲ್ಲವ ಮಿರಿ
ಅಭಿನವ ಮಲ್ಲಿಕಾರ್ಜುನನಲ್ಲಿ ಪರಮ ಸುಖಿಯಾಗಿರ್ದೆ.

ಬಸವಾದಿ ಶರಣರ ವಿಶೇಷ ಗೌರವಕ್ಕೆ ಪಾತ್ರಾನಾದ ದಲಿತ ಶರಣ 'ಡೋಹಾರ' ಜಾತಿಗೆ ಸೇರಿದವನು. ಮಾಳವ ದೇಶದಿಂದ ಕಲ್ಯಾಣಕ್ಕೆ ಬಂದು ಶರಣನಾಗುತ್ತಾನೆ. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ಚೆನ್ನಬಸವಣ್ಣನ ಜೊತೆ ಉಳವಿಯತ್ತ ಸಾಗುತ್ತಾನೆ. ಕಕ್ಕೇರಿಯಲ್ಲಿ ಐಕ್ಯನಾಗುತ್ತಾನೆ. ಅಲ್ಲಿ ಈತನ ಹೆಸರಿನ ಕೆರೆ, ಬಾವಿ ಮತ್ತು ಸಮಾಧಿ ಇವೆ. ಕಾಲ-೧೧೩0. 'ಅಭಿನವ ಮಲ್ಲಿಕಾರ್ಜುನ' ಅಂಕಿತದಲ್ಲಿ ೬ ವಚನಗಳು ದೊರೆತಿವೆ. ಅವುಗಳಲ್ಲಿ ಬಸವಾದಿ ಶರಣರ ಕೃಪೆಯಿಂದ ತನ್ನ ಕಷ್ಟಕುಲ (ಕೀಳುಜಾತಿ) ಕರ್ಮವನ್ನು ಕಳೆದುಕೊಂಡು ಶರಣನಾದ ಪರಿಯನ್ನು ತಿಳಿಸುತ್ತಾನೆ. 'ಲಿಂಗ ಬಂದು ಸೋಂಕಲೊಡನೆ ಎನ್ನ ಸರ್ವಾಂಗದ ಅವಲೋಹವಳಿಯಿತ್ತಯ್ಯಾ' ಎಂಬ ಮಾತು ಹನ್ನೇರಡನೆಯ ಶತಮಾನದ ಸಾಮಾಜಿಕ ಕ್ರಾಂತಿಯ ಸ್ವರೂಪವನ್ನು ತೆರೆದುತೋರಿಸುತ್ತದೆ.

ಕೆಳವರ್ಗದಿಂದ ಬಂದ ತನ್ನ ಕುಲದ ಸೂತಕವನ್ನು ಬಸವಣ್ಣ ಇಷ್ಟಲಿಂಗ ವನ್ನು ಅನುಗ್ರಹಿಸುವ ಮೂಲಕ ಪರಿಹರಿಸಿದನೆಂದಿರುವನು.

೯೮೩
ಎನ್ನ ಕಷ್ಟಕುಲದ ಸೂತಕ
ನಿಮ್ಮ ಹಸ್ತ ಮುಟ್ಟಿದಲ್ಲಿ ಹೋಯಿತ್ತು!
ಶುಕ್ಲಶೋಣಿತದಿಂದಲಾದ ಸೂತಕ
ನಿಮ್ಮ ಮುಟ್ಟಲೊಡನೆ ಬಯಲಾಯಿತ್ತು!
ತಟ್ಟಿದ ಮುಟ್ಟಿದ ಸುಖಂಗಳನೆಲ್ಲವ
ಲಿಂಗಮುಖಕ್ಕೆ ಅರ್ಪಿಸಿದೆನಾಗಿ
ಎನ್ನ ಪಂಚೇಂದ್ರಿಯಂಗಳು ಬಯಲಾದುವು!
ಎನ್ನ ಅಂತರಂಗದಲ್ಲಿ ಜ್ಞಾನಜ್ಯೋತಿಯೆಡೆಗೊಂಡುದಾಗಿ
ಒಳಗೂ ಬಯಲಾಯಿತ್ತು!
ಸಂಸಾರ ಸಂಗದ ಅವಸ್ಥೆಯ ಮೀರಿದ ಕ್ರೀಯಲ್ಲಿ
ತರಹರವಾಯಿತ್ತಾಗಿ ಬಹಿರಂಗ ಬಯಲಾಯಿತ್ತು!
ಅಭಿನವ ಮಲ್ಲಿಕಾರ್ಜುನಾ,
ನಿಮ್ಮ ಮುಟ್ಟಿದ ಕಾರಣ ನಾನೂ ಬಯಲಾದೆ!

೯೮೪
[ಎನ್ನ ಕಷ್ಟ ] ಕುಲದಲ್ಲಿ ಹುಟ್ಟಿಸಿದೆಯಯ್ಯಾ, ಎಲೆ ಲಿಂಗ ತಂದೆ.
ಕೆಟ್ಟೆನಯ್ಯಾ, ನಿಮ್ಮ ಮುಟ್ಟಿ (ಯೂ ಮುಟ್ಟದಿ) ಹನೆಂದು
ಎನ್ನ ಕೈ ಮುಟ್ಟದಿರ್ದಡೆ ಮನ ಮುಟ್ಟಲಾಗದೆ?
ಅಭಿನವ ಮಲ್ಲಿಕಾರ್ಜುನಾ.


*
Previous ಅಂಬಿಗರ ಚೌಡಯ್ಯ ಮಾದಾರ ಚೆನ್ನಯ್ಯ Next