Previous ಅಮುಗೆ ರಾಯಮ್ಮ ಆದಯ್ಯ Next

ಅರಿವಿನ ಮಾರಿತಂದೆ

*
ಅಂಕಿತ: ಸದಾಶಿವ ಮೂರ್ತಿಲಿಂಗ

ಅಂಗದ ಮೇಲೆ ಲಿಂಗವಿಲ್ಲದೆ ವಿಭೂತಿ ರುದ್ರಾಕ್ಷಿಯ ಧರಿಸಲಾಗದು.
ಅದೆಂತೆಂದಡೆ:
ಸತಿಪುರುಷರಿಗೆ ಸಂಯೋಗವಲ್ಲದೆ,
ಅಂಗಹೀನಂಗೆ ಹಿಂಗದ ನವರಸವುಂಟೆ ಅಯ್ಯಾ?
ಇಂತೀ ಲಿಂಗಬಾಹ್ಯಂಗೆ ವಿಭೂತಿಯ ಪಟ್ಟವೆಂದು ಕಟ್ಟಿದ ಗುರು
ಕುಂಭೀಘೋರಕ್ಕೆ ಒಳಗು, ಸದಾಶಿವಮೂರ್ತಿಲಿಂಗಕ್ಕೆ ದೂರ.

'ಸದಾಶಿವ ಮೂರ್ತಿಲಿಂಗ' ಆಂಕಿತದಲ್ಲಿ ೩೦೯ ವಚನಗಳು ದೊರೆತಿವೆ. ಹೆಸರಿಗೆ ಸೇರಿದ ವಿಶೇಷಣದಂತೆ ಇಲ್ಲಿ 'ಅರಿವಿಗೆ' ಹೆಚ್ಚಿನ ಮಹತ್ವವನ್ನು ಕೊಡಲಾಗಿದೆ. ತತ್ವ ಪ್ರಧಾನವಾದ ಈತನ ವಚನಗಳಲ್ಲಿ ಗುರು-ಲಿ೦ಗ-ಜ೦ಗಮ-ಪ್ರಸಾದ, ಶೈವ-ವೀರಶೈವ ಕುರಿತ ಸಂಗತಿಗಳು ಚರ್ಚಿತವಾಗಿವೆ. ಹೆಚ್ಚಿನ ವಚನಗಳು ಬೆಡಗಿನ ಪರಿಭಾಷೆಯಲ್ಲಿವೆ.

ನಿಜಗುರುವಿನ ಇರವು ಹೇಗಿರಬೇಕೆಂದಡೆ:
ನಿರ್ಮಲ ಸುಚಿತ್ತನಾಗಿ ತನ್ನ ಸೋಂಕುವ
ಸುಖದುಃಖಗಳು ಬಂದಲ್ಲಿ ಆಗುಚೇಗೆಯನರಿಯದೆ,
ಫಲವ ಹೊತ್ತ ತರುವಿನಂತೆ, ಕೆಚ್ಚಲ ಕ್ಷೀರದಂತೆ, ಕಪಿತ್ಥದ ಪಳ ಘಟ್ಟಿಗೊಂಡಂತೆ.
ಹೊರಗಳ ಇರವು, ಒಳಗಳ ನಿಜ.
ಲೌಕಿಕಕ್ಕೆ ಗುರುವಾಗಿ ಪರಮಾರ್ಥಕ್ಕೆ ಸದ್ಗುರುವಾಗಿ
ಡುಂಡುಫಳದಂತೆ ಹೊರಗಳ ಬಿರುಬು, ಒಳಗಳ ಮಧುರಸಾರದಂತಿರಬೇಕು.
ಕರು[ಣಿ] ಕಾರುಣ್ಯಾಂಬುಧಿ ಸದ್ಗುರುವಿನ ಇರವು
ಸದಾಶಿವಮೂರ್ತಿಲಿಂಗವು ತಾನೆ.

ಇಷ್ಟಲಿಂಗ ಪ್ರಾಣಲಿಂಗವೆಂದು ಬೇರೊಂದು ಕಟ್ಟಳೆಯ ಮಾಡಬಹುದೆ ಅಯ್ಯಾ?
ಬೀಜವೊಡೆದು ಮೊಳೆ ತಲೆದೋರುವಂತೆ,
ಬೀಜಕ್ಕೂ ಅಂಕುರಕ್ಕೂ ಬಿನ್ನವುಂಟೆ ಅಯ್ಯಾ?
ಇಷ್ಟದ ಕುರುಹಿನಲ್ಲಿ ಚಿತ್ತ ನಿಂದು ಮಿಕ್ಕ ಗುಣಂಗಳನರಿಯಬೇಕು.
ಇದೆ ನಿಶ್ಚಯ ಸದಾಶಿವಮೂರ್ತಿಲಿಂಗವು ತಾನಾಗಿ.

ಪರಿವಿಡಿ (index)
*
Previous ಅಮುಗೆ ರಾಯಮ್ಮ ಆದಯ್ಯ Next