ಏಲೇಶ್ವರ ಕೇತಯ್ಯ

*
ಅಂಕಿತ: ಏಲೇಶ್ವರಲಿಂಗ
ಕಾಯಕ: ಬೇಸಾಯ

ಉಂಡವರ ನೋಡಿ, ತಮ್ಮ ಬಂಧುಗಳ ನೋಡಿ,
ಅವರು ಜಂಗಮವೆಂದು, ತನ್ನ ಸಂದೇಹದ ಕಟ್ಟಳೆಯವರೆಂದು ಮಾಡುವ
ಲಂದಣಿಗರ ಜಗಭಂಡರ ಒಡೆಯರ ಕಟ್ಟಳೆ,
ವ್ರತದಂಗದ ಸಂಗವಲ್ಲ, ಏಲೇಶ್ವರಲಿಂಗಕ್ಕೆ ದೂರ.

ಈತ ಕಲಬುರ್ಗಿ ಜಿಲ್ಲೆಯ ಏಲೇರಿ (ಏಲೇಶ್ವರ) ಗ್ರಾಮಕ್ಕೆ ಸೇರಿದವನು. ಹೆಂಡತಿ-ಸಾಯಿದೇವಿಯಮ್ಮ. ಕಾಲ-೧೧೬೬. ಕಾಯಕ-ಬೇಸಾಯ. 'ಆಚಾರ ತನುವಿಗಾಶ್ರಯ, ಅರಿವು ಮನಕಾಶ್ರಯ' ಎಂಬ ನೀತಿಯಿಂದ ಬಾಳಿದವ. 'ಏಲೇಶ್ವರಲಿಂಗ' ಅಂಕಿತದಲ್ಲಿ ೭೪ ವಚನಗಳು ದೊರೆತಿವೆ. ಎಲ್ಲವೂ ಹೆಚ್ಚಾಗಿ ವ್ರತ-ನೇಮ-ಶೀಲ-ಆಚಾರಗಳ ಮಹತಿಯನ್ನೇ ಹೇಳುತ್ತವೆ.

ಈತನ ಹೆಚ್ಚಿನ ವಚನಗಳಲ್ಲಿ ಕಟ್ಟಳೆ ನೇಮ, ವ್ರತ ಅಥವಾ ಆಚಾರಗಳ ಪ್ರಸ್ತಾಪ ವಿಶೇಷವಾಗಿ ಬಂದಿದೆ. ಶಿವಶರಣರನ್ನು ನೆನೆಯುತ್ತ ಅವರಲ್ಲಿ ತಾನು ಕಂಡುಕೊಂಡ ಶೀಲಾಧಾರವಾದ ವೈಶಿಷ್ಟ್ಯಗಳನ್ನು ಒಂದು ವಚನದಲ್ಲಿ ದಾಖಲಿಸಿರುವನು. ಇಷ್ಟಲಿಂಗ ಕೆಳಗೆ ಬಿದ್ದಲ್ಲಿ ಮತ್ತೆ ಎತ್ತಿಕೊಂಡು ಧರಿಸಬಾರದೆನ್ನುವನು. ಆವ ವ್ರತ ನೇಮವ ಹಿಡಿದರೂ ಅವು ಭಾವಶುದ್ಧವಾಗಿರಬೇಕೆಂದಿರುವನು

ಹೆಂಡತಿ, ಗಂಡನ ಒಡೆಯರೆಂದು ಕೂಡಿಕೊಂಡು
ಉಂಡೆಹೆನೆಂಬ ಜಗಭಂಡೆಯ ನೋಡಾ.
ಕೂಟಕ್ಕೆ ಪುರುಷನಾಗಿ ನೇಮಕ್ಕೆ ಒಡೆತನವುಂಟೆ?
ಇಂತೀ ಜಾರೆಯ ನೇಮ ಮೂತ್ರದ ದ್ವಾರಕ್ಕೆ ಈಡು.
ಇಂತೀ ಸಂಸಾರದ ಘಾತಕತನದ ವ್ರತ
ಮೀಸಲ ಶುನಕ ಮುಟ್ಟಿದಂತೆ
ಅದು ಏಲೇಶ್ವರಲಿಂಗಕ್ಕೆ ದೂರ.

ಪರಿವಿಡಿ (index)
*
Previousಏಕಾಂತ ರಾಮಿತಂದೆಆಯ್ದಕ್ಕಿ ಲಕ್ಕಮ್ಮNext
Guru Basava Vachana

Akkamahadevi Vachana

[1] From the book "Vachana", pub: Basava Samiti Bangalore 2012.