Back to Top
Previous ದುಗ್ಗಳೆ ನಗೆಯ ಮಾರಿತಂದೆ Next

ದೇಶಿಕೇಂದ್ರ ಸಂಗನಬಸವಯ್ಯ

*
ಅಂಕಿತ: ಗುರುನಿರಂಜನ ಚನ್ನಬಸವಲಿಂಗ
ಕಾಯಕ: ವಿರಕ್ತ ಪರಂಪರೆಗೆ ಸೇರಿದ ಚರಜಂಗಮ

೭೨೪
ಅಯ್ಯಾ, ನಿಮ್ಮ ಶರಣ ಜನನಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಗುರುವಿನ ಕರಪದ್ಮದಲ್ಲಿ ಜನಿಸಿಬಂದವನಾಗಿ.
ಅಯ್ಯಾ, ನಿಮ್ಮ ಶರಣ ಜಾತಿಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಅನಾದಿಸಂಸಿದ್ಧನಿರಂಜನ ಶಿವಾಂಶಿಕ ತಾನಾಗಿ.
ಅಯ್ಯಾ, ನಿಮ್ಮ ಶರಣ ರಜಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಮಂತ್ರಮೂರುತಿ ಪರಮಪವಿತ್ರ ತಾನಾಗಿ.
ಅಯ್ಯಾ, ನಿಮ್ಮ ಶರಣ ಉಚ್ಫಿಷ್ಟ ಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ, ಚರಣಜಲಶೇಷಸುಖಮಯನಾಗಿ.
ಅಯ್ಯಾ, ನಿಮ್ಮ ಶರಣ ಪ್ರೇತಸೂತಕವನರಿಯನಯ್ಯಾ ;
ಅದೇನು ಕಾರಣವೆಂದೊಡೆ,
ಗುರುನಿರಂಜನ ಚನ್ನಬಸವಲಿಂಗದಲ್ಲಿ ಲೀನವಾಗಿರ್ದನಾಗಿ.

ಈತನ ವೃತ್ತವೇನೂ ದೊರಕುವುದಿಲ್ಲ. 'ದೇಶಿಕೇಂದ್ರ' ಎಂದು ಕರೆದುಕೊಂಡಿರುವುದರಿಂದ ವಿರಕ್ತ ಪರಂಪರೆಗೆ ಸೇರಿದ ಚರಜಂಗಮನಾಗಿರಬೇಕು. ಸೊಲ್ಲಾಪುರದ ಸಮೀಪದ ಕರಜಿಗೆ ಈತನ ಸ್ಥಳವಾಗಿರಬೇಕು. ಕಾಲ ಸು.೧೭ನೇ ಶತಮಾನ. ಅಂಕಿತ- ನಿರಂಜನ ಚೆನ್ನ ಬಸವಲಿಂಗ' ಸದ್ಯ ೧೨೪೨ ವಚನಗಳು ದೊರೆತಿವೆ. 'ಷಟ್ ಸ್ಥಲ ವಚನಗಳು' ಎಂಬ ಶೀರ್ಷಿಕೆಯ ಅಡಿಯಲ್ಲಿ ಅವುಗಳನ್ನು ಸಂಕಲಿಸಲಾಗಿದೆ. ಒಟ್ಟು ೫೩ ಸ್ಥಲಗಳನ್ನು ಇಲ್ಲಿ ಕಲ್ಪಿಸಲಾಗಿದೆ. ಕೆಲವು ಇದುವರೆಗೆ ಹೆಸರಿಸದೇ ಇರುವ ನೂತನ ಸ್ಥಲಗಳಾಗಿರುವುದು ವಿಶೇಷವೆನಿಸಿದೆ.

೮೬೭
ಅಯ್ಯಾ, ನಿಮ್ಮ ಶರಣರ ವೇಷವ ಹೊತ್ತು ನಡೆವರಯ್ಯಾ ಈ ಧರೆಯೊಳಗೆ,
ನಾವು ನಿಜೈಕ್ಯರೆಂದು ನುಡಿದುಕೊಂಬುವರಯ್ಯಾ ವಾಕ್ಪಟುತ್ವವನೆತ್ತಿ.
ಅಗಮ್ಯಜ್ಞಾನಿಗಳೆಂದು ಮೌನಗೊಂಡಿಪ್ಪರಯ್ಯಾ
ಮಲತ್ರಯದಲ್ಲಿ ಮನವ ಹುದುಗಿಸಿ.
ಇಂಥಿಾ ಗುಪ್ತಪಾತಕ ಅಜ್ಞಾನಿಗಳಿಗೆ ಕುಂಭಿನಿ ನಾಯಕನರಕ ತಪ್ಪದು ಕಾಣಾ,
ಗುರುನಿರಂಜನ ಚನ್ನಬಸವಲಿಂಗಾ.

೮೫೭
ಬಸವಣ್ಣ ಎನ್ನ ತಂದೆಯಾಗಿ ಬಂದನಯ್ಯಾ,
ಚನ್ನಬಸವಣ್ಣ ಎನ್ನಜ್ಜನಾಗಿ ಬಂದನಯ್ಯಾ,
ಪ್ರಭುದೇವರು ಎನ್ನ ಮುತ್ತಯ್ಯನಾಗಿ ಬಂದನಯ್ಯಾ,
ಈ ಮೂವರ ಮುಂದಣಾಭರಣ ಹೊದಿದುಕೊಂಡು
ಗುರುನಿರಂಜನ ಚನ್ನಬಸವಲಿಂಗದೊಳಡಗಿರ್ದೆನಯ್ಯಾ.

೮೫೮
ಬಸವಣ್ಣನ ಮುಖದಿಂದೆ ಅಸಂಖ್ಯಾತ ಪ್ರಮಥರ ಕಂಡೆನಯ್ಯಾ,
ಚನ್ನ ಬಸವಣ್ಣನ ಮುಖದಿಂದೆ ಗಣಸನ್ನಿಹಿತಮಹಾನುಭಾವಸುಖಿಯಾದೆನಯ್ಯಾ.
ಪ್ರಭುವಿನ ಮುಖದಿಂದೆ ಮಹದಾನಂದಪರಿಣಾಮಿಯಾಗಿರ್ದೆನಯ್ಯಾ.
ಈ ತ್ರಿವಿಧವನೊಡಗೂಡಿ ಗುರುನಿರಂಜನ ಚನ್ನಬಸವಲಿಂಗ
ಶರಣೆಂದು ನಿಮ್ಮೊಳಗಾದೆನಯ್ಯಾ.


*
Previous ದುಗ್ಗಳೆ ನಗೆಯ ಮಾರಿತಂದೆ Next