Previous ಬಾಲಸಂಗಣ್ಣ ಬಿಬ್ಬಿ ಬಾಚಯ್ಯ Next

ಬಾಹೂರ ಬೊಮ್ಮಣ್ಣ

*
ಅಂಕಿತ: ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗ'
ಕಾಯಕ: ತೋಟಗಾರಿಕೆ

ಬಾಯಿ ಮುಚ್ಚಿ ನಾಸಿಕದಲ್ಲಿ ಉಣಬಹುದೆ ?
ನಾಸಿಕವ ಮುಚ್ಚಿ ಬಾಯಲ್ಲಿ ವಾಸಿಸಬಹುದೆ ?
ಕಣ್ಣು ಮುಚ್ಚಿ ಕಿವಿಯಲ್ಲಿ ನೋಡಬಹುದೆ ?
ಕಿವಿಯ ಮುಚ್ಚಿ ಕಣ್ಣಿನಲ್ಲಿ ಕೇಳಬಹುದೆ ?
ಇಂತೀ ಇವಕೆ ಆತ್ಮ ಒಂದೆಂದಡೆ
ತಮ್ಮ ತಮ್ಮ ಸ್ವಸ್ಥಾನಂಗಳಲ್ಲಿ ಅಲ್ಲದೆ ದೃಷ್ಟವ ಕಾಣಬಾರದು.
ಆವ ಸ್ಥಲ ನೆಮ್ಮಿದಡೂ ಆ ಸ್ಥಲಕ್ಕೆ ವಿಶ್ವಾಸಬೇಕು.
ಇದು ಸಂಗನಬಸವಣ್ಣನ ಭಕ್ತಿ
ಬ್ರಹ್ಮೇಶ್ವರ ಲಿಂಗವನರಿವುದಕ್ಕೆ ಇಕ್ಕಿದ ಭಿತ್ತಿ. /೨೭೦ [1]

ಬಿಜಾಪುರ ಜೆಲ್ಲೆಯ ಮುದ್ದೇಬೀಹಾಳ ತಾಲೂಕಿ ಸೇರಿದ ಬಾಹೂರು ಈತನ ಸ್ಥಳ. ಕಾಲ-೧೧೬೦. ಕಾಯಕ-ತೋಟಗಾರಿಕೆ 'ಸಂಗನಬಸವಣ್ಣ ಸಾಕ್ಷಿಯಾಗಿ ಬ್ರಹ್ಮೇಶ್ವರಲಿಂಗ' ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ದೊರೆತ ೪೧ ವಚನಗಳಲ್ಲಿ ಷಟ್-ಸ್ಥಲ ತತ್ವಗಳ ನಿರೂಪಣೆಯಿದೆ. ಎಲ್ಲ ವಚನಗಳಲ್ಲಿ ಬಸವಣ್ಣನ ಹೆಸರು ಒಂದಿಲ್ಲೊಂದು ರೀತಿಯಲ್ಲಿ ಕಾಣಿಸಿಕೊಂಡುದು ವಿಶೇಷ.

ವಿಶ್ವಾಸವಿಲ್ಲದವಂಗೆ ಭಕ್ತಸ್ಥಲವಿಲ್ಲ, ಗುರು ಭಕ್ತನಲ್ಲ.
ವಿಶ್ವಾಸವಿಲ್ಲದವಂಗೆ ಮಾಹೇಶ್ವರಸ್ಥಲವಿಲ್ಲ, ಲಿಂಗ ಭಕ್ತನಲ್ಲ.
ವಿಶ್ವಾಸವಿಲ್ಲದವಂಗೆ ಪ್ರಸಾದಿಸ್ಥಲವಿಲ್ಲ, ಜಂಗಮ ಭಕ್ತನಲ್ಲ.
ವಿಶ್ವಾಸವಿಲ್ಲದವಂಗೆ ಪ್ರಾಣಲಿಂಗಿಸ್ಥಲವಿಲ್ಲ, ಸರ್ವ ವ್ಯವಧ್ಯಾನಿಯಲ್ಲ.
ವಿಶ್ವಾಸವಿಲ್ಲದವಂಗೆ ಶರಣಸ್ಥಲವಿಲ್ಲ, ಆರೂಢಭಾವಿಯಲ್ಲ.
ವಿಶ್ವಾಸವಿಲ್ಲದವಂಗೆ ಐಕ್ಯಸ್ಥಲವಿಲ್ಲ, ಸರ್ವಲೇಪನಲ್ಲ.
ಇಂತೀ ಷಟ್ಸ್ಥಲಸಂಬಂಧ.
ಗುರುವಿನಲ್ಲಿ ಶ್ರದ್ಧೆ, ಲಿಂಗದಲ್ಲಿ ಅಭಿನ್ನನಲ್ಲದೆ
ಜಂಗಮದಲ್ಲಿ ಮನೋಮೂರ್ತಿಯಾಗಿಪ್ಪುದೆ
ಸರ್ವಾಂಗಲಿಂಗಸಂಬಂಧದ ಇರವು
ಸಂಗನಬಸವಣ್ಣಪ್ರಿಯ ಬ್ರಹ್ಮೇಶ್ವರಲಿಂಗದಲ್ಲಿ. /೨೮೪ [1]

ಷಟ್-ಸ್ಥಲಗಳ ಸರಳವಾದ ನಿರೂಪಣೆ ಇದೆ. ಬಸವಣ್ಣನಿಗೆ ಸಂಬಂಧಿಸಿದ ಕೆಲವು ಪವಾಡಗಳನ್ನು ಉಲ್ಲೇಖಿಸಿರುವನು. ವೃತ್ತಿಧರ್ಮ ಹಾಗೂ ಇವನ ಅಭಿವ್ಯಕ್ತಿಯಲ್ಲಿನ ಮಾತುಗಾರಿಕೆಯ ಶಕ್ತಿ ಇವೆರಡನ್ನೂ ಗಮನಿಸಿದಾಗ ಆಶ್ಚರ್ಯವಾಗುತ್ತದೆ.

ಅಪರಾಧವ ಮಾಡಿದ ಭಟ ಅರಸಿಂಗೆ ಸಜ್ಜನನಪ್ಪನೆ ?
ವ್ರತಭ್ರಷ್ಟ, ನೇಮಕ್ಕೆ ಹಾನಿಯಾದವ.
ನಿತ್ಯಕೃತ್ಯವೆಂದು ಹಿಡಿದು ಬಿಟ್ಟವ.
ತ್ರಿವಿಧಮಲವನೊಲ್ಲೆನೆಂದು ತೊಟ್ಟವ.
ಇಂತೀ ಕಷ್ಟಗುಣದಲ್ಲಿ ನಡೆವ ದೃಷ್ಟಗಳ್ಳರ ನೋಡಾ.
ಇದು ಬಾಯೊಳಗಣ ಹುಣ್ಣು ಹೇವರಿಸಿದ ಮತ್ತೆ
ಇನ್ನಾವ ಠಾವಿನಲ್ಲಿ ನುಂಗುವ ?
ಈ ಹೇಹ[ಯ]ವ ಬಿಡಿಸಾ ಎನಗೆ ಸಂಗನಬಸವಣ್ಣಾ.
ಬ್ರಹ್ಮೇಶ್ವರಲಿಂಗವಿಪ್ಪ ಠಾವ ತೋರಾ. /೨೫೧ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಬಾಲಸಂಗಣ್ಣ ಬಿಬ್ಬಿ ಬಾಚಯ್ಯ Next