Previous ಮನಸಂದ ಮಾರಿತಂದೆ ಮರುಳಶಂಕರದೇವ Next

ಮನುಮುನಿ ಗುಮ್ಮಟದೇವ

*
ಅಂಕಿತ: ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ
ಕಾಯಕ: ಮೀಮಾಂಸಕ

ಆತುರ ಹಿಂಗದವಂಗೆ ವೇಶೆಯ ಪೋಷಿಸಲೇಕೆ ?
ಈಶ್ವರನನರಿಯದವಂಗೆ ಸುಕೃತದ ಪೂಜೆಯ ಪುಣ್ಯವದೇಕೆ ?
ಹೇಳಿ ಹೊಕ್ಕು ಹೋದ ಮತ್ತೆ ವೇಷದ ಒಲವರವೇಕೆ ?
ಭವವಿರೋಧಿಯ ಭಾವದಲ್ಲಿ ನೆಲಸಿದ ಮತ್ತೆ,
ಇದಿರಿಂಗೆ ಸಂಪದಪದವೇಕೆ ?
ಒಡಗೂಡಿದಲ್ಲಿ ಅಂಗದ ತೊಡಕೇಕೆ ?
ಬಿಡು, ಶುಕ್ಲದ ಗುಡಿಯ ಸುಡು.
ಗುಮ್ಮಟನೆಂಬ ನಾಮವ ಅಡಗು,
ಅಗಮ್ಯೇಶ್ವರಲಿಂಗದಲ್ಲಿ ಗುಪ್ತನಾಗಿ, ಒಡಗೂಡಿ ಲೇಪಾಂಗವಾಗಿರು./೧೦೮೫ [1]

ಈತ ಮೂಲತ: ಜೈನಧರ್ಮೀಯನಾಗಿದ್ದು, ಅನಂತರ ಶರಣಧರ್ಮ ಸ್ವೀಕರಿಸಿದಂತೆ ತಿಳಿದುಬರುತ್ತದೆ. ಕಾಲ-೧೧೬೦. 'ಗೂಡಿನ ಗುಮ್ಮಟನೊಡೆಯ ಆಗಮ್ಯೇಶ್ವರಲಿಂಗ' ಅಂಕಿತದಲ್ಲಿ ೯೯ ವಚನಗಳು ದೊರೆತಿವ. ಇವುಗಳನ್ನು ಎಲ್ಲ ಪುರಾನತರ ವಚನಕಟ್ಟುಗಳಲ್ಲಿ ಆತ್ಮನರಿವು ಭಾವಸ್ಥಲ, ಆತ್ಮ ಐಕ್ಯನಸ್ಥಲ, ಪಿಂಡಜ್ಞಾನಸಂಬಂಧ ಎಂಬ ಸ್ಥಲಗಳ ಅಡಿಯಲ್ಲಿ ಜೋಡಿಸಲಾಗಿದೆ. ಷಟ್ಸ್ಥಲ ತತ್ವ, ಏಕದೇವೋಪಾಸನೆ, ಪರಮತ ದೂಷಣೆ, ಜೀವದಯಾಭಾವ ಇವುಗಳಲ್ಲಿ ವಿಶೇಷವಾಗಿ ನಿರೂಪಿತವಾಗಿದೆ. ಬೆಡಗಿನ ಪರಿಭಾಷೆಯಿದ್ದರೂ ಕೆಲವು ವಚನಗಳು ಸುಂದರವಾಗಿವೆ.

ಕಂಗಳ ಸೂತಕ ಹಿಂಗಿಯಲ್ಲದೆ ಭಕ್ತನಾಗಬಾರದು.
ಕಾಯದ ಸೂತಕ ಹಿಂಗಿಯಲ್ಲದೆ ಮಾಹೇಶ್ವರನಾಗಬಾರದು.
ಮನದ ಸೂತಕ ಹಿಂಗಿಯಲ್ಲದೆ ಪ್ರಸಾದಿಯಾಗಬಾರದು.
ಜ್ಞಾನದ ಸೂತಕ ಹಿಂಗಿಯಲ್ಲದೆ ಪ್ರಾಣಲಿಂಗಿಯಾಗಬಾರದು.
ತೋರಿ ಅಡಗುವ ಭ್ರಾಂತು ಹಿಂಗಿಯಲ್ಲದೆ ಶರಣನಲ್ಲ, ಐಕ್ಯನಲ್ಲ.
ಆರಡಗಿ ಮೂರರಲ್ಲಿ ಮುಗ್ಧನಾಗಿ,
ಮೀರಿ ಕಾಬುದಕ್ಕೆ ಏನೂ ಇಲ್ಲದೆ, ಅದು ತಾನೆ ಯೋಗಲಿಂಗಾಂಗ,
ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ ಐಕ್ಯವಾದ ಶರಣಂಗೆ. /೧೦೩೦ [1]

ಬಿಜ್ಜಳನಿಗೆ ಧರ್ಮ ಬೋಧಿಸಿದ ಮೀಮಾಂಸಕನೆಂದೂ, ಜಿನನೇಮ ಗುಣನಾಮ ಬೋಧಿಸಿದ ಬೌದ್ಧ ಅವತಾರಕ್ಕೆ ಮುಖ್ಯ ಆಚಾರ್ಯನೆಂದೂ ತನ್ನನ್ನು ತಾನು ಕರೆದುಕೊಂಡಿರುವುದು ವಿಶೇಷ. ಈತನ ವಚನಗಳಲ್ಲಿ ಭಕ್ತಿಸ್ಥಲ ಐಕ್ಯಸ್ಥಲಗಳಿಗೆ ಸಂಬಂಧಿಸಿದ ವಿವೇಚನೆಯೇ ಹೆಚ್ಚಾಗಿ ಕಂಡು ಬರುತ್ತದೆ. ದಯವೇ ಧರ್ಮದ ಮೂಲ, ಏಕದೇವೋಪಾಸನೆ, ಪರಮತ ದೂಷಣೆಯಂಥ ಸಂಗತಿಗಳನ್ನೂ ಇಲ್ಲಿ ವಿವರಿಸಲಾಗಿದೆ.

ಹಾದಿಯ ತೋರಿದವರೆಲ್ಲರು
ಭಯಕ್ಕೆ ನಿರ್ಭಯವಂತರಾಗಬಲ್ಲರೆ ?
ವೇದ ಶಾಸ್ತ್ರ ಪುರಾಣ ಆಗಮಂಗಳ ಹೇಳುವರೆಲ್ಲರು
ವೇದಿಸಬಲ್ಲರೆ ನಿಜತತ್ವವ ?
ಹಂದಿಯ ಶೃಂಗಾರ, ಪೂಷನ ಕಠಿಣದಂದ,
ಅರಿವಿಲ್ಲದವನ ಸಂಗ, ಇಂತಿವರ ಬಿಡುಮುಡಿಯನರಿ.
ಗುಡಿಯ ಗುಮ್ಮಟನಾಥನ ಒಡೆಯ ಅಗಮ್ಯೇಶ್ವರಲಿಂಗದಲ್ಲಿ,
ಎಡೆಬಿಡುವಿಲ್ಲದೆ ಒಡಗೂಡು. /೧೦೨೯ [1]

ಸಂಸಾರದಲ್ಲಿ ತೋರುವ ಸುಖದುಃಖಭೋಗಾದಿಭೋಗಂಗಳು
ಇವಾರಿಂದಾದವೆಂದು ಅರಿದ ಮತ್ತೆ, ಬಾಗಿಲ ಕಾಯ್ದು ಕೂಗಿಡಲೇಕೆ ?
ಎಲೆ ಅಲ್ಲಾಡದು, ಅವನಾಧೀನವಲ್ಲದಿಲ್ಲಾ ಎಂದು
ಎಲ್ಲರಿಗೆ ಹೇಳುತ ಭವಬಡಲೇಕೆ ?
ಹೋಯಿತ್ತು ಬಾಗಿಲಿಗೆ ಬಂದಾಗ ಭಾವಜ್ಞಾನ.
ಭಾವ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ
ಅರಿದು, ಹರಿದು ಬದುಕಿರಣ್ಣಾ. /೧೦೬೮ [1]

[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)

ಪರಿವಿಡಿ (index)
*
Previous ಮನಸಂದ ಮಾರಿತಂದೆ ಮರುಳಶಂಕರದೇವ Next