*
ಅಂಕಿತ: |
ಬಸವಣ್ಣಪ್ರಿಯ ನಾಗರೇಶ್ವರಲಿಂಗ |
ಕಾಯಕ: |
ಬೊಕ್ಕಸದ ಅಧಿಕಾರಿ |
ಅಂಗದ ಬೊಕ್ಕಸದ ಮಂದಿರಕ್ಕೆ
ಚಿದ್ಘನಲಿಂಗವೆಂಬುದೊಂದು ಬೀಗ.
ತ್ರಿಗುಣವೆಂಬ ಮೂರೆಸಳಿನ ಸಿಕ್ಕು.
ಒಂದು ಪೂರ್ವಗತಿ, ಒಂದು ಮಧ್ಯಗತಿ,
ಒಂದು ಉತ್ತರಗತಿಯಾಗಿ ಸಿಕ್ಕಿದವು ಮೂರೆಸಳು.
ಆ ಎಸಳಿಗೆ ಘಟ ಒಂದೆ ಒಡಲು.
ಎಸಳ ತೆಗವುದಕ್ಕೆ ಕೈಯ ಕಾಣೆ.
ಪ್ರತಿ ಕೈಗೆ ಎಸಳು ಅಸಾಧ್ಯ ನೋಡಾ.
ಇಂತೀ ಬೀಗದ ಗುಣವ
ಬಸವಣ್ಣಪ್ರಿಯ ನಾಗರೇಶ್ವರಲಿಂಗಾ ನೀವೇ ಬಲ್ಲಿರಿ./೩೯೩ [1]
ಈತ ಕಲ್ಯಾಣದಲ್ಲಿ ಬಿಜ್ಜಳನ ಬೊಕ್ಕಸದ ಅಧಿಕಾರಿಯಾಗಿದ್ದ. ಕಾಲ-೧೧೬೦. 'ಬಸವಣ್ಣಪ್ರಿಯ ನಾಗರೇಶ್ವರಲಿಂಗ' ಅಂಕಿತದಲ್ಲಿ ಬರೆದ ೧೦ ವಚನಗಳು ದೊರೆತಿವೆ. ತನ್ನ ವೃತ್ತಿ ವಿವೇಚನೆ ಮಾಡುತ್ತಾನೆ. ಇಷ್ಟಲಿಂಗ, ಪ್ರಾಣಲಿಂಗಗಳ ಅಭೇದತ್ವ, ಕಾಯಕದ ಮಹತ್ವವನ್ನು ಕೆಲವು ವಚನಗಳಲ್ಲಿ ತಿಳಿಸುತ್ತ ಕಾಯಕದಲ್ಲಿಯೇ ಶಿವನನ್ನು, ಶಿವಜ್ಞಾನವನ್ನು ಕಾಣಬೇಕು ಎಂದು ಹೇಳುತ್ತಾನೆ.
ಎಲ್ಲರ ಪರಿಯಲ್ಲ ಎನ್ನ ಊಳಿಗ.
ಬಸವಣ್ಣ ಚೆನ್ನಬಸವಣ್ಣ ಕೊಟ್ಟ ಕಾಯಕ
ಸತ್ಕ್ರೀಯೆಂಬ ಅರಸಿಯ ಅಪಮಾನಕ್ಕೆ,
ಲೌಕಿಕಕ್ಕೆ, ಬೊಕ್ಕಸದ ಭಂಡಾರಕ್ಕೆ.
ಈ ವರ್ತಕ ಶುದ್ಧವಾದ ಮತ್ತೆ
ಒಳಗಣ ಮುತ್ತು, ಬೆಳಗುವ ರತ್ನ, ಥಳಥಳಿಸುವ ವಜ್ರ.
ಈ ಕಾಯಕದ ಹೊಲಬ ಕೊಟ್ಟ ಮತ್ತೆ
ಕಳವಿನಿಸಿಲ್ಲದಿರಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿಯಬಲ್ಲಡೆ./೩೯೬ [1]
ವಚನಗಳಲ್ಲಿ ಬೊಕ್ಕಸವನ್ನೇ ಪ್ರತಿಮೆ ರೂಪಕಗಳಾಗಿ ಬಳಸಿರುವನು. ಕಾಯಕದಿಂದ ಶಿವಜ್ಞಾನವನ್ನೂ, ಶಿವನನ್ನೂ ತಿಳಿಯಲು ಸಾಧ್ಯವೆನ್ನುವನು. ತನ್ನ ಕಾಯಕ ಬಸವಣ್ಣ ಚನ್ನಬಸವಣ್ಣ ಕೊಟ್ಟದ್ದು ಎಂದಿರುವನು. ಶೀತವುಳ್ಳನ್ನಕ್ಕ ಉಷ್ಣವ ಪ್ರತಿಪಾದಿಸಬೇಕು. ಉಷ್ಣವುಳ್ಳನ್ನಕ್ಕ ಶೀತವ ಪ್ರತಿಪಾದಿಸಬೇಕು ಎನ್ನುವ ಅವನ ವ್ಯಾವಹಾರಿಕ ಗುಣ ಮೆಚ್ಚುವಂತಹುದು.
ಗುರುವಾದಡೆ ಭೃತ್ಯರ ಚಿತ್ತವನರಿಯಬೇಕು.
ಲಿಂಗವಾದಡೆ ಅರ್ಚಕನ ಚಿತ್ತದಲ್ಲಿ ಅಚ್ಚೊತ್ತಿದಂತಿರಬೇಕು.
ಜಂಗಮವಾದಡೆ ಉತ್ಪತ್ತಿ ಸ್ಥಿತಿ ಲಯದ
ಗೊತ್ತ ಮೆಟ್ಟದೆ ನಿಶ್ಚಿಂತನಾಗಿರಬೇಕು.
ಇಂತೀ ತ್ರಿವಿಧಲಿಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ,
ತ್ರಿವಿಧಾಂಗ ತ್ರಿವಿಧಾರ್ಪಣಕ್ಕೆ ಒಳಗಾಗಿ,
ತ್ರಿವಿಧಾಂಗ ತ್ರಿವಿಧಮಲಕ್ಕೆ ಹೊರಗಾಗಿ,
ತ್ರಿವಿಧಾತ್ಮ ತ್ರಿವಿಧ ಅರಿವಿನಲ್ಲಿ ಕರಿಗೊಂಡು,
ವಿಶ್ವಾಸಕ್ಕೆ ಎಡದೆರಪಿಲ್ಲದೆ ತನ್ಮಯಮೂರ್ತಿ ತಾನಾದ ನಿಜೈಕ್ಯಂಗೆ
ರಾಗ ವಿರಾಗವಿಲ್ಲ, ಪುಣ್ಯ ಪಾಪವಿಲ್ಲ, ಕರ್ಮ ನಿಃಕರ್ಮವಿಲ್ಲ.
ಇಂತೀ ಭಿನ್ನಭಾವನಲ್ಲ,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿದ ಶರಣ. /೩೯೯ [1]
[1] ಈ ತರಹದ ಸಂಖ್ಯೆಯ ವಿವರ: ಸವಸ-5/80 :- ಸಮಗ್ರ ವಚನ ಸಂಪುಟ -5, ವಚನ ಸಂಖ್ಯೆ-80 (೧೫ ಸಮಗ್ರ ವಚನ ಸಂಪುಟಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು)
*