*
ಅಂಕಿತ:
|
ಗೋಪತಿನಾಥ ವಿಶ್ವೇಶ್ವರಲಿಂಗ
|
ಕಾಯಕ:
|
ಪಶುಪಾಲಕ
|
೧೦೨೫
ಬಂದಿತ್ತು ದಿನ ಬಸವಣ್ಣ ಕಲ್ಲಿಗೆ
ಚನ್ನಬಸವಣ್ಣ ಉಳುವೆಯಲ್ಲಿಗೆ
ಪ್ರಭು ಅಕ್ಕ ಕದಳಿದ್ವಾರಕ್ಕೆ
ಮಿಕ್ಕಾದ ಪ್ರಮಥರೆಲ್ಲರೂ ತಮ್ಮ ಲಕ್ಷ್ಯಕ್ಕೆ
ನಾ ತುರುವಿನ ಬೆಂಬಳಿಯಲ್ಲಿ ಹೋದ ಮರೆಯಲ್ಲಿ
ಅಡಗಿಹರೆಲ್ಲರು ಅಡಗಿದುದ ಕೇಳಿ ನಾ
ಗೋಪತಿನಾಥ ವಿಶ್ವೇಶ್ವರಲಿಂಗದಲ್ಲಿಯೆ ಉಡುಗುವೆನು
ಶಿವಭಕ್ತರ ಮನೆಯ ಗೋವುಗಳನ್ನು ಕಾಯುವ ಕಾಯಕವನ್ನು ಕೈಕೊಂಡ ಈತನ ಕಾಲ ೧೧೬೦ 'ಗೋಪತಿನಾಥ ವಿಶ್ವೇಶ್ವರಲಿಂಗ'
ಅಂಕಿತದಲ್ಲಿ ರಚಿಸಿದ ೪೬ ವಚನಗಳು ದೊರೆತಿವೆ. ತನ್ನ ವೃತ್ತಿ ವಲಯದ ಅನುಭವವನ್ನು ಆಧ್ಯಾತ್ಮಾನುಭವದ
ಜೊತೆ ಸಮೀಕರಿಸಿ ಹೇಳಿದ ರೀತಿ ತುಂಬ ಅರ್ಥಪೂರ್ಣವೆನಿಸಿದೆ. ಕೆಲವು ಬೆಡಗಿನ ವಚನಗಳಲ್ಲಿ ತಾತ್ವಿಕ
ವಿವೇಚನೆಯಿದೆ. ಕಲ್ಯಾಣ ಕ್ರಾಂತಿಯ ನಂತರ ಬಸವಣ್ಣ, ಚೆನ್ನಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ ಮತ್ತು
ಇತರ ಶರಣರು ಎಲ್ಲಿ ಹೋಗಿ ಐಕ್ಯರಾದರು ಎಂಬುದನ್ನು ತಿಳಿಸುವ ವಚನ ಐತಿಹಾಸಿಕ ಮಹತ್ವವನ್ನು ಪಡಿದಿದೆ.
೧೦೦೦
ಆತ್ಮಂಗೆ ಕಾಯವೆ ರೂಪು.
ಆ ಕಾಯಕ್ಕೆ ಆತ್ಮನೆ ಹಾಹೆ.
ಆ ಹಾಹೆಗೆ ಅರಿವೇ ಬೀಜ.
ಆ ಬೀಜಕ್ಕೆ ಗೋಪತಿನಾಥ ವಿಶ್ವೇಶ್ವರಲಿಂಗವೆ ನಿರ್ವಿಜ.
ಕಾಯಕದ ಪರಿಭಾಷೆಯಲ್ಲಿ ಅಧ್ಯಾತ್ಮ ಬೋಧೆ ಮಾಡಿರುವನು. ಹಾಗೆಯೇ ತನ್ನ ಕಾಯಕದ ಬಗೆಗೂ ಹೇಳಿಕೊಂಡಿರುವನು.
ಬಸವಣ್ಣ, ಚೆನ್ನಬಸವಣ್ಣ, ಅಲ್ಲಮ, ಅಕ್ಕಮಹಾದೇವಿ - ಇವರು ಬಯಲಾದ ವಿವರ ನೀಡಿರುವನು.
೧೦೩೨
ಶ್ರೀಗುರುವಿನ ಸಂದರ್ಶನಕ್ಕೆ ಹೋದಲ್ಲಿ
ಮೂರ್ತಿಧ್ಯಾನದಿಂದ ಮಹಾಪ್ರಸಂಗವ
ಮಹಾಪ್ರಸಾದವೆಂದು ಕೈಕೊಂಡು,
ಆ ಗುಣ ಗುರುಭಕ್ತಿ ಸಾಧನ,
ಶಿವಲಿಂಗ ಪೂಜೆಯ ಮಾಡುವಲ್ಲಿ
ಪರಾಕು ಪರಿಭ್ರಮಣ ಪ್ರಕೃತಿಭಾವ
ಪಗುಡಿ ಪರಿಹಾಸಕರ ವಾಗ್ವಾದಿಗಳ ಕೂಡದೆ
ಕಂಗಳಲ್ಲಿ ಹೆರೆಹಿಂಗದೆ,
ಭಾವದಲ್ಲಿ ಬೈಚಿಟ್ಟುಕೊಂಡು
ಹೆರೆಹಿಂಗದಿರವು ಶಿವಲಿಂಗಪೂಜಕನ ಭಾವ
ಜಂಗಮ ಸೇವೆಯ ಮಾಡುವಲ್ಲಿ
ಇಷ್ಟ ಕಾಮ್ಯ ಮೋಕ್ಷಂಗಳನರಿತು
ಆಶನ ವಿಷಯ ರೋಷ ಆಸಕರನರಿತು
ವರ್ಮಕ್ಕೆ ವರ್ಮ, ಧರ್ಮಕ್ಕೆ ಮುಕ್ತಿ,
ವೈಭವಕ್ಕೆ ಖ್ಯಾತಿ ಲಾಭಂಗಳನರಿತು
ಮಾಡಿದ ದ್ರವ್ಯ ಕೇಡಿಲ್ಲದಂತೆ ಅಡಗಿಪ್ಪುದು ಜಂಗಮಭಕ್ತಿ;
ಇಂತೀ ತ್ರಿವಿಧಭಕ್ತಿಯಲ್ಲಿ ನಿರತ ಸ್ವಯ ಸನ್ನದ್ಧನಾಗಿಪ್ಪ
ಭಕ್ತನ ಪಾದದ್ವಯವೆ, ಗೋಪತಿನಾಥ ವಿಶ್ವೇಶ್ವರಲಿಂಗವಿಪ್ಪ ಸಜ್ಜಾಗೃಹ.
*