Previous ವೀರಗೊಲ್ಲಾಳ ಶಂಕರ ದಾಸಿಮಯ್ಯ Next

ವೈದ್ಯ ಸಂಗಣ್ಣ

*
ಅಂಕಿತ: ಮರುಳ ಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ
ಕಾಯಕ: ವೈದ್ಯ

ಮಯೂರನಾಡಿ, ಮಂಡೂಕನಾಡಿ, ಜಳೂಕನಾಡಿ, ಅಹಿವಳಿನಾಡಿ,
ಮಂಡಲಗಮಕನಾಡಿ, ಷಂಡೇತಪಥನಾಡಿ, ದೀರ್ಘನಾಡಿ,
ಅಧಮನಾಡಿ, ಉತ್ತರನಾಡಿ, ಪೂರ್ವನಾಡಿ. ಪಶ್ಚಿಮನಾಡಿ,
ಗಜಗಮನನಾಡಿ, ಹಚ್ಚೋತಿನಾಡಿ, ವಿಕ್ರಮನಾಡಿ, ಸೂತ್ರನಾಡಿ,
ಸಂಚುನಾಡಿ, ಸಂಚಲನಾಡಿ, ಶೈತ್ಯನಾಡಿ, ಉಷ್ಣನಾಡಿ,
ವಿಹಂಗನಾಡಿ, ಕೂರ್ಮನಾಡಿ, ಮರ್ಕಟನಾಡಿ,
ಪಿಪೀಲಿಕಾನಾಡಿ, ದಂಷ್ಟ್ರನಾಡಿ, ಮಕರನಾಡಿ, ಕರ್ಕೋಟಕನಾಡಿ,
ಸಮರಸನಾಡಿ, ಸಂತೋಷನಾಡಿ.
ಇಂತೀ ಪ್ರಥಮನಾಡಿಯೊಳಗಾದ ಶರೀರದಲ್ಲಿ ತೋರುವ ನಾಡಿ
ಜೀರ್ಣ ಪರ್ಣದಂತೆ ರೋಮಕೂಪದಲ್ಲಿ ಸೂಸುವ ವಾಯು,
ಇಂತಿವ ನೋಡಿ ವ್ಯಾಧಿಕ್ರಮವನರಿತೆಹೆನೆಂದಡೆ ಅದಾರಿಗೂ ಅಸಾಧ್ಯ.
ನಾ ಮೂರುನಾಡಿಯ ಬಲ್ಲೆ,
ಉತ್ಪತ್ಯ ಒಂದು ಸ್ಥಿತಿ ಎರಡು, ಲಯ ಮೂರು.
ನಾಳದ ನಾಡಿಯ ಬಲ್ಲೆ, ಭಕ್ತಿಯೆಂಬ ಹಸ್ತವಿಡಿದು ನೋಡಲಾಗಿ.
ಗುರುನಾಡಿ ಉಭಯವ ಕೊಂಡೆಡೆಯಾಡುತ್ತಿದೆ,
ಲಿಂಗನಾಡಿ ತ್ರಿವಿಧಸಂಧಿಯೊಳಗೆ ಸೂಸುತ್ತಿದೆ.
ಜಂಗಮನಾಡಿ ಮೂರರ ಹಂಗು ಬಿಟ್ಟು ಮಹದಲ್ಲಿ ಸಂದಿರುತ್ತದೇಕೊ ?
ಇದು ಲಿಂಗಾಂಗಿಗಳ ವೈದ್ಯ.
ಸಂಗನಬಸವಣ್ಣ ಬಂದಾಗ ಎನ್ನ ಕೊಂಡು ಬಂದ,
ತನ್ನ ವಶಕ್ಕೆ ವೈದ್ಯನೆಂದು.
ಈ ವೈದ್ಯದ ಚೀಲವ ಹೊತ್ತು ಗಸಣಿಗೊಳ್ಳುತ್ತಿದೇನೆ.
ಈ ಕಾಯಕದ ಸೇವೆಯ ಬಿಡಿಸಿ, ಕರಣಪ್ರಸಾದವ ಕೊಟ್ಟು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರಲಿಂಗ ನಿಮ್ಮಡಿಯೊಳಗೆನ್ನನಿರಿಸು.

ವೈದ್ಯ ವೃತ್ತಿಯನ್ನು ಕಾಯಕವಾಗಿ ಸ್ವೀಕರಿಸಿದ್ದ ಸಂಗಣ್ಣ ಶರಣನಾಗಿಯೂ ಉತ್ತಮ ವಚನಗಳನ್ನು ರಚಿಸಿದ್ದಾನೆ. ಕಾಲ-೧೧೬೦. 'ಮರುಳಶಂಕರ ಪ್ರಿಯ ಸಿದ್ಧರಾಮೇಶ್ವರ ಅಂಕಿತದಲ್ಲಿ ೨೧ ವಚನಗಳು ದೊರೆತಿವೆ. ಹೆಚ್ಚಾಗಿ ಎಲ್ಲವೂ ವೈದ್ಯ ವೃತ್ತಿಯ ಪರಿಭಾಷೆಯಲ್ಲಿ ತತ್ವವನ್ನು ಬೋಧಿಸುತ್ತವೆ. ಇಲ್ಲಿ ಉಲ್ಲೇಖಿಸುವ ನಾಡಿಗಳ ವಿವರ, ವ್ಯಾಧಿಗಳ ಬಗೆ, ಔಷಧಗಳ ಪ್ರಕಾರಗಳು ಈತನ ವೈದ್ಯಶಾಸ್ತ್ರ ಪರಿಣತಿಯನ್ನೂ, ಅವುಗಳಿಗೆ ಆತ ಜೋಡಿಸುವ ತಾತ್ವಿಕ ಪರಿವೇಶವನ್ನೂ ಏಕಕಾಲಕ್ಕೆ ಪ್ರಕಟಿಸುತ್ತವೆ.

ವೈದ್ಯ ಸಂಗಣ್ಣ ಶರೀರದ ಕಾಯಿಲೆಗಳ ಉಪಶಮನಕ್ಕೆ ಬಹಿರಂಗದ ಚಿಕಿತ್ಸೆಯ ಜೊತೆಗೆ ಅಂತರಂಗದ ಚಿಕಿತ್ಸೆಯೂ ನಡೆಯಬೇಕೆಂಬುದು ಅವನ ವಚನಗಳ ಆಶಯ. ಶಿವಯೋಗ, ಷಟ್-ಸ್ಥಲಗಳ ವಿವರಣೆಯೂ ಬಂದಿದೆ

ಅಂಗಾಲ ಮೇಲಣ ದೊಡ್ಡಂಗುಷ್ಟ ಮಧ್ಯದಲ್ಲಿ ಪೃಥ್ವಿನಾಡಿ,
ನಾಭಿ ಮೂತ್ರನಾಳದ ನಾಲ್ಕಂಗುಲ ಮಧ್ಯದಲ್ಲಿ ಅಪ್ಪುನಾಡಿ,
ಉಡಸೂತ್ರ ನಾಭಿ ಮೊದಲಾದ
ಪಂಚಾಂಗುಲ ಮಧ್ಯದ ಮೇಲೆಸೆಯಲ್ಲಿ [ತೇಜನಾಡಿ]
ಇಡಾ ಪಿಂಗಳ ಮಧ್ಯದಲ್ಲಿ ವಾಯುನಾಡಿ,
ಸುಷುಮ್ನನಾಳದ ಅಂಗುಲ ನಡುಮಧ್ಯದಲ್ಲಿ ಆಕಾಶಕೈದಿದನಾಡಿ,
ಇಂತೀ ಪಂಚಪಥವನೈದುವ ನಾಡಿಯಲ್ಲಿ ಆಡುವ
ಆತ್ಮನ ವಿವರದ ದೆಸೆಯನರಿದು,
ಇಂತೀ ಐದು ಮುಚ್ಚಿ ಮೇಗಳ ಬ್ರಹ್ಮರಂಧ್ರದಲ್ಲಿಯೆಯಿದರೆಮ್ಮ ವೈದ್ಯರು.
ನಾದ ಬಿಂದು ಕಳೆಗತೀತ ನೋಡಾ,
ಮರುಳಶಂರಪ್ರಿಯ ಸಿದ್ಧರಾಮೇಶ್ವರಲಿಂಗವು.

ನಾನಾ ರೋಗಂಗಳು ಬಂದು ದೇಹವ ಹಿಡಿದಲ್ಲಿ ಶಿವಾರ್ಚನೆಯ ಬೆರಕೊಳ್ಳಿ,
ಸಕಲಪುಷ್ಪಂಗಳಿಂದ ಪೂಜೆಯ ಮಾಡಿಕೊಳ್ಳಿ,
ಪಂಚಾಕ್ಷರಿ ಪ್ರಣಮವ ತಪ್ಪದೆ ತ್ರಿಸಂಧಿಯಲ್ಲಿ ನೆನಹುಗೊಳ್ಳಿ,
ಇವರಿಂದ ರುಜೆದರ್ಪಂಗಡಗು,
ಮರುಳಶಂಕರಪ್ರಿಯ ಸಿದ್ಧರಾಮೇಶ್ವರ ಲಿಂಗ ಸಾಕ್ಷಿಯಾಗಿ.


*
Previous ವೀರಗೊಲ್ಲಾಳ ಶಂಕರ ದಾಸಿಮಯ್ಯ Next